ಚಿಕ್ಕಬಳ್ಳಾಪುರ: ಹಾಲಿ ಇರುವ 9 ಕಾಂಗ್ರೆಸ್ ಸಂಸದರ ಕ್ಷೇತ್ರಗಳನ್ನು ಜೆಡಿಎಸ್‌ಗೆ ಯಾವುದೇ ಕಾರಣಕ್ಕೂ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಸಂಸದ ಎಂ.ವೀರಪ್ಪ ಮೊಯ್ಲಿ ತಿಳಿಸಿದರು.
ನಂದಿಗಿರಿ ಧಾಮದಲ್ಲಿ ಶನಿವಾರ ನಂದಿಸಂತೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಕುಮಾರಸ್ವಾಮಿ ಪುತ್ರ ನಿಖೀಲ್‌ರನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಕಣಕ್ಕೆ ಇಳಿಸಲಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೊಯ್ಲಿ, 2014ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ, ಹಾಲಿ ಇರುವ 9 ಕಾಂಗ್ರೆಸ್ ಸಂಸದರ ಕ್ಷೇತ್ರಗಳನ್ನು ಜೆಡಿಎಸ್‌ಗೆ ಯಾವುದೇ ಕಾರಣಕ್ಕೂ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಉಳಿದ ಸೀಟುಗಳಿಗೆ ಸಂಬಂಧಿಸಿದಂತೆ ಎರಡೂ ಪಕ್ಷಗಳ ನಡುವೆ ಚರ್ಚೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪ್ರಯೋಗ ಯಶಸ್ವಿಯಾಗಿದ್ದು, ಜನಪರವಾದ ಆಡಳಿತವನ್ನು ನೀಡುತ್ತಿದೆ. ಮುಂದಿನ ಐದು ವರ್ಷಗಳಿಗೆ ಎಚ್.ಡಿ.ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿ ಇರುತ್ತಾರೆ. ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದರು.
ಬಹಳಷ್ಟು ಮಂದಿ ನನ್ನ ಆತ್ಮಕಥನ ಬರೆಯುವಂತೆ ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ, ಕಳೆದ ಎರಡು ತಿಂಗಳಿಂದ ಆತ್ಮಕಥನ ಬರೆಯುತ್ತಿರುವೆ. ಇನ್ನೂ ಶೀರ್ಷಿಕೆ ಕೊಟ್ಟಿಲ್ಲ. ಯಾವಾಗ ಪೂರ್ಣಗೊಳ್ಳುತ್ತೆ ಎನ್ನುವುದನ್ನು ಈಗಲೇ ಹೇಳಲಿಕ್ಕೆ ಆಗುವುದಿಲ್ಲ.
– ಎಂ.ವೀರಪ್ಪ ಮೊಯ್ಲಿ, ಸಂಸದ.