ಉಪ್ಪಿಟ್ಟು ಅಂದರೆ ಬಹಳಷ್ಟು ಮಂದಿ ಮೂಗುಮುರಿಯುತ್ತಾರೆ ನೋಡಿ! “”ಅಯ್ಯೋ ಇವತ್ತು ಉಪ್ಪಿಟ್ಟಾ” ಅಂತಾ ಮುಖ ಸೊಟ್ಟ ಮಾಡಿ, ತುಟಿ ವಕ್ರ ಮಾಡಿ ರಾಗ ಎಳೆಯುವುವರನ್ನು ಬಹಳಷ್ಟು ಮನೆಗಳಲ್ಲಿ ಕಾಣಬಹುದು. ಅದೊಂದು ಕಾಂಕ್ರೀಟ್ ಎಂದು ಹೀಯಾಳಿಸುವುದುಂಟು. ತಿಂದರೆ ಮತ್ತೆ ಹೊಟ್ಟೆ ಹಸಿಯುವುದೇ ಇಲ್ಲ ಎಂದು ಮೂದಲಿಸುವುದನ್ನು ಕೇಳಿದರೆ ಅದನ್ನು ಧನಾತ್ಮಕವಾಗಿ ತೆಗೆದುಕೊಳ್ಳಬೇಕೋ, ಋಣಾತ್ಮಕವಾಗಿ ತೆಗೆದುಕೊಳ್ಳಬೇಕೋ ತಿಳಿಯುವುದಿಲ್ಲ. ಮಧುಮೇಹ ರೋಗಿಗಳ, ಬೊಚ್ಚುಬಾಯಿ ಹಿರಿಯರ ಅಚ್ಚುಮೆಚ್ಚಿನ ತಿನಿಸು ಈ ಉಪ್ಪಿಟ್ಟನ್ನು ಕೆಲವರು (ಬಹುತೇಕ) ಅದ್ಯಾಕೆ ಅಷ್ಟು ದ್ವೇಷಿಸುತ್ತಾರೋ ಗೊತ್ತಿಲ್ಲ.
ಆದರೆ, ನಮ್ಮ ಮನೆಯಲ್ಲಿ ಹಾಗಲ್ಲ ನೋಡಿ, ವಾರಕ್ಕೆ ಮೂರು ದಿನವಾದರೂ ಉಪ್ಪಿಟ್ಟು ಬೆಳಗ್ಗಿನ ತಿಂಡಿಗೆ ಇರಲೇಬೇಕು. ಎಲ್ಲರೂ ತಿಂದು ಮತ್ತೂಂದಿಷ್ಟು ಉಳಿದರೆ ಸಾಯಂಕಾಲ ಅದನ್ನು ಸಣ್ಣ ಉರಿಯಲ್ಲಿ ಬಿಸಿಮಾಡಿ, ಬಾಣಲೆಯ ತಳಕ್ಕೆ ಕೆಂಪಗೆ ಹೊತ್ತಿದ ಅದನ್ನು ಸವುಟು ಹಾಕಿ ಕೆರೆದು ರವೆ ದೋಸೆಯ ಹಾಗೆ ರುಚಿಯಾಗಿರುವ ಅಕ್ಕಳಿಕೆಗಳನ್ನು ತಿನ್ನಲು ಮನೆಯಲ್ಲಿ ಪೈಪೋಟಿ ನಡೆಸುತ್ತಾರೆ. ಒಮ್ಮೊಮ್ಮೆ ಉಪ್ಪಿಟ್ಟಿಗೆ ಗರಂ ಮಸಾಲಾ ಹಾಕಿಕೊಂಡೋ, ಇಲ್ಲವೇ ತರಕಾರಿಗಳನ್ನು ಒಗ್ಗರಣೆ ಹಾಕಿ ಫ್ರೆ„ಡ್ ರೈಸ್ ತರಹ ಮಾಡಿಕೊಂಡೋ, ಒಟ್ಟಿನಲ್ಲಿ ಉಪ್ಪಿಟ್ಟಿನ ಬಾಣಲೆ ಅಂತೂ ನುಣ್ಣಗೆ ಬಳಿದು ಖಾಲಿ ಮಾಡಿಬಿಡುತ್ತಾರೆ. ಅವರೆಕಾಯಿ ಕಾಲದಲ್ಲಂತೂ ಉಪ್ಪಿಟ್ಟನ್ನು ಬರೀ ಅವರೇಕಾಳುಗಳೇ ಅಲಂಕರಿಸಿರುತ್ತವೆ.
ಉಪ್ಪಿಟ್ಟು ಮಾಡುವುದು ಬಲು ಸುಲಭ. ಆದರೆ, ಅದಕ್ಕೆ ಬೀಳುವ ಸಾಮಾನುಗಳು ಸ್ವಲ್ಪ$ಹೆಚ್ಚಿದ್ದರೆ ಮಾತ್ರ ಅದಕ್ಕೊಂದು ಸೊಗಸು. ರವೆಯನ್ನು ಸಣ್ಣಗೆ ತುಪ್ಪದಲ್ಲಿ ಹೊಂಬಣ್ಣ ಬರುವವರೆಗೆ “ಘಮ್’ಎನ್ನುವ ಹಾಗೆ ಹುರಿಯಬೇಕು. ಆಗಮಾತ್ರ ಗಂಟು ಬೀಳುವುದಿಲ್ಲ ನೋಡಿ. ಇನ್ನು ಇದಕ್ಕೆ ಎಣ್ಣೆಯಂತೂ ಹೆಚ್ಚಿಗೆ ಇದ್ದಷ್ಟೂ ರುಚಿ ಹೆಚ್ಚು. ಉಪ್ಪು$, ಹುಳಿ, ಖಾರ ಎಲ್ಲವನ್ನು ಹೆಚ್ಚಿಗೆ ಬೇಡುವ ಉಪ್ಪಿಟ್ಟು ತಿಂದಾಗ ನೆಕ್ಕುವಂತೆ ಮಾಡುವುದು ಬಟ್ಟು. ಅದರಲ್ಲೂ ಬಿಸಿ ಇದ್ದಾಗ ಅದರ ರುಚಿ ಉಂಡವನೇ ಬಲ್ಲ. ಜೊತೆಗೆ ಒಂದಿಷ್ಟು ಗಟ್ಟಿ ಮೊಸರು, ನೆಂಚಿಕೊಳ್ಳಲು ಕಡ್ಲೆ ಚಟ್ನಿಪುಡಿ, ಉಪ್ಪಿನಕಾಯಿ, ಒಂದಿಷ್ಟು ಪಕೋಡವೋ, ಮಿರ್ಚಿಯೋ ಇದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಾಗುತ್ತದೆ. ಹಿಂದಿನ ಕಾಲದಲ್ಲಿ ಜವೆಗೋಧಿಯ ಉಪ್ಪಿಟ್ಟು ಹೆಚ್ಚು ಮಾಡುತ್ತಿದ್ದರು. ಆದರೆ ಇಂದಿನ ಕಾಲದವರು ಸಣ್ಣರವೆ ಅಥವಾ ಬನ್ಸಿ ರವೆಯನ್ನು ಇಷ್ಟಪಡುವುದೇ ಹೆಚ್ಚು. ಕೆಲವರು ಉದುರುದುರಾಗಿ, ಕೆಲವರು ಪಾಯಸದಂತೆ ಸ್ವಲ್ಪ$ಮೆತ್ತಗೆ ತಿನ್ನಲು ಇಷ್ಟಪಡುತ್ತಾರೆ. ಹಲ್ಲಿಲ್ಲದ ಮುದುಕರಿಗೆ ಪರಮಾಪ್ತ ಈ ಉಪ್ಪಿಟ್ಟು.
ಉಪ್ಪಿಟ್ಟಿಗೆ ಯಾರು ಎಷ್ಟೇ ಋಣಾತ್ಮಕ ಕಮೆಂಟು ಕೊಟ್ಟರೂ ಮುಂಜಾನೆಯ ತಿಂಡಿಯಲ್ಲಿ ಅಗ್ರಸ್ಥಾನ ಪಡೆದಿರುವುದು ಉಪ್ಪಿಟ್ಟೇ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಯಾವ ತಿಂಡಿ ಮಾಡುವುದು ಎಂದು ಒಮ್ಮೊಮ್ಮೆ ತಲೆಕೆಟ್ಟರೆ ಮೊದಲು ಹೊಳೆಯುವುದೇ ಉಪ್ಪಿಟ್ಟು. ಅವಸರಕ್ಕೆ, ಅನಿರೀಕ್ಷಿತ ಅತಿಥಿ ಸತ್ಕಾರಕ್ಕೆ ಗೃಹಿಣಿಯರಿಗೆ ಆಸರೆಯಾಗುವುದು ಇದೇ ಉಪ್ಪಿಟ್ಟು. ಅತಿಥಿಗಳಿಗೆ ಒಂದೈದು ನಿಮಿಷ ಕುಳಿತುಕೊಳ್ಳಿ ಉಪ್ಪಿಟ್ಟು ತಿರುವಿಕೊಂಡು ಬರುತ್ತೇನೆ ಅಂತಾ ಸರಸರನೆ ಗ್ಯಾಸಿನ ಮೇಲೆ ಒಂದು ಕಡೆ ಒಗ್ಗರಣೆಗೆ ಬಾಣಲೆ, ಮತ್ತೂಂದೆಡೆ ಕುದಿಯಲು ನೀರು ಇಟ್ಟು ಹತ್ತು ನಿಮಿಷದಲ್ಲೇ ಉಪ್ಪಿಟ್ಟು ತಯಾರಿಸಿಬಿಡುತ್ತಾರೆ. ಅದರಲ್ಲೂ ಉಪ್ಪಿಟ್ಟು-ಶಿರಾ ಅಂದರೆ ಗ್ರೇಟ್ ಕಾಂಬಿನೇಷನ್. ಕನ್ಯೆ ನೋಡಲು ಹೋದಾಗ ವರನ ಕಡೆಯವರಿಗೆ ಅತಿಥಿ ಸತ್ಕಾರದಲ್ಲಿ ಬಹಳಷ್ಟು ಮನೆಗಳಲ್ಲಿ ಬಡಿಸುವುದೇ ಉಪ್ಪಿಟ್ಟು-ಶಿರಾ. ಬಿಸಿ ಉಪ್ಪಿಟ್ಟನ್ನು ದುಂಡನೆಯ ಬಟ್ಟಲಿನಲ್ಲಿ ಒತ್ತಿ ನಂತರ ಅಚ್ಚನ್ನು ತಟ್ಟೆಯಲ್ಲಿ ಬೋರಲು ಹಾಕಿ ಅದರೆ ಮೇಲೆ ಹಸಿಕಾಯಿತುರಿ, ಕೊತಂಬರಿ ಸೊಪ್ಪು, ಸಣ್ಣನೆಯ ಸೇವು ಉದುರಿಸಿ ಅಲಂಕರಿಸಿದ ಉಪ್ಪಿಟ್ಟನ್ನು ಕೊಟ್ಟಾಗ, ಕನ್ಯೆಯ ಅಲಂಕಾರ ಹೆಚ್ಚೋ, ಉಪ್ಪಿಟ್ಟಿನ ಅಲಂಕಾರ ಹೆಚ್ಚೋ ಎಂದು ವರಮಹಾಶಯ ಗಾಬರಿಬೀಳುವಂತಾಗುತ್ತದೆ. ವಧುವನ್ನು ಪರಿಚಯಿಸುವಾಗಲೂ ಅಷ್ಟೆ ನಮ್ಮ ಹುಡುಗಿಗೆ ಅಡುಗೆ ಅಷ್ಟು ಸರಿಯಾಗಿ ಬರುವುದಿಲ್ಲ, ಉಪ್ಪಿಟ್ಟು-ಗಿಪ್ಪಿಟ್ಟು ಮಾಡೋದು ಒಂದಿಷ್ಟು ಕಲಿತಿದ್ದಾಳೆ ಅಷ್ಟೆ ಎನ್ನುವವರೇ ಹೆಚ್ಚು. ಮದುವೆ, ಮುಂಜಿ ಹೀಗೆ ಪ್ರತಿಯೊಂದು ಸಮಾರಂಭಗಳಲ್ಲಿ ಬೆಳಗಿನ ತಿಂಡಿಗೆ ಉಪ್ಪಿಟ್ಟು-ಶಿರಾಕ್ಕೇ ಮೊದಲ ಆದ್ಯತೆ.
ಈ ಉಪ್ಪಿಟ್ಟು-ಶಿರಾ ಅಂದ ತಕ್ಷಣ ಸಣ್ಣ ಘಟನೆ ನೆನಪಾಗುತ್ತದೆ ನೋಡಿ. ಚಿಕ್ಕವರಿದ್ದಾಗ ಮನೆಯಲ್ಲಿ ಉಪ್ಪಿಟ್ಟು ಬಹಳ ಮಾಡುತ್ತಿದ್ದರಿಂದ ಒಂದು ದಿನ ಉಪ್ಪಿಟ್ಟು ಬೇಡಾ ಎಂದು ಹಠ ಮಾಡಿ ಅಜ್ಜನ ಜೊತೆ ಹೊಟೇಲ್ಲಿಗೆ ಹೋಗಿದ್ದೆ. “ತಿಂಡಿ ಏನಿದೆ’ ಎಂದು ಕೇಳಿದಾಗ ವೇಟರ್, “ದೋಸೆ, ಇಡ್ಲಿ, ಚೌಚೌ ಬಾತ್’ ಎಂದಿದ್ದ. “ಚೌ ಚೌ ಬಾತ್’ ಹೆಸರು ಕೇಳಿ ಇದ್ಯಾವುದೋ ಹೊಸ ತಿಂಡಿ ಇರಬೇಕೆಂದು ಅಜ್ಜನಿಗೆ ಅದನ್ನೇ ಕೊಡಿಸು ಎಂದು ದುಬಾಲು ಬಿದ್ದೆ. ಅವರಿಗೂ ಹೊಟೇಲಿನ ಹೊಸ ಹೊಸ ತಿಂಡಿಗಳ ಹೆಸರು ಗೊತ್ತಿರದಿದ್ದರಿಂದ ಅದನ್ನೇ ಆರ್ಡರ್ ಮಾಡಿದರು. ಸ್ವಲ್ಪ ಹೊತ್ತಿಗೆ ಹಬೆಯಾಡುವ ಉಪ್ಪಿಟ್ಟು-ಶಿರಾ ಬಂದಾಗ “ಇದಲ್ಲ ಚೌಚೌ ಬಾತ್ ಕೇಳಿದ್ದು’ ಎಂದೆ. ಚೌಚೌ ಬಾತ್ ಅಂದರೆ ಇದೇನೇ ಎಂದು ವೇಟರ್ ಹೇಳಿದಾಗ ಸಪ್ಪಗೆ ತೆಪ್ಪಗೆ ಕುಳಿತು “ನನಗಿದು ಬೇಡ’ ಎಂದು ಸಿಟ್ಟಿನಿಂದ ನೂಕಿದ್ದೆ. ಪಾಪ! ಅಜ್ಜ ಅದನ್ನು ತಾವೇ ತಿಂದು ನನಗೆ ಮಸಾಲೆದೋಸೆ ಆರ್ಡರ್ ಮಾಡಿದ್ದರು. ಉಪ್ಪಿಟ್ಟಿಗೆ ಉಪಾ¾, ಖಾರಾಬಾತ್ ಅಂತಾ ಮತ್ತೂಂದೆರಡು ಹೆಸರುಗಳಿಂದಲೂ ಕರೆಯುತ್ತಾರೆ. ಹೇಗೆಲ್ಲ ಕರೆದರೂ ಉಪ್ಪಿಟ್ಟು ಅನ್ನುವುದು ಅದರ ಜನ್ಮನಾಮ ಇದ್ದ ಹಾಗೆ ಅಲ್ಲವೆ? ಉಪ್ಪಿಟ್ಟಿಗೆ ಸರಿಸಾಟಿ ಉಪ್ಪಿಟ್ಟೇ ಸೈ, ಹೌದು ತಾನೇ?
ನಳಿನಿ ಟಿ. ಭೀಮಪ್ಪ