Advertisement

ಕಾವೂರು ಪದವಿನ ಒಳಚರಂಡಿ ಸಮಸ್ಯೆ ಇನ್ನೂ ಜೀವಂತ

11:17 PM Jul 29, 2017 | Karthik A |

ಮಹಾನಗರ: ಒಳಚರಂಡಿ ಸಮಸ್ಯೆಯಿಂದ ಬಳಲುತ್ತಿದ್ದ ಆ ಭಾಗದ ಜನರು ಸರಕಾರಿ ಕಚೇರಿಗಳಿಗೆ ಹಲವು ಬಾರಿ ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ  ಸ್ಥಳೀಯರು ಪ್ರಧಾನ ಮಂತ್ರಿಯ ಮೊರೆಹೋಗುತ್ತಾರೆ. ಪುರಿಣಾಮ  ಸಮಸ್ಯೆಯನ್ನು ಕೂಡಲೇ ಪರಿಹರಿಸು ವಂತೆ ಪ್ರಧಾನಿ ಕಚೇರಿಯಿಂದ ಮಂಗಳೂರು ಮಹಾನಗರ ಪಾಲಿಕೆಗೆ ಪತ್ರ ಬರುತ್ತದೆ. ಆದರೆ ಆ ಪತ್ರ ಬಂದು ಎರಡು ತಿಂಗಳು ಕಳೆದರೂ ಪಾಲಿಕೆ ಇನ್ನೂ ಆ ಭಾಗದ ಸಮಸ್ಯೆಯನ್ನು ಬಗೆ ಹರಿಸುವ ಗೋಜಿಗೆ ಹೋಗಿಲ್ಲ. 

Advertisement

ಕಾವೂರು ಪದವಿನ ಪ್ರಾಥಮಿಕ ಶಾಲೆಯ ಆಸುಪಾಸಿನಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಒಳಚರಂಡಿ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಸುತ್ತಲಿನ ಜನರು ಮೂಗು ಮುಚ್ಚಿಕೊಂಡು ಜೀವನ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದು ನಿನ್ನೆ ಮೊನ್ನೆಯ ಸಮಸ್ಯೆಯಲ್ಲ. ಹಲವು ವರ್ಷಗಳ ಹಿಂದಿನದ್ದು. ಆದರೂ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಿಲ್ಲ.
 
ಈ ಭಾಗಕ್ಕೆ ಒಳಚರಂಡಿ ಸಂಪರ್ಕ ಕಲ್ಪಿಸುವಂತೆ ಪಾಲಿಕೆಗೆ ಹಲವು ಬಾರಿ ಮನವಿ ನೀಡಿ ಬೇಸತ್ತಿದ್ದ ಸ್ಥಳೀಯರು ಕೊನೆಯ ಅಸ್ತ್ರವಾಗಿ ಪ್ರಧಾನಿಗೆ ಪತ್ರ ಬರೆದಿದ್ದರು. ಕಾವೂರುಪದವು ನಿವಾಸಿ ಫೆಲ್ಸಿ ರೇಗೋ ಅವರು ಮಾ.17ರಂದು ಪ್ರಧಾನಿಗೆ ಸಮಸ್ಯೆಯ ಬಗ್ಗೆ ತಿಳಿಸಿದ್ದರು. ಪ್ರಧಾನಿ ಮೇ 25ರಂದು ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಸಮಸ್ಯೆ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಪ್ರಧಾನ ಕಾರ್ಯದರ್ಶಿಯವರು ದ.ಕ.ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಸೂಚನೆ ನೀಡಿದ್ದಾರೆ. ಅವರು ಜೂ. 1ರಂದು ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಇದಾಗಿ ಎರಡು ತಿಂಗಳು ಕಳೆದರೂ ಅಲ್ಲಿಗೆ ಯಾವುದೇ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಅಥವಾ ಸ್ಥಳೀಯರನ್ನು ಸಂಪರ್ಕಿಸಿಲ್ಲ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
 


ಸ್ಥಳ ಒತ್ತುವರಿ ಸಮಸ್ಯೆಯೇ ಕಾರಣ
‘ಆ ಭಾಗಕ್ಕೆ ಈವರೆಗೆ ಒಳಚರಂಡಿ ಸಂಪರ್ಕ ಕಲ್ಪಿಸಲಾಗಿಲ್ಲ. ಸಮತಟ್ಟಾದ ಜಾಗವಲ್ಲದಿರುವುದರಿಂದ ಕಾವೂರು ಜಂಕ್ಷನ್‌ನಲ್ಲಿರುವ ಒಳ ಚರಂಡಿಗೆ ಕನೆಕ್ಷನ್‌ ಕೊಡಲಾಗುವುದಿಲ್ಲ. ಆ ಕಾರಣದಿಂದ ಕಾವೂರುಪದವು ಸಹಿತ ಕೆಲವು ಭಾಗಗಳಲ್ಲಿ ಡ್ರೈನೇಜ್‌ ಸಮಸ್ಯೆ ಇದೆ. ಎಡಿಬಿ ಯೋಜನೆಯಡಿಯಲ್ಲಿ ಸರ್ವೆ ಕಾರ್ಯ ಆಗುತ್ತಿದೆ. ಸ್ಥಳ ಒತ್ತುವರಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಡ್ರೈನೇಜ್‌ ಸಂಪರ್ಕ ಕಷ್ಟವಾಗುತ್ತಿದೆ.’
-ಮಧುಕಿರಣ್‌  ಸ್ಥಳೀಯ ಕಾರ್ಪೋರೇಟರ್‌

ಪಾಲಿಕೆಯಲ್ಲಿ ಸಾರ್ವಜನಿಕರ ಸಮಸ್ಯೆ ಕೇಳೋರಿಲ್ಲ
‘ಕಾವೂರು ಪದವು ಭಾಗದಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗಿಲ್ಲ. ಇದರಿಂದ ರಸ್ತೆಯಲ್ಲೇ ಒಳಚರಂಡಿ ನೀರು ಹರಿಯುತ್ತದೆ. ಇದರಿಂದ ರೋಗಹರಡುವ ಭೀತಿಯಿಂದ ಅಲ್ಲಿನ ನಿವಾಸಿಗಳು ಬದುಕುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗೆ ಈ ಬಗ್ಗೆ ದೂರು ನೀಡಿದರೆ ಕಾರಣ ನೀಡುತ್ತಾರೆ. ಹಾಗಾಗಿ ಪ್ರಧಾನಿಗೆ ಪತ್ರ ಬರೆದೆವು. ಈ ಪತ್ರದ ಬಗ್ಗೆ ಯಾವುದಾದರೂ ಕ್ರಮಕೈಗೊಳ್ಳಲಾಗಿದೆಯೇ ಎನ್ನುವ ಬಗ್ಗೆ ಪಾಲಿಕೆಗೆ ಹಲವು ಬಾರಿ ಅಲೆದಾಡಿದ್ದೇನೆ. ಆದರೆ ಈ ಬಗ್ಗೆ ಅಧಿಕಾರಿಗಳಿಗೆ ವಿಷಯವೇ ತಿಳಿದಿಲ್ಲ. ಪ್ರಧಾನಿ ಅವರ ಪತ್ರಕ್ಕೆ ಬೆಲೆ ಇಲ್ಲದ ಮೇಲೆ ನಮ್ಮ ಸಮಸ್ಯೆಗೆ ಪಾಲಿಕೆಯಲ್ಲಿ ಬೆಲೆ ಸಿಕ್ಕಿತೇ’
– ಫೆಲ್ಸಿ ರೇಗೋ ,ದೂರುದಾರರು

– ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next