ದೇವನಹಳ್ಳಿ: ತಾಲೂಕಿನ ಜಿಲ್ಲಾಡಳಿತ ಭವನದ ಬಳಿಯ ಚಪ್ಪರಕಲ್ಲು ಸರ್ಕಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 207ರ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಳ್ಳುತ್ತಿದ್ದು, ಚಪ್ಪರಕಲ್ಲು-ಕೊಯಿರ- ಕುಂದಾಣ ಭಾಗಕ್ಕೆ ಹೋಗುವ ರಸ್ತೆಗೆ ಅಡ್ಡಲಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚುತ್ತಿ ರುವುದರಿಂದ ಪಾದಚಾರಿಗಳಿಗೆ ಸುರಕ್ಷತೆಯೇ ಇಲ್ಲದಂತಾಗಿದ್ದು, ಜಂಕ್ಷನ್‌ನಲ್ಲಿ ವಾಹನಗಳು ವೇಗಮಿತಿ ರಹಿತವಾಗಿ ಸಂಚರಿಸುವುದರಿಂದ ಸಾಕಷ್ಟು ಅನಾಹುತಗಳಿಗೆ ಕಾರಣವಾಗುತ್ತಿದೆ.
ಜಿಲ್ಲಾಡಳಿತ ಭವನದ ಕೂಗಳತೆಯ ದೂರದಲ್ಲಿ ಚಪ್ಪರಕಲ್ಲು ಸರ್ಕಲ್‌ನಲ್ಲಿ ದೇವನಹಳ್ಳಿಯಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ಸಂಚರಿಸುವ ವಾಹನಗಳು ಮತ್ತು ಪಾದಚಾರಿಗಳು ಕೊಯಿರ ಕಡೆಗೆ ಹೋಗಲು ಹಾಗೂ ದೊಡ್ಡಬಳ್ಳಾಪುರ ಮಾರ್ಗವಾಗಿ ದೇವನಹಳ್ಳಿ ಕಡೆಗೆ ಸಂಚರಿಸುವ ವಾಹನಗಳು ಮತ್ತು ಪಾದಚಾರಿಗಳು ಕುಂದಾಣ ರಸ್ತೆ ಮಾರ್ಗಕ್ಕೆ ಸಂಚರಿಸಬೇಕಾದರೆ ಹರಸಾಹಸ ಪಡುವಂತಾಗಬೇಕು. ಜತೆಗೆ ಜಿಲ್ಲಾಡಳಿತ ಭವನಕ್ಕೆ ಕೆಲಸಗಳಿಗೆ ಹೋಗುವ ಸಾಕಷ್ಟು ಸಿಬ್ಬಂದಿಗಳಿಗೂ ಇದು ಅನ್ವಯಿಸುತ್ತಿದ್ದು, ರಸ್ತೆ ಸುರಕ್ಷತೆ ಇಲ್ಲದೆ ಸಾರ್ವಜನಿಕರು ಪರದಾಡುವ ದುಸ್ಥಿತಿಯನ್ನು ರಾಹೆಯವರು ತಂದೊಡ್ಡಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರಾದ ಮಂಜುನಾಥ್, ಮುನಿರಾಜು, ಆಟೋ ಮಾಲಿಕರಾದ ವೆಂಕಟೇಶ್, ಚನ್ನಪ್ಪ, ಸುರೇಶ್, ಕೊಯಿರ ಮುರಳಿ, ಬೀರಸಂದ್ರ ಲಕ್ಷ್ಮಣ, ಆನಂದ್‌ಮೂರ್ತಿ, ಕಾಂತರಾಜು, ಲಿಂಗೇಗೌಡ, ಸುತ್ತಮುತ್ತಲಿನ ಗ್ರಾಮಸ್ಥರು, ಸಾರ್ವಜನಿಕರು ಇದ್ದರು.
ಸುತ್ತಮುತ್ತಲಿನ ಹಳ್ಳಿಗಳಿಗೆ ಕೇಂದ್ರಸ್ಥಾನ ಸರ್ಕಲ್: ಚಪ್ಪರಕಲ್ಲು ಸರ್ಕಲ್ ಸುತ್ತಮುತ್ತಲಿನ ನೂರಾರು ಹಳ್ಳಿಗಳಿಗೆ ಕೇಂದ್ರಸ್ಥಾನವಾಗಿರುವು ದರಿಂದ ಸರ್ಕಲ್‌ನಲ್ಲಿ ಅಂಡರ್‌ಪಾಸ್ ಮಾಡಿದರೆ ಸಾಕಷ್ಟು ಅನುಕೂಲವಾಗುತ್ತದೆ. ಇದ್ದಕ್ಕಿ ದ್ದಂತೆ ಜೆಸಿಬಿ ಮೂಲಕ ಈ ಹಿಂದೆ ಸಂಚರಿಸುತ್ತಿದ್ದ ಡಿವೈಡರ್ ಅನ್ನು ಮಣ್ಣಿನಿಂದ ಮುಚ್ಚಿಸಲಾಗಿದೆ. ಇದರಿಂದ ವಾಹನ ಸವಾರರಿಗೆ ಹಾಗೂ ಸ್ಥಳೀಯ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆ ಯಾಗುತ್ತಿದ್ದು, ಮೊನ್ನೆಯಷ್ಟೇ ದ್ವಿಚಕ್ರವಾಹನ ಸವಾರ ಮತ್ತು ಲಾರಿಗೆ ಡಿಕ್ಕಿಹೊಡೆದು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಯನ್ನು ದಾಟುವ ಸಂದರ್ಭದಲ್ಲಿ ಅಪಘಾತಗಳು ಆಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿರುವುದರಿಂದ ಕೂಡಲೇ ಸಂಬಂಧ ಪಟ್ಟ ರಾಷ್ಟ್ರೀಯ ಹೆದ್ದಾರಿಯವರು ಇಲ್ಲೊಂದು ಅಂಡರ್‌ಪಾಸ್ ನಿರ್ಮಿಸಿದರೆ ಹೆಚ್ಚಿನ ಅನಾಹುತ ಗಳು ತಪ್ಪಿಸಿದಂತಾಗುತ್ತದೆ ಎಂದು ವಾಹನ ಮಾಲೀಕರು ಮತ್ತು ಪ್ರಯಾಣಿಕರು ಆಗ್ರಹಿಸಿದ್ದಾರೆ.
ರಾಹೆ ಪಕ್ಕದಲ್ಲಿಯೇ ವಿಶ್ವನಾಥಪುರ ಕೆಪಿಎಸ್ ಶಾಲೆ ಇದ್ದು, ಸಾಕಷ್ಟು ವಿದ್ಯಾರ್ಥಿಗಳು, ಆಸ್ಪತ್ರೆಯೂ ಸಹ ಬರುವುದರಿಂದ ವೃದ್ಧರು, ರೋಗಿಗಳು ಹಾಗೂ ಸಾರ್ವಜನಿಕರಿಗೆ ರಸ್ತೆ ಕಂಟಕ ವಾಗುತ್ತಿದೆ. ಜಿಲ್ಲಾಡಳಿತ ಭವನ ಮುಂದೆಯೇ ಮೆಲ್ಸೇತುವೆ ಹಾದುಹೋಗುವುದರಿಂದ ವಾಹನ ಗಳು ವೇಗದಲ್ಲಿ ಸಂಚರಿಸುತ್ತವೆ. 100ಮೀಟರ್ ದೂರದಲ್ಲಿ ಅಂಡರ್‌ಪಾಸ್ ಕಲ್ಪಿಸಿಕೊಡಬೇಕು.
● ಶ್ರೀಧರ್‌ಗೌಡ, ಸ್ಥಳೀಯ ನಾಗರಿಕ, ಸೀಕಾಯನಹಳ್ಳಿ
ಜಿಲ್ಲಾಡಳಿತ ಭವನವಾಗಿರುವುದರಿಂದ ನಾಲ್ಕು ತಾಲೂಕಿನ ಜನರು ದಿನನಿತ್ಯ ಬಂದು ಹೋಗುತ್ತಿರುತ್ತಾರೆ. ಅವೈಜ್ಞಾನಿಕವಾಗಿ ಚಪ್ಪಕಲ್ಲು ಸರ್ಕಲ್ ಅನ್ನು ಮಾಡಿದ್ದು, ಯಾವುದೇ ಸಿಗ್ನಲ್‌ದೀಪವಾಗಲೀ ಸುರಕ್ಷತಾ ಫಲಕವಾಗಲೀ ಹಾಕಿಲ್ಲ.
● ಶಿವಾಜಿಗೌಡ, ಅಧ್ಯಕ್ಷರು, ಜೇಸಿಐ ಚಪ್ಪರಕಲ್ಲು ಚಂದನ ಘಟಕ