Advertisement

ಬೀದಿ ನಲ್ಲಿಯೂ ಇಲ್ಲ, ಜಗಳವೂ ಇಲ್ಲ 

03:19 PM Jan 03, 2018 | |

ತುಂಬಾ ಹಿಂದೇನಲ್ಲ; ಎರಡು ದಶಕಗಳ ಹಿಂದೆ ಪ್ರತಿ ನಗರಗಳಲ್ಲೂ ಬೀದಿ ನಲ್ಲಿ ಇರುತ್ತಿತ್ತು. ಬೇಸಿಗೆಯಲ್ಲಿ, ನಲ್ಲಿಯುದ್ದಕ್ಕೂ ಖಾಲಿ ಕೊಡಗಳು ಇರುತ್ತಿದ್ದವು. ಬೀದಿ ನಲ್ಲಿ ಎಂಬ ಸಾರ್ವಜನಿಕ ಸ್ಥಳವು ಜಗಳ, ಮುನಿಸು, ಚರ್ಚೆ, ಕುಸ್ತಿ ಹಾಗೂ ಗಾಸಿಪ್‌ನ ವೇದಿಕೆಯೇ ಆಗಿ ಬಿಡುತ್ತಿತ್ತು. ಪ್ರೀತಿ, ಜಗಳ ಹಾಗೂ ಮನರಂಜನೆಯ ಸಂಗಮದಂತಿದ್ದ ಬೀದಿ ನಲ್ಲಿಯನ್ನೂ, ಅದು ಮೊಗೆದುಕೊಟ್ಟ ಮೃದು-ಮಧುರ ಕ್ಷಣಗಳನ್ನೂ ಇಲ್ಲಿ ಮೆಲುಕು ಹಾಕಲಾಗಿದೆ.

Advertisement

 ಎರಡು ದಶಕಗಳ  ಹಿಂದೆ. ಶಿಕಾರಿಪುರದಲ್ಲಿ ಬೇಸಿಗೆ ಬಂತೆಂದರೆ ಹನಿ ನೀರಿಗೂ ಪರದಾಟ ಆರಂಭವಾಗುತ್ತಿತ್ತು. ಎರಡು ಕೊಡ ನೀರಿಗಾಗಿ ಕಿಲೋಮೀಟರ್‌ಗಟ್ಟಲೆ ದೂರವಿದ್ದ ಬಸ್‌ ಸ್ಟಾಂಡ್‌, ಬಿಡಿಒ ಆಫೀಸ್‌ ಬಾವಿ, ಕುರುಬ ಗುಂಡಿ  ಮೊದಲಾದ ಕಡೆ ನಿತ್ಯ ಗಂಗಾಯಾತ್ರೆಗೆ ಹೋಗುವುದು ಅನಿವಾರ್ಯವಾಗುತ್ತಿತ್ತು. ಆಗ ಹೊಂಡದ ಕೇರಿಯಲ್ಲಿ ನಮ್ಮ ಮನೆಯ ಬಳಿಯಿದ್ದ ಬೀದಿ ನಲ್ಲಿ, ನೀರು ತುಂಬಿಸಿಕೊಳ್ಳುವ ವಿಚಾರದಲ್ಲಿ ರಣರಂಗವಾಗಿ ಪರಿಣಮಿಸುತ್ತಿತ್ತು.

ನೀರುಗಂಟಿ ಯಾವಾಗ ನೀರು ಬಿಡುತ್ತಾನೆಂಬುದೇ ಗೊತ್ತಾಗುತ್ತಿರಲಿಲ್ಲ. ಕೆಲವರು ನೀರಿಗಾಗಿ ಕೊಡ, ಬಕೆಟ್‌, ತಂಬಿಗೆ  ಮೊದಲಾದ ವಸ್ತುಗಳನ್ನು ನಲ್ಲಿಯ ಮುಂದೆ ಕಾಯ್ದಿರಿಸುತ್ತಿದ್ದರು. ಯಾರಾದರೂ ಕೊಡ, ಬಕೆಟ್‌ಗಳನ್ನು ಹೊತ್ತೂಯ್ದರೆ ಎಂಬ ಭೀತಿಯಲ್ಲಿ ಬಾಟಲಿಯ ಮುಚ್ಚಳಗಳನ್ನು ಸರದಂತೆ ಪೋಣಿಸಿ ನಲ್ಲಿಗೆ ಹಾಕುತ್ತಿದ್ದರು. ಹರಕು ಮುರಕು ಕೊಡ, ಬಕೆಟ್‌ಗಳು ಸರದಿ ಕಾಯ್ದಿರಿಸಲು ಬಳಕೆಯಾಗುತ್ತಿದ್ದವು. ಕೆಲ ಪಡ್ಡೆಗಳು ಇಲ್ಲಿಂದ ಕದ್ದ ವಸ್ತುಗಳನ್ನು  ಹಳೇ ಕಬ್ಬಿಣ, ತಗಡು, ಪ್ಲಾಸ್ಟಿಕ್‌ನವರಿಗೆ ಮಾರಿಕೊಂಡು, ಅದಕ್ಕೆ ಪ್ರತಿಯಾಗಿ ಸಿಗುತ್ತಿದ್ದ ಕಡಲೆ ಮಿಠಾಯಿ ತಿಂದು ಬಾಯಿ ಚಪ್ಪರಿಸುತ್ತಿದ್ದರೆ ಅತ್ತ ಅವುಗಳನ್ನು ಕಳೆದುಕೊಂಡು, ಸದರಿ ಸಾಲಿನಿಂದಲೂ ವಂಚಿತರಾದವರು ಸೊಂಟದ ಕೆಳಗಿನ ಭಾಷೆಯಲ್ಲಿ ಸಾರ್ವಜನಿಕವಾಗಿ ಬೈಯ್ಯುವುದು ಸರ್ವೇ ಸಾಮಾನ್ಯ ದೃಶ್ಯ. 


ಆಕಸ್ಮಿಕವಾಗಿ ಯಾರಾದರೂ ಸರದಿ ತಪ್ಪಿ ನೀರು ಹಿಡಿಯಲು ಮುಂದಾದರಂತೂ ಕಿವಿ ಮುಚ್ಚಿಕೊಳ್ಳುವಂಥ ಬಯುYಳ ಬೋನಸ್‌ ಆಗಿ ಸಿಗುತ್ತಿತ್ತು. ಒಬ್ಬರಿಗೆ ಎರಡೇ ಕೊಡ ನೀರು ಎಂಬ ನಿಯಮವೂ ಆಗ ಜಾರಿಯಲ್ಲಿತ್ತು. ಎರಡು ಕೊಡ ನೀರಿಗಾಗಿ 25ಕ್ಕೂ ಹೆಚ್ಚು ಮನೆಯವರು ಸರದಿಯಲ್ಲಿ ಇರುತ್ತಿದ್ದರು. ಎರಡನೇ ಪಾಳಿಯವರೆಗೆ  ನೀರು ಬರುತ್ತಿದ್ದರೆ ಇನ್ನಷ್ಟು ನೀರು ಹಿಡಿಯಬೇಕು ಎಂದು ಕೆಲವರು ನಿಯಮ ಮಾಡಿದಾಗ ಮೇಸ್ಟ್ರ ಹೆಂಡತಿ ಹಳದಮ್ಮ, ಇಲ್ಲದ್ದೇ ಕಾನೂನು ಮಾಡ್ತೀರಾ ಮುಂಡೇಮಕ್ಳ …  ಎಂದು ವಾಚಾಮಗೋಚರ ಬಯ್ಯುತ್ತಿದ್ದರು. 

ಕೆಲವೊಮ್ಮೆ ನೀರಿಗಾಗಿ ತಳ್ಳಾಟ ನೂಕಾಟಗಳು ಆರಂಭವಾಗಿ ಕಿರಗೂರಿನ ಗಯ್ನಾಳಿಗಳಂತೆ ಹೆಂಗಸರ ಅಬ್ಬರ ಶುರುವಾಗಿಬಿಡುತ್ತಿತ್ತು. ಬಹುತೇಕ ಗಂಡಸರು ಶ್ರಮಿಕ ವರ್ಗದವರಾಗಿದ್ದರಿಂದ ಅವರ್ಯಾರೂ ನಲ್ಲಿ ಕಟ್ಟೆಯತ್ತ ಹೆಚ್ಚು ಹಣಕುತ್ತಿರಲಿಲ್ಲ.ಕೆಲ ಹೆಂಗಸರಂತೂ ನೀರು ಸಿಗದಿದ್ದರೆ ನಿರ್ದಿಷ್ಟವಾಗಿ ಯಾರನ್ನೂ ಹೆಸರಿಸದೆ ಎಲ್ಲರಿಗೂ ಅನ್ವಯಿಸುವಂತೆ ತಮ್ಮದೇ ಭಾಷೆಯಲ್ಲಿ ಅಶ್ಲೀಲವಾಗಿ ನಿಂದಿಸಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ನಮ್ಮ ಮಕ್ಕಳಿಗೆ ಹಿಂದಿ, ಉರ್ದು ಭಾಷೆ ಸಲ್ಪಮಟ್ಟಿಗಾದರೂ ಬಂದಿದೆ ಎಂದರೆ ಅದಕ್ಕೆ ಈ ನಲ್ಲಿಕಟ್ಟೆ ಬೈಗುಳಗಳ ಅಬ್ಬರವೇ ಕಾರಣ. ಕೆಲವರಂತೂ ಸಾರ್ವಜನಿಕ ನಲ್ಲಿ ಕಟ್ಟೆಯ ಮುಂದೆ “ಸರದಿ ಕಾಯಿರಿ’ ಎಂದು ಫ‌ಲಕವನ್ನೂ ಬರೆದಿರುತ್ತಿದ್ದರು.

ಇಷ್ಟೆಲ್ಲಾ ಜಗಳಗಳ ನಡುವೆ ಯಾವುದಾದರೂ ಅವಿವಾಹಿತ ಪುರುಷರು, ಪತ್ನಿಯನ್ನು ಊರಿಗೆ ಕಳಿಸಿದ್ದ ಪತಿರಾಯರು  ನೀರು ಹಿಡಿಯಲು ಬಂದರೆ, ಪಾಪ, ಅವ್ರ ಮನೆಯವರು ಇಲ್ಲ, ಒಂದೆರಡು ಕೊಡ ನೀರು ಬಿಟ್ಟು ಕಳುಹಿಸಿ…ಎಂಬ ಭೂತ ದಯೆಯೂ ವ್ಯಕ್ತವಾಗುತ್ತಿತ್ತು. 

Advertisement

 ಬೀದಿನಲ್ಲಿ ಎಲ್ಲ ಬಗೆಯ ಗಾಸಿಪ್‌ಗ್ಳ ಚರ್ಚೆಗೂ ಒಂದು ಮುಕ್ತ ವೇದಿಕೆಯಾಗಿತ್ತು. ಕೆಲವರಂತೂ ಬಾಯಿ ಚಪಲಕ್ಕಾಗಿ ಯಾರೊಂದಿಗೆ ಯಾರಿಗೋ ಸಂಬಂಧ ಕಲ್ಪಿಸುತ್ತಿದ್ದರು. ಅನ್ಯಧರ್ಮೀಯರು ಹಾಗೂ ಪ್ರಬಲ ಕೋಮಿನವರು ಸರಿಸಮನಾಗಿದ್ದ ನಮ್ಮ ಬಡಾವಣೆಯಲ್ಲಿ ನೀರು ಹಿಡಿಯುವಾಗ ಜಗಳವಾಡುತ್ತಿದ್ದವರು ಆನಂತರ ಕಷ್ಟ, ಕಾರ್ಪಣ್ಯಗಳು ಬಂದಾಗ ಒಬ್ಬರಿಗೊಬ್ಬರು ಸ್ಪಂದಿಸುತ್ತಿದ್ದರು. ಶುಭಕಾರ್ಯಗಳು ನಡೆದರೆ ಚಪ್ಪರ ಹಾಕುವುದರಿಂದ ಹಿಡಿದು ಏನೇ ಕೆಲಸವಿದ್ದರೂ ಮಾಡುತ್ತಿದ್ದರು. ಯಾರ ಮನೆಯಲ್ಲಾದರೂ ಸಾವು ಸಂಭವಿಸಿದರೆ, ತಮ್ಮ ಮನೆಯವರೇ ಮೃತಪಟ್ಟಷ್ಟು ದುಃಖ ಪಡುತ್ತಿದ್ದರು. ಜಗಳ, ಬೈಗುಳ ಕೇವಲ ನಲ್ಲಿಕಟ್ಟೆಗಷ್ಟೇ ಸೀಮಿತ. ನೀರಿನ ಹೆಸರಿನಲ್ಲಿ ಕಿಚ್ಚು ಹತ್ತಿದರೂ ಅದು ಆ ಆವರಣದ ಆಚೆಗೆ ಬರುತ್ತಿರಲಿಲ್ಲ. ಜಾತಿ-ಮತ-ಧರ್ಮ ಮೀರಿದ ಮಾನವೀಯ ಸಂಬಂಧಕ್ಕೆ ಎಲ್ಲರ ಹೃದಯ ಮಿಡಿಯುತ್ತಿತ್ತು. ನಾಕು ಅಕ್ಷರ ಕಲಿತು ನಾಳೆ ನಮ್ಮ ಮಕ್ಕಳು ಚೆನ್ನಾಗಿರಲೆಂಬ ಆಶಯ ಬೂಬಮ್ಮಗಳ (ಅಲ್ಪಸಂಖ್ಯಾತ ಹೆಂಗಸರಿಗೆ ಅನ್ವರ್ಥ ನಾಮ) ಬಾಯಿಂದ ಬರುತ್ತಿತ್ತು. 

 ಈಗ ಕಾಲ ಬದಲಾಗಿದೆ. ಹಾಳು ಕೊಂಪೆಯಂತಿದ್ದ ಶಿಕಾರಿಪುರದಲ್ಲಿ ಮನೆಗೊಂದು ನಲ್ಲಿ ಬಂದಿದೆ. ಮನೆ ಒಳಗೇ ನೀರು ಬರುವುದರಿಂದ ಒಂದಷ್ಟು ಜಗಳ, ಪ್ರೀತಿ  ಮನರಂಜನೆಯ ಸಂಗಮವಾಗಿದ್ದ ಬೀದಿ ನಲ್ಲಿಯನ್ನು ಕೇಳುವವರೇ ಇಲ್ಲವಾಗಿದೆ. ಸ್ವಂತ ನಲ್ಲಿ ಬಂದಿರುವುದರಿಂದ ಜನರು ಬೀದಿಯ ಜನರೊಂದಿಗೆ ಬೆರೆಯುವುದನ್ನೇ ಮರೆತಿದ್ದಾರೆ. ಆಧುನಿಕ ಸೌಲಭ್ಯಗಳು, ಪರಸ್ಪರ ಮುಕ್ತ ಮಾತು, ಕೋಪ, ತಾಪ, ಅಭಿಮಾನಗಳ ಹೊಮ್ಮುವಿಕೆಗೆ ಬ್ರೇಕ್‌ ಹಾಕಿದೆಯಲ್ಲಾ ಎಂದು ಒಮ್ಮೊಮ್ಮೆ ಪಿಚ್ಚೆನಿಸುತ್ತದೆ. ದಶಕದ ನಂತರ ನಾನು ಇದೇ ಹೊಂಡದಕೇರಿಗೆ ಹೋದಾಗ.. ನಮ್ಮ ಟೀಚರಮ್ಮಾ ಬಂದಿದ್ದಾರೆ ಎಂದು ಫ‌ಹಿಮಾ, ರೋಖಾಬೂಬಿ, ಸರೋಜಮ್ಮ, ಕಮಾಲ್‌ಸಾಬ, ಶಾಂತಕ್ಕ ಅಭಿಮಾನ ಪಟ್ಟಾಗ ನಾವು ಏನೆಲ್ಲಾ ಜಗಳವಾಡಿದ್ದರೂ, ಈಗಲೂ ಇವರೆಲ್ಲಾ ನನ್ನವರೇ ಅಲ್ಲವಾ ಎಂದು ಬೆರಗಾಗುತ್ತದೆ. 

ಅಂದಿನ ಜಲ ಕದನಗಳೆಲ್ಲವೂ ನಿಮಿತ್ತ ಮಾತ್ರವಾಗಿದ್ದವು. ಕುಲ ಯಾವುದಾದರೇನು.. ಆ ಜನಗಳ ಹೃದಯ ನಿರ್ಮಲವಾಗಿತ್ತು. ಈಗ ಆ ರೀತಿ ಜಗಳ ಆಡುತ್ತೇವೆಂದರೂ ಸಂದರ್ಭ ಬಾರದು… 

ಬಿ.ಎಸ್‌.ಸುಧಾರತ್ನಮ್ಮ

Advertisement

Udayavani is now on Telegram. Click here to join our channel and stay updated with the latest news.

Next