ಹುಬ್ಬಳ್ಳಿ: ಬಿಟ್ ಕಾಯಿನ್ ವಿಚಾರವಾಗಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಯಾರೇ ತಪ್ಪಿತಸ್ಥರಿದ್ದರು ಕ್ರಮ ಕೈಗೊಳ್ಳಲಾಗುವುದು. ವಿಪಕ್ಷಗಳು ಪ್ರಕರಣದ ಬಗ್ಗೆ ಆರೋಪ ಮಾಡುವ ಬದಲು ದಾಖಲೆ ಒದಗಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಕ್ರಮ ಕೈಗೊಳ್ಳಲಿದ್ದಾರೆ. ಇದರಲ್ಲಿ ಸಂಶಯ ಬೇಡ. ಪ್ರಕರಣ ಕುರಿತು ಯಾವುದೇ ಪಕ್ಷದವರು ದಾಖಲೆ ನೀಡಿದರು ಸರಿ, ಕಾಂಗ್ರೆಸ್ ನವರು ಏನೇನೊ ಆರೋಪ ಮಾಡುವ ಬದಲು ಸೂಕ್ತ ದಾಖಲೆಗಳನ್ನು ನೀಡಲಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ನಲ್ಲಿ ಎರಡು ಬಣಗಳಾಗಿವೆ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಅವರವರಲ್ಲೇ ಕಚ್ಚಾಟ ಶುರುವಾಗಿದೆ. ಈ ಬಗ್ಗೆ ತಾವು ಯಾವುದೇ ಟೀಕೆ ಟಿಪ್ಪಣಿಗೆ ಹೋಗುವುದಿಲ್ಲ ಎಂದರು.
ಇದನ್ನೂ ಓದಿ:ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಇನ್ಫೋಸಿಸ್ ನಿರ್ಮಿಸಿದ ನೂತನ ಘಟಕ ಲೋಕಾರ್ಪಣೆ
ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿ ಕುರಿತಾಗಿ ಸಮೀಕ್ಷೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದು, ಪರಿಹಾರಕ್ಕೆ ಸರಕಾರ ಕ್ರಮ ಕೈಗೊಳ್ಳಲಿದೆ. ಸಿಎಂ ಬೊಮ್ಮಾಯಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸುವುದು ಖಚಿತ. ಅದರ ಭಾಗವಾಗಿಯೇ ರಾಜ್ಯದ ನಾಲ್ಕು ಕಡೆಯಿಂದ ಜನ ಸ್ವರಾಜ್ ಯಾತ್ರೆ ಕೈಗೊಳ್ಳಲಾಗುತ್ತಿದೆ ಎಂದರು.