Advertisement

ಆಕಾಶ ಅಂಬಾರಿಯೂ ಇಲ್ಲ, ಉಡಾನೂ ಇಲ್ಲ 

12:13 PM Sep 01, 2017 | |

ಮೈಸೂರು: ಈ ಬಾರಿಯ ದಸರೆ ಸಂದರ್ಭದಲ್ಲಿ ಮೈಸೂರು ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಮಾಡುವ ಸಾಧ್ಯತೆ ತೀರಾ ಕಡಿಮೆ ಇದ್ದು, ದಸರೆ ಸಂದರ್ಭದಲ್ಲಾದರೂ ವಿಮಾನದಲ್ಲಿ ಹಾರಾಡಬಹುದು ಎಂದು ಕೊಂಡವರಿಗೆ ನಿರಾಶೆ ಕಾದಿದೆ.

Advertisement

ದಸರಾ ಸಂದರ್ಭದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಬಂದು ಹೋಗುವ ಪ್ರವಾಸಿಗರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಕಲ್ಪಿಸುತ್ತಿದ್ದ ಆಕಾಶ ಅಂಬಾರಿ ವಿಮಾನಯಾನ ಸೌಲಭ್ಯ ಈ ವರ್ಷ ಇಲ್ಲ. ಮತ್ತೂಂದೆಡೆ ಕೇಂದ್ರ ಸರ್ಕಾರದ ಉಡಾನ್‌ ಯೋಜನೆಯಡಿ ಮೈಸೂರು-ಚೆನ್ನೈ ನಡುವೆ ವಿಮಾನಯಾನ ಸೌಲಭ್ಯ ಕಲ್ಪಿಸಲು ಮುಂದೆ ಬಂದಿದ್ದ ಟ್ರೂಜೆಟ್‌ ಕಂಪನಿ ಕೂಡ ಮೈಸೂರಿನಿಂದ ವೈಮಾನಿಕ ಸೇವೆ ಆರಂಭಿಸಲು ಆಸಕ್ತಿ ತೋರುತ್ತಿಲ್ಲ.

ಬದಲಿಗೆ ಬಳ್ಳಾರಿಯ ವಿದ್ಯಾನಗರ ವಿಮಾನ ನಿಲ್ದಾಣ ಮತ್ತು ಹೈದರಾಬಾದ್‌ ನಡುವೆ ವಿಮಾನ ಯಾನ ಸೌಲಭ್ಯ ಕಲ್ಪಿಸಲು ಉತ್ಸುಕತೆ ತೋರುತ್ತಿದೆ ಎಂದು ತಿಳಿದುಬಂದಿದೆ. ಆದರೆ, ದಸರಾ ಸಂದರ್ಭದಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಸೆ.15ರಿಂದ ಮೈಸೂರು-ಚೆನ್ನೈ ನಡುವೆ ವಿಮಾನಯಾನ ಆರಂಭಿಸುವಂತೆ ನಾಗರಿಕ ವಿಮಾನಯಾನ ಸಚಿವರು ಟ್ರೂಜೆಟ್‌ ಕಂಪನಿ ಮೇಲೆ ಒತ್ತಡ ಹೇರಿದ್ದಾರೆಂದು ತಿಳಿದು ಬಂದಿದೆ.

ಆಕಾಶ ಅಂಬಾರಿ ಹೆಸರಿನಲ್ಲಿ ಕಳೆದ ವರ್ಷ ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರದ ಜತೆಗೆ ಒಪ್ಪಂದ ಮಾಡಿಕೊಂಡು ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಬೆಂಗಳೂರು-ಮೈಸೂರು ನಡುವೆ ವಿಮಾನಯಾನ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ, ಕಡಿಮೆ ಆಸನ ಸಾಮರ್ಥ್ಯದ ಚಾರ್ಟರ್ಡ್‌ ವಿಮಾನಕ್ಕೂ ಪ್ರಯಾಣಿಕರ ಕೊರತೆ ಎದುರಾಗಿ ನಷ್ಟ ಅನುಭವಿಸಿದ್ದರಿಂದ ಈ ಬಾರಿ ಮೈಸೂರಿಗೆ ಹಾರಾಟ ನಡೆಸಲು ಯಾವುದೇ ವಿಮಾನ ಯಾನ ಕಂಪನಿ ಮುಂದೆ ಬರುತ್ತಿಲ್ಲ ಎನ್ನಲಾಗಿದೆ.

ಹೀಗಾಗಿ ಕಳೆದ ವರ್ಷದಂತೆ ಈ ಬಾರಿಯೂ ಮೈಸೂರು-ಬೆಂಗಳೂರು ನಡುವೆ ಆಕಾಶ ಅಂಬಾರಿ ವಿಮಾನಯಾನ ಸೌಲಭ್ಯ ಕಲ್ಪಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಮೈಸೂರು ಜಿಲ್ಲಾಧಿಕಾರಿ ರಂದೀಪ್‌ ಅವರು ಬರೆದ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 

Advertisement

ಇನ್ನು ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಉಡಾನ್‌ ಯೋಜನೆಯಡಿ ಮೈಸೂರು-ಚೆನ್ನೈ ನಡುವೆ ವಿಮಾನ ಹಾರಾಟಕ್ಕೆ ಏರ್‌ ಒಡಿಶಾ ಹಾಗೂ ಟ್ರೂ ಜೆಟ್‌ ಕಂಪನಿ ಒಪ್ಪಂದ ಮಾಡಿಕೊಂಡಿವೆ. ಭುವನೇಶ್ವರ್‌ ಮೂಲದ ಏರ್‌ ಒಡಿಶಾ ಕಂಪನಿಯ 72 ಆಸನಗಳ ಸಾಮರ್ಥ್ಯದ ವಿಮಾನ ಮತ್ತು ಹೈದರಾಬಾದ್‌ ಮೂಲದ ಟ್ರೂಜೆಟ್‌ ಕಂಪನಿಯ 19 ಆಸನಗಳ ಸಾಮರ್ಥ್ಯದ ವಿಮಾನಗಳು ಸೆಪ್ಟೆಂಬರ್‌ 3ನೇ ವಾರದಲ್ಲಿ ಹಾರಾಟ ನಡೆಸಲಿವೆ ಎಂದು ಹೇಳಲಾಗಿತ್ತು.

ಆದರೆ, ಟ್ರೂಜೆಟ್‌ ಕಂಪನಿ ಸೆ.15ರಿಂದ ವಿದ್ಯಾನಗರ (ಬಳ್ಳಾರಿ)- ಹೈದರಾಬಾದ್‌ ನಡುವೆ ವಿಮಾನ ಹಾರಾಟಕ್ಕೆ ಮುಂದಾಗಿದ್ದು, ಮೈಸೂರು-ಚೆನ್ನೈ ನಡುವೆ ಅಕ್ಟೋಬರ್‌ನಲ್ಲಿ ವಿಮಾನಯಾನ ಸೇವೆ ಆರಂಭಿಸುವುದಾಗಿ ಹೇಳುತ್ತಿದೆ. ಆದರೆ, ದಸರಾ ಸಂದರ್ಭದಲ್ಲಿ ಮೈಸೂರಿನಿಂದ ವಿಮಾನಯಾನ ಸೇವೆ ಆರಂಭವಾದರೆ ಹೆಚ್ಚಿನ ಪ್ರಚಾರ ಸಿಗುತ್ತದೆ. ಪ್ರವಾಸಿಗರೂ ವಿಮಾನ ಸೌಲಭ್ಯ ಬಳಸಿಕೊಳ್ಳುತ್ತಾರೆ.

ಆದರೆ, ಅಕ್ಟೋಬರ್‌ನಲ್ಲಿ ಸೇವೆ ಆರಂಭಿಸಿದರೆ ಹೆಚ್ಚಿನ ಪ್ರಚಾರ ಸಿಗುವುದಿಲ್ಲ ಎಂಬುದನ್ನು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಮನೋಜ್‌ ಕುಮಾರ್‌ ಸಿಂಗ್‌, ಟ್ರೂಜೆಟ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದರ ನಡುವೆ ಟ್ರೂಜೆಟ್‌ ಕಂಪನಿ ಯಾವ ನಿರ್ಧಾರ ಮಾಡುತ್ತದೆಯೋ ಕಾದು ನೋಡಬೇಕಿದೆ.

ಮೈಸೂರು ವಿಮಾನ ನಿಲ್ದಾಣದಿಂದ ದೊಡ್ಡ ವಿಮಾನಗಳು ಹಾರಾಟ ನಡೆಸಲಾಗಲ್ಲ. ಎಚ್‌ಎಎಲ್‌ ನವರಿಂದ ಅನುಮತಿ ಪಡೆದು ಕಳೆದ ವರ್ಷ 7-8 ಆಸನಗಳ ಸಾಮರ್ಥ್ಯದ ಚಾರ್ಟರ್ಡ್‌ ವಿಮಾನ ಹಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿಯೂ ಪ್ರಸ್ತಾವನೆ ಇದೆ. ಯಾವ ಕಂಪನಿ ಮುಂದೆ ಬರುತ್ತದೆ ನೋಡಬೇಕು.
-ಪ್ರಿಯಾಂಕ್‌ ಖರ್ಗೆ, ಪ್ರವಾಸೋದ್ಯಮ ಸಚಿವ

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next