ವಿಜಯಪುರ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಶ, ವಿದೇಶಗಳ ಲಕ್ಷಾಂತರ ಭಕ್ತರು ದೇಣಿಗೆ ನೀಡಿದ್ದಾರೆ. ಜ.22 ರಂದು ಲೋಕಾರ್ಪಣೆ ನಡೆಯುವ ಅಯೋಧ್ಯಾ ರಾಮ ಮಂದಿರದಲ್ಲಿ ಸ್ಥಳ ಅಭಾವವಿದೆ. ಹೀಗಾಗಿ ಭಕ್ತರು ಅಯೋಧ್ಯೆಗೆ ಆಗಮಿಸದೆ ಗ್ರಾಮಗಳಲ್ಲಿಯೇ ದೇವಸ್ಥಾನಗಳಲ್ಲಿ ಹೊಮ, ಹವನ, ಪ್ರಸಾದ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಅಯೋಧ್ಯಾ ಶ್ರೀರಾಮ ಮಂದಿರದ ಪರವಾಗಿ ಮನವಿ ಮಾಡಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾರ್ಪಣೆ ಕಾರ್ಯಕ್ರಮದ ನೇರಪ್ರಸಾರದ ವ್ಯವಸ್ಥೆಯಿದ್ದು, ಸ್ಥಳೀಯವಾಗಿ ದೊಡ್ಡ ಪರದೆ ಅಳವಡಿಸಿ, ಲೋಕಾರ್ಪಣೆ ಕಾರ್ಯಕ್ರಮ ವೀಕ್ಷಿಸುವಂತೆ ಮನವಿ ಮಾಡಿದರು.
ಹಿಂದೂಸ್ತಾನದಲ್ಲಿ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿಯಾಗಿದೆ. ಹೀಗಾಗಿ ವಿರೋಧ ಅಥವಾ ಸಂಘರ್ಷದ ಕಾರಣವೇ ಇಲ್ಲ. ಆದರೂ ಕೆಲವು ಯುವಕರು ಯೋಗಿ, ಮೋದಿ ಅಧಿಕಾರದ ಬಳಿಕ ಅಯೋಧ್ಯಾ ಶ್ರೀರಾಮ ಮಂದಿರ ಇರುವುದಿಲ್ಲ ಎಂದು ನೀಡಿರುವ ಹೇಳಿಕೆ ಸರಿಯಲ್ಲ. ಈ ಬಗ್ಗೆ ಆ ಸಮುದಾಯದ ನಾಯಕರು ತಿಳುವಳಿಕೆ ನೀಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಭಾರತದಲ್ಲಿ ಹಿಂದೂ, ಮುಸ್ಲಿಂ ಮಾತ್ರವಲ್ಲ ಎಲ್ಲ ಧರ್ಮೀಯರೂ ಸೌಹಾರ್ದತೆಯಿಂದ ಬದುಕಬೇಕು. ಅಸಾದುದ್ದೀನ್ ಓವೈಸಿ ಅವರಂಥ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಇಂಥ ಸಂದರ್ಭದಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಹಿಂದೂ ರಾಷ್ಟ್ರವಾಗಲು ಬಾಕಿ ಏನಿದೆ ಎಂದು ಪ್ರಶ್ನಿಸಿದ ಪೇಜಾವರ ಶ್ರೀಪಾದರು, ಹಿಂದುಸ್ತಾನದಲ್ಲಿರುವ ನಾವು ಹಿಂದುಸ್ತಾನಿ ಎಂದು ಹೆಮ್ಮೆಯಿಂದ ಹೇಳಬೇಕು. ನಮ್ಮನ್ನು ನಾವು ಹಿಂದುಗಳೆಂದು ಹೇಳಿಕೊಳ್ಳುವುದಕ್ಕೆ ಯಾವ ಸಂವಿಧಾನ ವಿರೋಧಿಸುತ್ತದೆ. ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು ಮಾತ್ರವಲ್ಲ, ಸರ್ವ ಧರ್ಮೀಯರಿಗೂ ಅವಕಾಶ ನೀಡಿದೆ. ಸರ್ವೇಜನ ಸುಖಿನೋ ಭವಂತು ಎನ್ನುವುದೇ ಹಿಂದೂ ಸಿದ್ದಾಂತ ಎಂದರು.
ಜವಾಬ್ದಾರಿ ಸ್ಥಾನದಲ್ಲಿ ಇರುವ ಹರಿಪ್ರಸಾದ್ ಅವರಿಗೆ ಗೋದ್ರಾ ಘಟನೆ ಮಾದರಿ ವಿಧ್ವಂಸಕ ಕೃತ್ಯ ನಡೆಯುವ ಅವರಿಗೆ ಅಧಿಕೃತ ಮಾಹಿತಿ ಇದೆ ಎನಿಸುತ್ತದೆ. ವಿಧ್ವಂಸಕ ಕೃತ್ಯ ನಡೆಯುವ ಮೊದಲೇ ಅವರು ಇಲಾಖೆಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಯೋಧ್ಯಾ ಶ್ರೀರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದಲ್ಲ ದೇಶದಲ್ಲಿ ಎಷ್ಟು ಜನ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ಪ್ರಶ್ನಿಸಿದರು.