ಕೋಲಾರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರದಂತೆ ಸಂಬಂಧಿಸಿದ ಅಧಿಕಾರಿಗಳು ನೋಡಿಕೊಳ್ಳಬೇಕು. ಕುಡಿಯುವ ನೀರಿನ ಪೂರೈಕೆಗೆ ಯಾವುದೇ ಅನುದಾನದ ಕೊರತೆ ಇಲ್ಲ. ಆದರೆ, ಸಮರ್ಪಕವಾಗಿ ಬಳಕೆಯಾಗಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.
ತಮ್ಮ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬರ ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾದ್ಯಂತ ಹೋಬಳಿವಾರು ಕುಡಿಯುವ ನೀರಿನ ಸಮಸ್ಯೆ ಬರದಂತೆ ನೋಡಿಕೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ ತಹಶೀಲ್ದಾರ್, ಇಒ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಬೇಕು ಎಂದು ತಿಳಿಸಿದರು.
ಬಾಡಿಗೆಗೆ ಪಡೆಯಿರಿ: ನೀರಿನ ಸಮಸ್ಯೆ ಕಂಡು ಬಂದರೆ ಮೊದಲ ಆದ್ಯತೆಯಾಗಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಬೇಕು. ಖಾಸಗಿ ಕೊಳವೆ ಬಾವಿಗಳು ಸಿಗದೆ ಇದ್ದರೆ ಟ್ಯಾಂಕರ್ ಮೂಲಕ, ನಂತರ ಕೊಳವೆ ಬಾವಿಗಳ ಮರು ಕೊರೆಯುವಿಕೆಗೆ, ಕೊನೆಯ ಆದ್ಯತೆಯಾಗಿ ಹೊಸ ಕೊಳವೆ ಬಾವಿಗಳ ಕೊರೆಸುವುದಕ್ಕೆ ತೆಗೆದು ಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಅಂತರ ಕಾಯ್ದುಕೊಳ್ಳಿ: ಖಾಸಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಾಗ ಜನರು ನೀರನ್ನು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪಡೆದುಕೊಳ್ಳಬೇಕು. ಕೊಳವೆ ಬಾವಿಗಳನ್ನು ಕೊರೆಯಲು ಕೋವಿಡ್ ಸೊಂಕು ಮುಗಿಯುವವರೆಗೂ ಸ್ಥಳೀಯರಿಗೆ ಆದ್ಯತೆ ನೀಡಿ, ಬೇರೆ
ರಾಜ್ಯದಿಂದ ಕೊಳವೆ ಬಾವಿ ಕೊರೆಯಲು ಬರುವವರಿಗೆ ಅವಕಾಶ ನೀಡಲು ಸಾಧ್ಯವಿಲ್ಲ. ಕೊಳವೆಬಾವಿಗಳ ಪಾಯಿಂಟ್ ಮಾಡುವ ಜಿಯಾಲಜಿಸ್ಟ್‌ಗಳು ಕೇವಲ ರಸ್ತೆ ಇರುವ ಕಡೆ ಮಾತ್ರ ಹೊಗಿ ಪಾಯಿಂಟ್ ಮಾಡುವುದನ್ನು ಬಿಟ್ಟು ಒಳಪ್ರದೇಶಗಳಿಗೆ ಹೋಗಿ ನೀರು ಬರುವ ಹಾಗೆ ಪಾಯಿಂಟ್ ಮಾಡಬೇಕು ಎಂದು ಸೂಚಿಸಿದರು.
ದರ ವಿಧಿಸಬೇಡಿ: ಜಿಪಂ ಸಿಇಒ ದರ್ಶನ್ ಮಾತನಾಡಿ, ರೈತರಿಂದ ಬಾಡಿಗೆಗೆ ಪಡೆಯುವ ಖಾಸಗಿ ಕೊಳವೆ ಬಾವಿಗಳಿಗೆ ಬೆಸ್ಕಾಂ ಅವರು ವಾಣಿಜ್ಯ ವಿದ್ಯುತ್ ದರ ವಿಧಿಸುತ್ತಾರೆ. ಕೆಲವು ವೇಳೆ ವಿಜಿಲೆನ್ಸ್ ಅವರು ರೈತರಿಗೆ ದಂಡ ವಿಧಿಸುತ್ತಾರೆ. ಈ ರೀತಿ ಆಗಬಾರದು. ಕುಡಿಯುವ ನೀರಿನ ಉದ್ದೇಶಕ್ಕೆ ನೀಡಿರುವುದರಿಂದ ಸಾಮಾನ್ಯ ವಿದ್ಯುತ್ ದರವನ್ನೇ ವಿಧಿಸಬೇಕು ಎಂದು ಬೆಸ್ಕಾ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಕೊಳವೆ ಬಾವಿಗಳ ಸಕ್ಸಸ್ ರೇಟ್ ಕಡಿಮೆ ಇದ್ದು, ಇದು ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಅಪರ
ಜಿಲ್ಲಾಧಿಕಾರಿ ಶಿವಸ್ವಾಮಿ, ಜಿಪಂ ಉಪ ಕಾರ್ಯದರ್ಶಿ ಸಂಜೀವಪ್ಪ ಇದ್ದರು.