ದೇವನಹಳ್ಳಿ: ಮುಂಗಾರು ಮಳೆ ಕೊರತೆಯಿಂದಾಸಗಿ ಈಗಾಗಲೇ ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ 937 ಹಳ್ಳಿಗಳ ಪೈಕಿ 33 ಗ್ರಾಮಗಳಿಗೆ ಟ್ಯಾಂಕರ್‌ಗಳಿಂದ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಕೊಯ್ಲು ಅಳವಡಿಸದಿದ್ದರೆ ನೀರಿಲ್ಲ, ನೀರಿಲ್ಲದಿದ್ದರೆ ಭವಿಷ್ಯವೇ ಇಲ್ಲ ಎಂದು ಜಿಲ್ಲಾಧಿಕಾರಿ ಸಿ.ಎಸ್. ಕರೀಗೌಡ ತಿಳಿಸಿದರು. ತಾಲೂಕಿನ ಚಪ್ಪರದಕಲ್ಲು ಸರ್ಕಲ್‌ನಲ್ಲಿರುವ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಳೆ ಕೊಯ್ಲು ಸಂಬಂಧಿಸಿದಂತೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಮಳೆ ಕೊಯ್ಲಿಗೆ ನೋಟಿಸ್: ಜಿಲ್ಲೆಯಲ್ಲಿ ನೀರು ಸಂಗ್ರಹಣೆಗೆ ಇರುವ ಏಕೈಕ ಮಾರ್ಗ ಮಳೆಕೊಯ್ಲು ಆಗಿದೆ. ನಗರ ಪ್ರದೇಶದಲ್ಲಿ 13,124 ಕಟ್ಟಡಗಳಿಗೆ ಮಳೆಕೊಯ್ಲು ಅಳವಡಿಸಿಕೊಳ್ಳಲು ನೊಟೀಸ್ ನೀಡಲಾಗಿದೆ. ಸರ್ಕಾರಿ ಕಚೇರಿಗಳಲ್ಲಿರುವ ಕಟ್ಟಡಗಳು ಮಾತ್ರವಲ್ಲದೆ ವಾಣಿಜ್ಯ ಕಟ್ಟಡಗಳಲ್ಲಿ ಮಳೆ ಕೊಯ್ಲು ಕಡ್ಡಾಯ ಮಾಡಲಾಗಿದೆ. 1200 ಅಡಿಗಳಿಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ವಾಣಿಜ್ಯ ಕಟ್ಟಡಗಳಲ್ಲಿ ಮಳೆ ಕೊಯ್ಲು ಅನುಷ್ಠಾನ ಕಡ್ಡಾಯಗೊಳಿಸಲಾಗಿದೆ. 234 ಖಾಸಗಿ ಶಾಲೆಗಳಲ್ಲೂ ಮಳೆಕೊಯ್ಲು ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ. ಹೊಸಕೋಟೆ ತಾಲೂಕಿನಲ್ಲಿ 76 ಶಾಲೆಗಳ ಪೈಕಿ 25 ಶಾಲೆಗಳಲ್ಲಿ ಈಗಾಗಲೇ ಮಳೆಕೊಯ್ಲು ಅಳವಡಿಸಲಾಗಿದೆ ಎಂದು ಹೇಳಿದರು.
ಮಳೆ ನೀರು ಸಂಗ್ರಹವೇ ಪರಿಹಾರ: ಜಿಲ್ಲೆಯಲ್ಲಿ 41 ಖಾಸಗಿ ಆಸ್ಪತ್ರೆಗಳಿದ್ದು, ಇವುಗಳಲ್ಲಿ 22ರಲ್ಲಿ ಮಳೆ ಕೊಯ್ಲು ಅಳವಡಿಸಲಾಗಿದೆ. 54ಕ್ಕೂ ಹೆಚ್ಚು ಕಲ್ಯಾಣ ಮಂಟಪಗಳಿದ್ದು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಒಂದರಲ್ಲೇ 13 ಕಲ್ಯಾಣ ಮಂಟಪಗಳಲ್ಲಿ ಮಳೆಕೊಯ್ಲು ಅಳವಡಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಕೆರೆ ಕುಂಟೆಗಳಲ್ಲಿ ನೀರು ಸಂಗ್ರಹಣೆ ಮಾಡಲು ರೈತರು ಗಮನ ಹರಿಸಬೇಕು. ಮಳೆ ನೀರು ಸಂಗ್ರಹಿಸುವುದರಿಂದ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.
ನೀಲಗಿರಿ, ಜಾಲಿ ಮರ ತೆರವುಗೊಳಿಸಿ: ಮಳೆಗಾಲ ಪ್ರಾರಂಭವಾಗುವ ಹಿನ್ನಲೆಯಲ್ಲಿ ನೀರು ಸಂಗ್ರಹಣೆಗಾಗಿ ಕೆರೆಗಳಲ್ಲಿರುವ ಜಾಲಿ ಮರ ತೆರವುಗೊಳಿಸುವಂತೆ ಗ್ರಾಪಂ ಪಿಡಿಒಗಳಿಗೆ ತಿಳಿಸಲಾಗಿದೆ. ಜಾಲಿ ಮರಗಳನ್ನು ತೆರವುಗೊಳಿಸುವಂತೆ ಎರಡು ಮೂರು ವರ್ಷಗಳಿಂದ ಜಿಪಂ ಸಭೆಯಲ್ಲಿ ಒತ್ತಾಯಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದೆ. ಇದರಿಂದಾಗಿ 360ಗ ಎಕರೆ ವಿಸ್ತೀರ್ಣ ಹೊಂದಿರುವ ಮಜ್ಜಿಗೆ ಹೊಸಹಳ್ಳಿಯ ಕೆರೆಗಳಲ್ಲಿನ ಜಾಲಿ ಮರ ತೆರವುಗೊಳಿಸುವ ಬಗ್ಗೆ ಪಿಡಿಒಗಳಿಗೆ ಸೂಚಿಸಲಾಗಿದೆ.
ಕೆರೆಗಳಲ್ಲಿರುವ ಮರಗಳ ಅಂದಾಜು ಮೌಲ್ಯ ಸಿದ್ಧಪಡಿಸಿ 15 ದಿನಗಳಲ್ಲಿ ಹರಾಜು ಹಾಕಬೇಕು. ನೀಲಗಿರಿ ಮತ್ತು ಜಾಲಿ ಮರಗಳಿಂದ ಅಂತರ್ಜಲ ಬತ್ತಿಹೋಗುತ್ತಿದೆ. ಜಾಲಿ ಮರಗಳು ಕೆರೆಗಳಲ್ಲಿ ಬೆಳೆದಿದ್ದು, ನೀರು ಸಂಗ್ರಹಕ್ಕೆ ತೊಂದರೆಯಾಗುತ್ತಿರುವುದರಿಂದ ಮರಗಳ ತೆರವಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಡಾ.ಕೆ.ಜಗದೀಶ್ ನಾಯಕ್, ಅಧಿಕಾರಿಗಳು ಇದ್ದರು.