Advertisement

ಪ್ರತ್ಯೇಕ ಧರ್ಮ ವಿವಾದಕ್ಕೆ ಸಿಎಂ ಕಾರಣವಲ್ಲ

12:23 PM Jul 31, 2017 | Team Udayavani |

ಮೈಸೂರು: ಲಿಂಗಾಯತ ಧರ್ಮ ಬಂಡಾಯ ಧರ್ಮವಾಗಿದ್ದು, ಅವರಿಗೆ ಪ್ರತ್ಯೇಕ ಧರ್ಮಬೇಕಿದೆ. ಆದರೆ, ವೀರಶೈವರು ತಾವು ಹಿಂದುಗಳೆಂದ ಮೇಲೆ ಅವರಿಗೆ ಪ್ರತ್ಯೇಕ ಧರ್ಮದ ಅವಶ್ಯಕತೆಯಿಲ್ಲ ಎಂದು ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಹೇಳಿದರು.

Advertisement

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮತ್ತು ರಾಕೇಶ್‌ ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಸಂಸ್ಥೆ ವತಿಯಿಂದ ದಿ.ರಾಕೇಶ್‌ ಸಿದ್ದರಾಮಯ್ಯ ಅವರ ಒಂದು ವರ್ಷದ ನೆನಪಿನಲ್ಲಿ ಭಾನುವಾರ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾಜಿಕ ನ್ಯಾಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಚರ್ಚೆಯಾಗುತ್ತಿರುವ ಲಿಂಗಾಯತ ಧರ್ಮ ಸ್ಥಾಪನೆ ವಿಚಾರ 9ನೇ ಶತಮಾನಗಳ ಹಿಂದೆಯೇ ಜನ್ಮತಾಳಿದೆ.

ಹೀಗಾಗಿ ಲಿಂಗಾಯತ ಧರ್ಮ ಸ್ಥಾಪನೆ ವಿಚಾರ ಸಿಎಂ ಸಿದ್ದರಾಮಯ್ಯ ಅವರಿಂದ ಹುಟ್ಟಿದ್ದಲ್ಲ. ಹಲವು ವರ್ಷಗಳ ಹಿಂದೆ ಹಿಂದೂ ಧರ್ಮದಲ್ಲಿನ ಲೋಪಗಳನ್ನು ತಿದ್ದಿದ ಬಸವಣ್ಣ ಲಿಂಗಾಯತ ಧರ್ಮದ ಜನಕರಾಗಿದ್ದಾರೆ. ಆದರೆ, ವೀರಶೈವರು ಹಿಂದುಗಳೆನ್ನುವುದರಿಂದ ಅವರು ಮಾತೃ ಧರ್ಮದಲ್ಲೇ ಇರಬೇಕಿದ್ದು, ಇದರಿಂದ ಯಾವುದೇ ಸ್ಥಾನ, ಮಾನ ಹೋಗುವುದಿಲ್ಲ. ಆದರೆ ಬಂಡಾಯ ಧರ್ಮವಾಗಿದ್ದ ಲಿಂಗಾಯಿತರಿಗೆ ಪ್ರತ್ಯೇಕ ಧರ್ಮದ ಅಗತ್ಯವಿದೆ ಎಂದರು.

ಸಿದ್ದು ದೇಶಕ್ಕೆ ಮಾದರಿ: ಈ ಹಿಂದೆ ರಾಷ್ಟ್ರೀಯ ಪಕ್ಷಗಳಿಗೆ ಸ್ಥಳೀಯ ಸಮಸ್ಯೆಗಳೆಂದರೆ ಅಲರ್ಜಿಯಾಗಿದ್ದ ಪರಿಣಾಮ ಇಂತಹ ಸಮಸ್ಯೆಗಳ ಬಗ್ಗೆ ಅಸಡ್ಡೆ ತೋರುತ್ತಿದ್ದವು. ಆದರೆ, ಇಂತಹ ರಾಷ್ಟ್ರೀಯ ಪಕ್ಷಗಳಿಗೆ ಪ್ರಾದೇಶಿಕ ದೀಕ್ಷೆ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶಕ್ಕೆ ಮಾದರಿಯಾಗುತ್ತಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಸಿದ್ದರಾಮಯ್ಯ ಅವರು ಕನ್ನಡಿಗರ ಮೇಲೆ ಹಿಂದಿ ಹೇರಿಕೆ, ಕನ್ನಡ ಧ್ವಜದಂತಹ ವಿಚಾರಗಳ ಬಗ್ಗೆ ಕಾಂಗ್ರೆಸ್‌ ಪಕ್ಷದಲ್ಲಿದ್ದುಕೊಂಡು ನಿರ್ಧಾರ ತೆಗೆದುಕೊಂಡಿರುವುದು ಶ್ಲಾಘನೀಯವಾಗಿದೆ. ಪ್ರಾದೇಶಿಕ ವಿಚಾರಗಳನ್ನು ಅಜೆಂಡಾ ಮಾಡುವ ಮೂಲಕ ದೇಶಾದ್ಯಂತ ಚರ್ಚೆ ಹುಟ್ಟು ಹಾಕುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಕನ್ನಡ ಅಸ್ಮಿತೆ ಉಳಿಸುತ್ತಿದ್ದಾರೆ: ತಮಿಳಿಗರಿಗೆ ಬುದ್ಧಿ ಕಲಿಸಲು 1960ರಲ್ಲಿ ಮಾ. ರಾಮಮೂರ್ತಿ ಅವರು ಅರಿಶಿನ-ಕೆಂಪು ಬಣ್ಣದ ಧ್ವಜವನ್ನು ಉಟ್ಟುಹಾಕಿದರು. ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಸರ್ಕಾರಿ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ಕಡ್ಡಾಯ ಮಾಡಿದ್ದರು. ಆದರೆ, ಜಗದೀಶ್‌ ಶೆಟ್ಟರ್‌ ಕಾಲದಲ್ಲಿ ಈ ಆದೇಶವನ್ನು ಹಿಂಪಡೆಯಲಾಗಿದೆ.

ಆದರೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೂಮ್ಮೆ ಪ್ರತ್ಯೇಕ ಧ್ವಜಕ್ಕಾಗಿ ಸಮಿತಿ ರಚಿಸುವ ಮೂಲಕ ಕನ್ನಡದ ಅಸ್ಮಿತೆ ಉಳಿಸಲು ಮುಂದಾಗಿದ್ದು, ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಮಾಡಿಕೊಳ್ಳುವುದರಿಂದ ರಾಷ್ಟ್ರೀಯತೆ, ರಾಷ್ಟ್ರಧ್ವಜಕ್ಕೆ ಯಾವ ಅಪಮಾನವಿಲ್ಲ ಎಂದ ಅವರು, ಕನ್ನಡ ಭಾಷೆಯನ್ನು ಕಾಪಾಡುವ ರಾಜಕಾರಣಿಗಳನ್ನು, ಕನ್ನಡಿಗರು ಕಾಪಾಡುತ್ತಾರೆ. ಆದರೆ ಈವರೆಗೆ ಆಡಳಿತ ನಡೆಸಿದ ಸರ್ಕಾರಗಳು ಕರ್ನಾಟಕ ಸರ್ಕಾರ ಎಂದು ಕರೆಸಿಕೊಂಡರೆ, ಸಿದ್ದರಾಮಯ್ಯ ಸರ್ಕಾರ ಕನ್ನಡ ಸರ್ಕಾರವೆಂದು ಕರೆಸಿಕೊಳ್ಳುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಡಾ.ಹಿ.ಶಿ.ರಾಮಚಂದ್ರಗೌಡ, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಡಿ.ರಂದೀಪ್‌, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ, ಆಹಾರ ಇಲಾಖೆ ಉಪನಿರ್ದೇಶಕ ಡಾ.ಕಾ. ರಾಮೇಶ್ವರಪ್ಪ, ಜಿಪಂ ಸಿಇಒ ಪಿ. ಶಿವಶಂಕರ್‌, ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ. ದಯಾನಂದ ಮಾನೆ, ಬೆಂಗಳೂರು ವಿವಿ ಕುಲಸಚಿವ ಪ್ರೊ.ಬಿ.ಕೆ.ರವಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್‌.ಶಿವರಾಮು ಹಾಜರಿದ್ದರು.

ಚಿದಾನಂದಮೂರ್ತಿ ಓರ್ವ ಚಿಂತಾಜನಕ ಮೂರ್ತಿ
ಬಾಲ್ಯದಲ್ಲಿ ನಾನು ವೀರಶೈವ ಲಿಂಗಾಯತ ಖಾನಾವಳಿಗೆ ಊಟಕ್ಕೆ ಹೋಗುತ್ತಿದ್ದಾಗ ಅಲ್ಲಿ ನಿನ್ನದು ಯಾವ ಧರ್ಮ ಎಂದು  ಕೇಳುತ್ತಿದ್ದರು. ಈ ಸಂದರ್ಭದಲ್ಲಿ ನಾನು ಲಿಂಗಾಯತ ಅಥವಾ ವೀರಶೈವನೆಂದು ಹೇಳಿಕೊಂಡರೆ ಇಬ್ಬರಿಗೂ ಕೋಪ ಬರಲಿದೆ ಎಂಬ ಕಾರಣದಿಂದ ನಾನು ಲಿಂಗಾಯತ ಬಾರ್‌ ವೀರಶೈವ ಎನ್ನುತ್ತಿದ್ದೆ ಎಂದ ಪ್ರೊ. ಚಂದ್ರಶೇಖರ ಪಾಟೀಲ, ತಾನು ಲಿಂಗಾಯತನು ಅಲ್ಲ, ವೀರಶೈವನೂ ಅಲ್ಲ ಎಂಬ ಚಿಂತೆಗಳನ್ನು ಹುಟ್ಟುಹಾಕುವ ಸಂಶೋಧಕ ಚಿದಾನಂದಮೂರ್ತಿ ಓರ್ವ ಚಿಂತಾಜನಕ ಮೂರ್ತಿ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next