Advertisement

ಪೇಟೆ ಹತ್ತಿರವಿದ್ದರೂ ಸಂಪರ್ಕಿಸಲು ವ್ಯವಸ್ಥಿತ ರಸ್ತೆಯೇ ಇಲ್ಲ!

10:15 PM Aug 27, 2021 | Team Udayavani |

ಮುಳೂರು ಗ್ರಾಮವನ್ನು ಸಂಪರ್ಕಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಇಲ್ಲಿನ ಪ್ರಥಮ ಆದ್ಯತೆಯಾಗಿದೆ. ಗ್ರಾಮದ ತ್ಯಾಜ್ಯ ಸಂಗ್ರಹ ಘಟಕ ಶೀಘ್ರ ಕಾರ್ಯಾರಂಭಿಸಬೇಕಿದೆ. ಗ್ರಾಮದ ಕೊಳವೆಬಾವಿಗಳ ವಿದ್ಯುತ್‌ ಸಂಪರ್ಕಕ್ಕೆ ಅನುದಾನ ಒದಗಿಸಲು ಕ್ರಮ ವಹಿಸಬೇಕಿದೆ. ಈ ಬಗ್ಗೆ ಉದಯವಾಣಿ ಸುದಿನದ “ಒಂದು ಊರು-ಹಲವು ದೂರು’ ಅಭಿಯಾನದ ಮೂಲಕ ಗಮನಸೆಳೆಯಲಾಗಿದೆ.

Advertisement

ಕೈಕಂಬ: ಮೂಳೂರು ಗ್ರಾಮದ ವ್ಯಾಪ್ತಿಯಲ್ಲಿ ಗುರುಪುರ ಪೇಟೆ ಇದ್ದರೂ ಇದನ್ನು ಸಂಪರ್ಕಿಸಲು ಹಳ್ಳಿಗರಿಗೆ ವ್ಯವಸ್ಥಿತ ರಸ್ತೆಯೇ ಇಲ್ಲದ ಕಾರಣ ಸಂಚಾರ ಸಂಕಷ್ಟಕರವಾಗಿದೆ. ಸಂಚಾರಕ್ಕೆ ಕಾಲುದಾರಿಯೇ ಗತಿ. ತುರ್ತು ಸಂದರ್ಭ ವೃದ್ಧರನ್ನು, ಅನಾರೋಗ್ಯದಲ್ಲಿರುವರನ್ನು ಇಲ್ಲಿ ಹೊತ್ತುಕೊಂಡೇ ಬರಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ. ಬರ್ಕೆ, ಗುಡ್ಡುಹಿತ್ಲು, ಮಂಜೇಹಿತ್ಲು, ಬಡಕರೆ ಪ್ರದೇಶಗಳಿಗೆ ಸಂಪರ್ಕಿಸುವ ರಸ್ತೆ ಇಲ್ಲವಾಗಿದ್ದು, ರಸ್ತೆ ನಿರ್ಮಿಸಿಕೊಡುವಂತೆ ಸ್ಥಳೀಯರ ಬಹುಬೇಡಿಕೆ ಇದೆ.

ಗುರುಪುರ ಪೇಟೆಯಲ್ಲಿಯೇ ಇರುವ ಈಗ ಮುಚ್ಚಿರುವ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಹಿಂಬದಿಯ ಪ್ರದೇಶ ಬರ್ಕೆ. ಇಲ್ಲಿನ ಸುಮಾರು 30 ಮನೆಗಳಿಗೆ ರಸ್ತೆ ಸಂಪರ್ಕವೇ ಇಲ್ಲ. ಈ ಪ್ರದೇಶದ ಜನರು ಕಾಲುದಾರಿಯಲ್ಲಿಯೇ ಗದ್ದೆ ಬದುವಿನಲ್ಲಿಯೇ ನಡೆದುಕೊಂಡು ಹೋಗಬೇಕಾಗಿದೆ. ಮಳೆಗಾಲದಲ್ಲಿ ಇಲ್ಲಿನ ಜನರು ಮನೆಗಳಿಗೆ ಹೋಗಲು ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಿಂದೂ ಹಿ.ಪ್ರಾ. ಶಾಲೆಯಿಂದ ಬರ್ಕೆಯಾಗಿ ಬೆಳ್ಳೂರಿಗೆ ರಸ್ತೆಯಾದಲ್ಲಿ ಪೊಳಲಿಗೆ ಇದು ಸಮೀಪದ ಸಂಪರ್ಕ ರಸ್ತೆಯಾಗಲಿದೆ. ಇದು ಇಲ್ಲಿನ ಜನರ ಬಹುಕಾಲದ ಬೇಡಿಕೆ.
ಮಂಜೇಹಿತ್ಲು-ಬಡಕರೆ ಪ್ರದೇಶಗಳಿಗೂ ರಸ್ತೆಯೇ ಇಲ್ಲ. ಸ.ಪ.ಪೂ. ಕಾಲೇಜಿನ ಹಿಂಬದಿ ಪ್ರದೇಶದ ಸುಮಾರು 50 ಮನೆಗಳಿಗೆ ಸಂಪರ್ಕ ರಸ್ತೆಗಳೇ ಇಲ್ಲ. ಗುಡ್ಡುಹಿತ್ಲು- ಹೊಸಮನೆ ಪ್ರದೇಶ 50 ಮನೆಗಳಿಗೆ ಇನ್ನೂ ಸಂಪರ್ಕ ರಸ್ತೆ ಇಲ್ಲ. ಕಾಲುದಾರಿಯೇ ಗತಿ. ಇಲ್ಲಿನ ತೋಡಿಗೆ ಸೇತುವೆ ನಿರ್ಮಿಸಿದರೆ ಜನರ ಸಂಚಾರಕ್ಕೆ ಅನುಕೂಲವಾಗಲಿದೆ.

ಇದನ್ನೂ ಓದಿ:ವಿಮಾನ ಚಲಿಸುತ್ತಿರುವಾಗಲೇ ಪೈಲಟ್‌ಗೆ ಹೃದಯಾಘಾತ; ನಾಗ್ಪುರದಲ್ಲಿ ವಿಮಾನ ತುರ್ತು ಭೂಸ್ಪರ್ಶ

ಗುರುಪುರ ಪ.ಪೂ. ಕಾಲೇಜು
ಪರಿಸರದಲ್ಲಿಯೇ ಪ್ರಾಥಮಿಕ ಶಿಕ್ಷಣ ಆರಂಭಿಸಲಿ
ಗುರುಪುರ ಪ.ಪೂ. ಕಾಲೇಜಿನಲ್ಲಿ ಈಗ 8ನೇ ತರಗತಿಯಿಂದ ಪ.ಪೂ. ಕಾಲೇಜಿನ ವರೆಗೆ ತರಗತಿಗಳು ಇದೆ. ಗುರುಪುರ ಪೇಟೆಯಲ್ಲಿನ ಹಿಂದೂ ಹಿ.ಪ್ರಾ. ಶಾಲೆ ಈಗಾಗಲೇ ಮುಚ್ಚಿದೆ. ನಡುಗುಡ್ಡೆಯ ದ.ಕ. ಜಿ.ಪಂ. ಸರಕಾರಿ ಶಾಲೆಯಲ್ಲಿ 1ರಿಂದ 5ರ ವರೆಗೆ ಶಾಲಾ ತರಗತಿಗಳು ನಡೆಯುತ್ತಿದ್ದು, ಈಗ ಕೇವಲ 6 ಮಕ್ಕಳನ್ನು ಹೊಂದಿದೆ. ಶಿಕ್ಷಕರ ಕೊರತೆಯಿಂದಾಗಿ ಶಾಲೆ ಮುಚ್ಚುವ ಪರಿಸ್ಥಿತಿಗೆ ಬಂದಿದೆ. ಈ ಶಾಲೆ ಮುಚ್ಚಿದರೆ ಮೂಳೂರು ಗ್ರಾಮದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಶಾಲೆ ಕೊರತೆ ಎದುರಾಗುತ್ತದೆ. ಇದಕ್ಕಾಗಿ ಅಲ್ಲಿನ ಗ್ರಾಮಸ್ಥರು 1ರಿಂದ 7ನೇ ತರಗತಿಯ ಪ್ರಾಥಮಿಕ ಶಿಕ್ಷಣವನ್ನು ಗುರುಪುರ ಸರಕಾರಿ ಪ. ಪೂ. ಕಾಲೇಜಿನ ಪರಿಸರದಲ್ಲಿ ಆರಂಭಿಸಬೇಕು ಎಂದು ಜನರ ಆಗ್ರಹವಾಗಿದೆ.

Advertisement

ಇತರ ಸಮಸ್ಯೆಗಳೇನು?
– ಬಂಡಸಾಲೆ -ಕಾರಮೊಗರು ರಸ್ತೆಗೆ ಡಾಮರು ಹಾಕಬೇಕಿದೆ.
– ವಿಕಾಸನಗರ ಯುನೆಸ್ಕೊ ಬಳಿಯಿಂದ ಕಂದಾವರ ತನಕ ಕಚ್ಚಾ ರಸ್ತೆ ಅಭಿವೃದ್ಧಿ, ಬಡಕರೆ -ನಡುಗುಡ್ಡೆ ಹೊಸ ರಸ್ತೆ ನಿರ್ಮಿಸಬೇಕಿದೆ.
– ಅಣೆಬಳಿ, ಗ್ರಾ.ಪಂ.ನ ಹಳೆ ಕಟ್ಟಡ ಪ್ರದೇಶ, ಮೆಸ್ಕಾಂ ಬಳಿ, ಪಡ್ಡಾಯಿ ಪದವು, ವಿಕಾಸನಗರದಲ್ಲಿರುವ ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ಗ್ರಾ.ಪಂ. ಬಳಿ ಅನುದಾನ ಕೊರತೆಯಿದೆ. ಈ ಬಗ್ಗೆ ಗ್ರಾ.ಪಂ. ಅನುದಾನಕ್ಕಾಗಿ ಸರಕಾರಕ್ಕೆ ಮನವಿ ಮಾಡಿದೆ. ಸರಕಾರವು ಗಮನ ಹರಿಸಿ ನೀರಿನ ಸಮಸ್ಯೆಗೆ ಪರಿಹಾರ ನೀಡಬೇಕಿದೆ.
– ಗುಡ್ಡದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ ಎಂಬ ದೂರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಇದಕ್ಕೆ ಪರಿಹಾರವಾಗಿ ಗುರುಪುರ ಅಳಾಗುಡ್ಡೆಯಲ್ಲಿ ಒಣ ತ್ಯಾಜ್ಯ ಸಂಗ್ರಹ ಘಟಕ ಸಿದ್ಧಗೊಂಡಿದೆ. ಇದನ್ನು ಶೀಘ್ರ ಕಾರ್ಯಾರಂಭ ಮಾಡಬೇಕಿದೆ.
– ಗುರುಪುರ ಗ್ರಾ.ಪಂ. ಪ್ರದೇಶದಲ್ಲಿಯೇ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಇದೆ.
– ಮೂಳೂರು ಸೈಟ್‌ ಭೂಕುಸಿತದಿಂದ ನಿರ್ವಸಿತರಾದವರಿಗೆ ಗಂಜಿಮಠದಲ್ಲಿ ಈಗಾಗಲೇ 1.05 ಎಕ್ರೆ ಜಾಗ ಕಾದಿರಿ ಸಲಾಗಿದೆ. ಇನ್ನೂ 3 ಎಕರೆ ಪ್ರಸ್ತಾವನೆಗೆ ಹೋಗಿದೆ. ನಿರ್ವಸಿತರು ಸಂಕಷ್ಟದಲ್ಲಿದ್ದು, ಶೀಘ್ರ ಹಕ್ಕು ಪತ್ರ ನೀಡಬೇಕಿದೆ.

-ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next