Advertisement

ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ

01:05 AM Nov 28, 2018 | Karthik A |

ಹೆಬ್ರಿ : ಸುಸಜ್ಜಿತ ಕಟ್ಟಡ ಹೊಂದಿರುವ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ತೀವ್ರವಾಗಿದ್ದು, ರೋಗಿಗಳು ಚಿಕಿತ್ಸೆಗಾಗಿ ದಿನವಿಡೀ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.  ಇಲ್ಲಿ ಈ ಹಿಂದೆ ನಾಲ್ಕು ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ರಾಜೀನಾಮೆ ನೀಡಿ ಹಲವು ತಿಂಗಳಾಗಿವೆ. ಇನ್ನು ಮತ್ತೂಬ್ಬರು ರಜೆಯಲ್ಲಿರುವ ಕಾರಣ ರೋಗಿಗಳು ಪರದಾಡುವಂತಾಗಿದೆ.

Advertisement

ಒಬ್ಬರಿಂದಲೇ ಸೇವೆ 
ಸದ್ಯ ಓರ್ವ ವೈದ್ಯರ ಮೇಲೆಯೇ ಒತ್ತಡ ಹೆಚ್ಚಿದ್ದು ನೂರಾರು ರೋಗಿಗಳನ್ನು ನೋಡಬೇಕಾಗಿದೆ. ಎಲ್ಲ ಜವಾಬ್ದಾರಿ ಅವರ ಮೇಲಿರುವುದರಿಂದ ನಿಭಾಯಿ ಸುವುದು ಕಷ್ಟವಾಗಿದೆ. ಸಮುದಾಯ ಆರೋಗ್ಯ ಕೇಂದ್ರಕ್ಕೆ ಸುತ್ತಮುತ್ತಲ ಗ್ರಾಮಗಳಿಂದ ತಾಲೂಕಿನ ವಿವಿಧ ಭಾಗಗಳಿಂದ ಹೊರರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ತಿಂಗಳಿನಲ್ಲಿ 4500ರವರೆಗೆ ರೋಗಿಗಳ ಸಂಖ್ಯೆ ಇರುತ್ತದೆ. ಹೆದ್ದಾರಿ ಆದ್ದರಿಂದ ಅಪಘಾತ ಪ್ರಕರಣಗಳೂ ಇಲ್ಲಿಗೆ ಬರುತ್ತವೆ.

ತಜ್ಞ ವೈದ್ಯರಿಲ್ಲ
ಈ ಆರೋಗ್ಯ ಕೇಂದ್ರಕ್ಕೆ 1 ಹಿರಿಯ ವೈದ್ಯಾಧಿಕಾರಿ ಹಾಗೂ 3 ತಜ್ಞವೈದ್ಯರ ಹುದ್ದೆ ಮಂಜೂರಾಗಿದೆ. ಆದರೆ ಈಗ ಓರ್ವ ಹಿರಿಯ ವೈದ್ಯಾಧಿಕಾರಿ, ಓರ್ವ ಆಯುಷ್‌ ವೈದ್ಯಾಧಿಕಾರಿ, ಓರ್ವ ದಂತ ವೈದ್ಯಾಧಿಕಾರಿ ಮಾತ್ರ ಕರ್ತವ್ಯದಲ್ಲಿದ್ದಾರೆ. ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ನಿಭಾಯಿಸುವುದು ಕಷ್ಟಕರವಾಗಿದೆ. ಗ್ರಾಮಗಳಿಗೆ ಭೇಟಿ, ಅಂಗನವಾಡಿ ಕಾರ್ಯಕರ್ತೆಯರ ಸಭೆ, ಕ್ಷೇತ್ರ ಸಿಬಂದಿ ಕಾರ್ಯಕ್ರಮ, ಪ್ರಗತಿ ಪರಿಶೀಲನ ಸಭೆ, ಸಾಂಕ್ರಾಮಿಕ ಕಾಯಿಲೆ ನಿಯಂತ್ರಣ ಬಗ್ಗೆ ಮಾರ್ಗದರ್ಶನ ಇತ್ಯಾದಿ ಇಲಾಖೆಯ ಹಲವಾರು ಕಾರ್ಯಕ್ರಮಗಳ ಅನುಷ್ಠಾನ, ಪರಿಶೀಲನೆಯ ಹೊಣೆ ವೈದ್ಯಾಧಿಕಾರಿ ಮೇಲಿದ್ದು, ಅವುಗಳಲ್ಲೇ ದಿನ ಕಳೆದುಹೋಗುತ್ತಿದೆ. ಈ ಮಧ್ಯೆ ರೋಗಿಗಳಿಗೆ ಚಿಕಿತ್ಸೆ, ಮರಣೋತ್ತರ ಪರೀಕ್ಷೆ, ಅಪಘಾತ ಪ್ರಕರಣಗಳಿಗೆ ದೃಢಪತ್ರ ನೀಡುವುದು ಇತ್ಯಾದಿ ವಿವಿಧ ಕೆಲಸಗಳು ನಿರಂತರವಾಗಿವೆ. ಇವೆಲ್ಲವನ್ನೂ ಒಬ್ಬರೇ ಮಾಡಬೇಕಿದ್ದು, ಎಲ್ಲ ಜವಾಬ್ದಾರಿಗಳಿರುವ ಕಾರಣ ಆಸ್ಪತ್ರೆಯಲ್ಲಿ ರೋಗಿಗಳಿಗೆ ಲಭ್ಯವಿರಲು ಕಷ್ಟವಾಗುತ್ತಿದೆ ಎನ್ನುತ್ತಾರೆ ವೈದ್ಯಾಧಿಕಾರಿ.

ಮೇಲ್ದರ್ಜೆಗೆ ಏರಿಸಿ 
ಈಗಾಗಲೇ ಹೆಬ್ರಿ ತಾಲೂಕಾಗಿ ಘೋಷಣೆಗೊಂಡಿದ್ದು ಸಮುದಾಯ ಆರೋಗ್ಯಕೆಂದ್ರವನ್ನು ತಾಲೂಕು ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಬೇಕಾಗಿದೆ. ಆದರೆ ಇರುವ ಸಮುದಾಯ ಆರೋಗ್ಯ ಕೇಂದ್ರದ ಪರಿಸ್ಥಿತಿ ಈಗ ಅನಾರೋಗ್ಯವಾಗಿದ್ದು ಈ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಸಮಸ್ಯೆ ಬಗೆಹರಿಸುವೆ
ಇಬ್ಬರು ವೈದ್ಯರು ರಾಜಿನಾಮೆ ನೀಡದ ಕಾರಣ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಾಗಿದೆ. ಈ ಬಗ್ಗೆ ಈಗಾಗಲೇ ವೈದ್ಯರ ನೇಮಕಾತಿಗಾಗಿ ಸೂಚನೆ ಹೊರಡಿಸಿದ್ದು ಶೀಘ್ರದಲ್ಲಿ ಸಮಸ್ಯೆ ಪರಿಹಾರವಾಗಲಿದೆ.
– ರೋಹಿಣಿ, ಜಿಲ್ಲಾ ಆರೋಗ್ಯ ಅಧಿಕಾರಿ, ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next