Advertisement

ನಿಫಾ ಸೋಂಕು ಇಲ್ಲ; ಡಿಸಿ ಸೆಂಥಿಲ್‌

03:20 AM May 25, 2018 | Team Udayavani |

ಮಂಗಳೂರು: ನಗರದ ಎರಡು ಆಸ್ಪತ್ರೆಗಳಲ್ಲಿ ದಾಖಲಾಗಿರುವ ಇಬ್ಬರು ರೋಗಿಗಳನ್ನು ‘ನಿಫಾ’ ವೈರಸ್‌ ಬಾಧಿಸಿಲ್ಲ ಎಂಬುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಆದ್ದರಿಂದ ಜಿಲ್ಲೆಯಲ್ಲಿ ಜನರು ಆತಂಕಪಡಬೇಕಿಲ್ಲ ಎಂದು ಡಿಸಿ ಶಶಿಕಾಂತ್‌ ಸೆಂಥಿಲ್‌ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ ಅವರು, ಮಂಗಳೂರಿನಲ್ಲಿ ‘ನಿಫಾ’ ಸಂಶಯದ ಮೇಲೆ ಇಬ್ಬರು ರೋಗಿಗಳ ಗಂಟಲಿನ ದ್ರವವನ್ನು ಮಣಿಪಾಲ ಆಸ್ಪತ್ರೆಗೆ ಪಿಸಿಆರ್‌ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಬ್ಬರು ‘ನಿಫಾ’ ಶಂಕಿತರಲ್ಲಿ ಓರ್ವ ಕಲ್ಲಿಕೋಟೆ ವೈದ್ಯಕೀಯ ಕಾಲೇಜಿನ ಸಿಬಂದಿಯಾಗಿದ್ದು, ಹೆಚ್ಚಿನ ವೈದ್ಯಕೀಯ ಪರೀಕ್ಷೆ ಮಾಡಿಸುವ ಉದ್ದೇಶದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. 

Advertisement

ಮತ್ತೂಬ್ಬರು ಸ್ಥಳೀಯರು. ಗುರುವಾರ ಬೆಳಗ್ಗೆ ಇವರಿಬ್ಬರ ಗಂಟಲಿನ ಸ್ಯಾಂಪಲ್‌ ಕುರಿತ ವರದಿ ಬಂದಿದ್ದು, ಇಬ್ಬರಲ್ಲೂ ನಿಫಾ ಸೋಂಕು ಪತ್ತೆಯಾಗಿಲ್ಲ. ಒಂದೆರಡು ದಿನ ಅವರ ಮೇಲೆ ಹೆಚ್ಚಿನ ನಿಗಾ ವಹಿಸುವ ಉದ್ದೇಶದಿಂದ ತೀವ್ರ ನಿಗಾ ಘಟಕದಲ್ಲೇ ಇರಿಸಿಕೊಳ್ಳಲಾಗುವುದು. ಜತೆಗೆ ಅವರಿಗೆ ಯಾವ ರೀತಿಯ ಜ್ವರ ಬಾಧಿಸಿದೆ ಎಂಬ ಬಗ್ಗೆಯೂ ಪರೀಕ್ಷೆಗೆ ಒಳಪಡಿಸಿದ ಅನಂತರಷ್ಟೇ ಬಿಡುಗಡೆಗೊಳಿಸಲಾಗುವುದು ಎಂದರು.

ತೀವ್ರ ನಿಗಾ
ಜಿಲ್ಲೆಯಲ್ಲಿ ನಿಫಾ ಪ್ರಕರಣಗಳು ಕಂಡು ಬಂದಿಲ್ಲವಾದರೂ ಜಿಲ್ಲಾಡಳಿತ ತೀವ್ರ ನಿಗಾ ಇರಿಸಿದೆ. ಜಿಲ್ಲೆಯ ಎಲ್ಲ ಸರಕಾರಿ ಮತ್ತು ಖಾಸಗಿ ವೈದ್ಯರ ಜತೆ ಸಂಪರ್ಕ ಇರಿಸಿಕೊಂಡಿದ್ದು ಶಂಕಿತ ಪ್ರಕರಣಗಳು ಕಂಡುಬಂದರೆ ತತ್‌ ಕ್ಷಣ ಮಾಹಿತಿ ನೀಡುವಂತೆ ಕೋರಲಾಗಿದೆ. ಶಂಕಿತ ಪ್ರಕರಣಗಳು ಕಂಡುಬಂದಲ್ಲಿ ಅವರನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಗಳಲ್ಲಿ ವಿಶೇಷ ನಿಗಾ ಘಟಕವನ್ನು ಸಿದ್ಧವಾಗಿರಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಗಾಳಿಯಿಂದ ಹರಡುವುದಿಲ್ಲ 
ನಿಫಾ ವೈರಸ್‌ ಗಾಳಿಯ ಮೂಲಕ ಒಬ್ಬರಿಂದ ಮತ್ತೂಬ್ಬರಿಗೆ ಹರಡುವುದಿಲ್ಲ. ಪ್ರಾಣಿಗಳಿಂದ ಮನುಷ್ಯನಿಗೆ ಹರಡುವ ಸೋಂಕು ಇದಾಗಿದ್ದು, ಸೋಂಕು ಹೊಂದಿದ ರೋಗಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರೆ ಮಾತ್ರ ಅಂಥವರಿಗೆ ತಗಲುವ ಸಾಧ್ಯತೆಗಳು ಹೆಚ್ಚು. ದ.ಕ. ಜಿಲ್ಲೆಯಲ್ಲಿ ಈವರೆಗೆ ಯಾವುದೇ ನಿಫಾ ಪ್ರಕರಣ ಪತ್ತೆಯಾಗಿಲ್ಲ. ಜಿಲ್ಲೆಗೆ ಹೊಂದಿಕೊಂಡಿರುವ ಕೇರಳ ಗಡಿಯಲ್ಲಿ ಇಲ್ಲಿವರೆಗೆ ನಿಫಾ ವೈರಸ್‌ ಬಾಧಿಸಿರುವ ಬಗ್ಗೆ ವರದಿಯಾಗಿಲ್ಲ ಎಂದರು.

ವದಂತಿಗಳಿಗೆ ಕಿವಿಗೂಡಬೇಡಿ
ನಿಫಾ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವದಂತಿ, ಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಯಾವುದೇ ಸಂದೇಹಗಳಿದ್ದರೆ ಜಿಲ್ಲಾಡಳಿತವನ್ನು ಸಂಪರ್ಕಿಸಿ ಖಚಿತಪಡಿಸಿಕೊಳ್ಳಬೇಕು ಎಂದವರು ಕೋರಿದರು.

Advertisement

ಅರಿವು ಅಗತ್ಯ
ನಿಫಾ ವೈರಸ್‌ ಜ್ವರದ ಚಿಹ್ನೆಗಳು ಮತ್ತು ಲಕ್ಷಣಗಳ ಬಗ್ಗೆ ಅರಿವು ಹೊಂದುವುದು ಅಗತ್ಯ. ನಿಫಾ ಬಾಧಿತರಲ್ಲಿ ಜ್ವರ, ತಲೆನೋವು, ವಾಂತಿ, ನಡುಕ, ನಿದ್ರಾಲಸ್ಯ, ತೊದಲುವಿಕೆ, ಪ್ರಜ್ಞಾಹೀನತೆ ಕಂಡುಬರುತ್ತದೆ. ಹಂದಿ, ಕುದುರೆ, ನಾಯಿ ಮತ್ತು ಬೆಕ್ಕುಗಳಂತಹ ಸೋಂಕು ಹರಡುವ ಜಾನುವಾರುಗಳನ್ನು ಪ್ರತ್ಯೇಕವಾಗಿಡಬೇಕು. ಶಂಕಿತ‌ ಮನುಷ್ಯ ಪ್ರಕರಣಗಳನ್ನು ಪ್ರತ್ಯೇಕವಾಗಿಡಬೇಕು. ರೋಗಿಗಳು ಬಳಸುವ ವಸ್ತುಗಳನ್ನು ಪ್ರತ್ಯೇಕವಾಗಿ ಸಾಬೂನು ನೀರು ಬಳಸಿ ಶುಚಿಗೊಳಿಸ ಬೇಕು. ಹಸ್ತಲಾಘವ ಮಾಡುವುದನ್ನು ತಪ್ಪಿಸಬೇಕು ಹಾಗೂ ಸೋಂಕಿತ ಜನರ ಸಂಪರ್ಕಕ್ಕೆ ಬಂದ ಅನಂತರ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಬೇಕು. ಎಲ್ಲ ರೀತಿಯ ಹಣ್ಣುಗಳನ್ನು ಚೆನ್ನಾಗಿ ತೊಳೆದು, ಸಿಪ್ಪೆ ಸುಲಿದು ಅಥವಾ ಬೇಯಿಸಿ ತಿನ್ನಬೇಕು. ಫ್ಲೂ- ರೀತಿಯ ಲಕ್ಷಣಗಳು ಕಂಡು ಬಂದರೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು. ರೋಗಿಗಳನ್ನು ಉಪಚರಿಸುವಾಗ ಮಾಸ್ಕ್ ಮತ್ತು ಕೈಗವಸುಗಳನ್ನು (ಗ್ಲೌಸ್‌) ತಪ್ಪದೇ ಬಳಸಬೇಕು. ನೆರವು ಅವಶ್ಯವಿದ್ದಲ್ಲಿ 104ಕ್ಕೆ ಕರೆ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ 40 ಡೆಂಗ್ಯೂ ಪ್ರಕರಣ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2018ನೇ ಸಾಲಿನ ಜನವರಿಯಿಂದ ಈವರೆಗೆ ಒಟ್ಟು 40 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಇಳಿಮುಖವಾಗಿದೆ. ಕಳೆದ ವರ್ಷ ಡಿಸೆಂಬರ್‌ ವರೆಗೆ 163 ಪ್ರಕರಣ ಪತ್ತೆಯಾಗಿದ್ದವು. ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ| ರಾಜೇಶ್‌ ವಿವರಿಸಿದರು. 

ಮಣಿಪಾಲದಲ್ಲಿ  ಹೆಲ್ಪ್ ಡೆಸ್ಕ್
ಉಡುಪಿ: ಕೇರಳದಿಂದ ಬರುವವರ ಪೈಕಿ ನಿಫಾ ಸೋಂಕಿತರಿದ್ದಲ್ಲಿ ಚಿಕಿತ್ಸೆ ನೀಡಲು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸ್ಕ್ರೀನಿಂಗ್‌ ಸೆಂಟರ್‌, ಹೆಲ್ಪ್ ಡೆಸ್ಕ್ ತೆರೆಯಲಾಗುತ್ತಿದೆ. ಆಸ್ಪತ್ರೆಯಲ್ಲಿ ಸಹಾಯವಾಣಿ (080- 2922761) ಆರಂಭಗೊಂಡಿದ್ದು, ಶುಕ್ರವಾರದಿಂದ ಸಿಂಗಲ್‌ ವಿಂಡೋ ವ್ಯವಸ್ಥೆ ಅಡಿ 4 ತಜ್ಞ ವೈದ್ಯರು, ದಾದಿಯರು ಮಾಹಿತಿ ನೀಡುವರು.

ನಿಫಾಗೆ ರಿಬಾವೈರಿನ್‌ ಮಾತ್ರೆ ನೀಡುತ್ತಿದ್ದರೂ ಇದು ಶೇ. 100 ಪರಿಣಾಮಕಾರಿಯಲ್ಲ. ರೋಗಿಗಳಿಗೆ ಸಪೋರ್ಟಿವ್‌ ಕೇರ್‌ ಮಾತ್ರವೇ ಮುಖ್ಯ ಚಿಕಿತ್ಸೆಯಾಗಿದೆ.
– ಡಾ| ಅರುಣ್‌ ಕುಮಾರ್‌, MCVR ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next