ಕಲಬುರಗಿ: ದೃಢಸಂಕಲ್ಪ ಸಾಧಿಸುವ ಛಲವಿದ್ದರೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಕೌಟುಂಬಿಕ ಆರ್ಥಿಕ ಪರಿಸ್ಥಿತಿ ಸಾಧನೆಗೆ ಸಮಸ್ಯೆಯಾಗುವುದಿಲ್ಲ. ನಾವೇನಾಗಬೇಕೆಂಬುದು ಮನಸ್ಸಿನ ಇಚ್ಛೆಗೆ ಸಂಬಂಧಿಸಿದ್ದು, ಪಾಲಕರ ಪ್ರೋತ್ಸಾಹ, ಕಠಿಣ ಶ್ರಮದಿಂದ ಐ.ಎ.ಎಸ್ ಪರೀಕ್ಷೆ ಪಾಸು ಮಾಡಲು ಸಾಧ್ಯವಾಯಿತು. ಹೆಣ್ಣೆಂಬ ಕೀಳರಿಮೆ ಭಾವನೆ ತೊರೆದು ಶೈಕ್ಷಣಿಕ ಸಾಧನೆ ಮಾಡಿ ಸಮಾಜ ಸೇವೆಗೆ ಸಿದ್ಧರಾಗಿ ಎಂದು ಐ.ಎ.ಎಸ್. ಅಧಿಕಾರಿ ಆಕೃತಿ ಸಾಗರ ತಿಳಿಸಿದರು.
ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ನಗರದ ಎಚ್‌ಕೆಇ ಸಂಸ್ಥೆಯ ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾರತದ ಪ್ರಥಮ ಶಿಕ್ಷಕಿ ಮಾತೋಶ್ರೀ ಸಾವಿತ್ರಿಬಾಯಿ ಫುಲೆ ಸ್ಮಾರಕ ಪ್ರಶಸ್ತಿಯನ್ನು ಶಿಕ್ಷಕರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು.
ಚಿತ್ತಾಪುರ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ವಿಜಯಕುಮಾರ ಸಾಲಿಮನಿ ಉಪನ್ಯಾಸ ನೀಡಿ, ನಿರ್ಗತಿಕ ಬಡ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಹಲವಾರು ಸಮಸ್ಯೆಗಳ ಸವಾಲುಗಳನ್ನು ಎದುರಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದವರು ಸಾವಿತ್ರಿಬಾಯಿ ಫುಲೆ. ಇಂದು ಸ್ತ್ರೀಯರು ಪುರುಷರಿಗೆ ಸಮಾನವಾಗಿ ಸಾಧನೆಯತ್ತ ಹೆಜ್ಜೆ ಹಾಕುತ್ತಿರುವುದಕ್ಕೆ ಕಾರಣ ಫುಲೆ ದಂಪತಿಗಳು ಹಾಗೂ ಡಾ| ಅಂಬೇಡ್ಕರರ ಕೊಡುಗೆ ಕಾರಣ ಎಂದರು.
ಜಿ.ಪಂ.ಸದಸ್ಯ ಅರುಣಕುಮಾರ ಎಂ.ಪಾಟೀಲ ಮಾತನಾಡಿದರು. ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸೇಡಂ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಮಾ ಎಲ್. ಚಿಮ್ಮನಚೋಡಕರ್, ಬಿದನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಾಗೇಂದ್ರಪ್ಪ ಮಾಡ್ಯಾಳೆ, ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ತೇಗಂಪುರನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀದೇವಿ ಹೂಗಾರ, ಆಜಾದಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ವಿಜಯಲಕ್ಷ್ಮೀ ಗಟಾಟೆ, ಸರಡಗಿ (ಬಿ) ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸೋಮು ಎಸ್.ಕುಂಬಾರ ಹಾಗರಗಾ ಅವರನ್ನು ಸನ್ಮಾನಿಸಲಾಯಿತು. ಡಿಡಿಪಿಐ ಶಾಂತಗೌಡ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಎನ್.ಜಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ಎಸ್.ಎಂ.ಪಟ್ಟಣಕರ್, ಶಿವರಾಜ ಎಸ್. ಅಂಡಗಿ, ಕೆ.ಗಿರಿಮಲ್ಲ, ಶಿವಾನಂದ ಮಠಪತಿ, ಬಿ.ಎಂ.ಪಾಟೀಲ ಕಲ್ಲೂರ, ಡಾ| ನಾಗರತ್ನಾ ಬಿ.ದೇಶಮಾನ್ಯೆ, ಶ್ರೀಶೈಲ ಧಮ್ಮೂರೆ ಅಣೂರ, ಲಕ್ಷ್ಮೀನಾರಾಯಣ ಚಿಮ್ಮನಚೋಡಕರ್, ದೇವೇಂದ್ರಪ್ಪ ಗಣಮುಖೀ, ಈಶ್ವರಗೌಡ ಪಾಟೀಲ, ಸೇವಂತಾ ಪ್ರೇಮಸಿಂಗ್, ಜಯಶ್ರೀ
ಚವ್ಹಾಣ, ಪ್ರಕಾಶ, ಡಾ| ಅರುಣಕುಮಾರ ಲಗಶೆಟ್ಟಿ, ಸತೀಶ ಸಜ್ಜನ ಭಾಗವಹಿಸಿದ್ದರು.