Advertisement

ಒಳ ಒಪ್ಪಂದದ ಪ್ರಶ್ನೆಯೇ ಇಲ್ಲ: ಕುಮಾರಸ್ವಾಮಿ

10:53 AM May 02, 2017 | Team Udayavani |

ಬೆಂಗಳೂರು: “ರಾಜ್ಯದ 224 ಕ್ಷೇತ್ರಗಳಲ್ಲಿ ಜೆಡಿಎಸ್‌ ಕಣಕ್ಕಿಳಿಯುವುದು ನಿಶ್ಚಿತ. ಎಲ್ಲೂ ಹೊರ ಅಥವಾ ಒಳ ಒಪ್ಪಂದದ ಪ್ರಶ್ನೆಯೇ ಇಲ್ಲ. ದೇವೇಗೌಡರು-ರೇವಣ್ಣ ಸಿದ್ದರಾಮಯ್ಯ ಅವರ ಜತೆ ಯಾವ ಒಪ್ಪಂದವೂ ಮಾಡಿಕೊಂಡಿಲ್ಲ’ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು,
ಗುಂಡ್ಲುಪೇಟೆ ಮತ್ತು ನಂಜನಗೂಡು ಉಪ ಚುನಾವಣೆಯಲ್ಲೇ ನಾವು ಅಭ್ಯರ್ಥಿ ಕಣಕ್ಕಿಳಿಸದಿರುವುದನ್ನೇ ನಾನಾ ರೀತಿಯ ವ್ಯಾಖ್ಯಾನ ಮಾಡಲಾಗುತ್ತಿದೆ. ಯಾವ ಒಳ ಒಪ್ಪಂದವೂ ಆಗಿಲ್ಲ ಎಂದು ಹೇಳಿದರು.

Advertisement

ಜೆಡಿಎಸ್‌ನವರು ಸಿಎಂ ಸಿದ್ದರಾಮಯ್ಯ ಅಥವಾ ಕಾಂಗ್ರೆಸ್‌ನ ಗುಲಾಮರಲ್ಲ. ಒಳ ಒಪ್ಪಂದದ ಅಪಪ್ರಚಾರ ಮುಖ್ಯಮಂತ್ರಿ ಕಚೇರಿಯಿಂದಲೇ ಹರಡುತ್ತಿದೆ. ಇಂತಹ ಕುತಂತ್ರಗಳಿಂದ ಜೆಡಿಎಸ್‌ ಮುಗಿಸುವ ಕನಸು ನನಸಾಗದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತಮ ಸ್ಪಂದನೆ: ಬಜೆಟ್‌ ಅಧಿವೇಶನ, ಅನಾರೋಗ್ಯ ಕಾರಣದಿಂದಾಗಿ ಎರಡೂವರೆ ತಿಂಗಳಿನಿಂದ ಹುಬ್ಬಳ್ಳಿ ನಿವಾಸಕ್ಕೆ ಹೋಗಿರಲಿಲ್ಲ. ಇತ್ತೀಚೆಗೆ ನಾಲ್ಕು ದಿನ ಆ ಭಾಗದ ಜಿಲ್ಲೆಗಳ ಪ್ರವಾಸ ಮಾಡಿದ್ದೇನೆ. ಬೆಳಗಾವಿ, ಉತ್ತರ ಕನ್ನಡ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಪಕ್ಷಕ್ಕೆ ಉತ್ತಮ ಸ್ಪಂದನೆ ದೊರೆತಿದೆ.
ರಾಜ್ಯದಲ್ಲಿ ಅಧಿಕಾರ ಹಿಡಿಯವುದೇ ನಮ್ಮ ಗುರಿ ಎಂದರು.

ಮೇ 3 ರಂದು ಬೂತ್‌ ಸಮಿತಿಯ ಸಭೆ ನಡೆಸಲಾಗುವುದು. ಇಡೀ ದಿನ ಕಾರ್ಯಾಗಾರ ನಡೆಯಲಿದ್ದು ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲಾಗುವುದು. ಜಿಲ್ಲಾ ಧ್ಯಕ್ಷರು ಹಾಗೂ ಸಂಭವನೀಯ ಅಭ್ಯರ್ಥಿಗಳು ಅಂದಿನ ಸಭೆಯಲ್ಲಿ
ಭಾಗವಹಿಸಲಿದ್ದಾರೆ ಎಂದು ಹೇಳಿದರು. ಸಭೆಯ ನಂತರ ಮೇ 6 ರಿಂದ ಮತ್ತೆ ಉತ್ತರ ಕರ್ನಾಟಕ ಸೇರಿ ರಾಜ್ಯಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದು ಮುಂದಿನ ಜೂನ್‌ 10 ರವರೆಗೆ ನಿರಂತರ ಪ್ರವಾಸದಲ್ಲಿರುತ್ತೇನೆ ಎಂದು ತಿಳಿಸಿದರು.

ಸಿನಿಮಾ ಸಹಾಯ: ಎಸ್‌.ನಾರಾಯಣ್‌ ತಮ್ಮ ಕುರಿತು ಚಿತ್ರ ನಿರ್ಮಿಸುತ್ತಿರುವ ಕುರಿತು ಪ್ರತಿಕ್ರಿಯಿಸಿ, ಕಳೆದ ಒಂದು ವರ್ಷದ ಹಿಂದೆಯೇ ಆ ಬಗ್ಗೆ ಚರ್ಚಿಸಿದ್ದರು. ಸಿಎಂ ಆಗಿ ನಾನು ಕೈಗೊಂಡ ತೀರ್ಮಾನದಿಂದ ಸಹಾಯವಾಗಿದ್ದ ಪ್ರಭು ಎಂಬ ಅಭಿಮಾನಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅರ್ಜುನ್‌ ಸರ್ಜಾ ನಟಿಸುತ್ತಿದ್ದಾರೆ. ನಾನು 20 ತಿಂಗಳು ಮುಖ್ಯಮಂತ್ರಿಯಾಗಿ ಮಾಡಿದ ಕೆಲಸ ಹಾಗೂ ಕಾರ್ಯಕ್ರಮಗಳು ಜನರಿಗೆ ತಲುಪಿದ ಬಗೆ ಕಥಾವಸ್ತುವುಳ್ಳ ಚಿತ್ರವದು.
ಅದು ಯಾವಾಗ ರಿಲೀಸ್‌ ಆಗುತ್ತೆ ಗೊತ್ತಿಲ್ಲ. ಆದರೆ, ಚುನಾವಣೆ ಸಂದರ್ಭದಲ್ಲಿ ಆದರೆ ಅದರಿಂದಲೂ ಪಕ್ಷಕ್ಕೆ ಒಳ್ಳೆಯದಾಗಬಹುದು ಎಂದು ಅಭಿಪ್ರಾಯಪಟ್ಟರು.

Advertisement

ಸಚಿವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು
ಗ್ರಂಥಾಲಯ ಮೇಲ್ವಿಚಾರಕರ ವೇತನ ಹೆಚ್ಚಿಸಲು 3 ಕೋಟಿ ರೂ. ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ತನ್ವೀರ್‌ ಸೇs… ಅವರ ವಿರುದ್ಧ ಹೋರಾಟ ನಡೆಸಲು ನನ್ನ ಬೆಂಬಲ ಕೇಳಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ಬಂದ ತಕ್ಷಣ ನಾನೇ ಸಚಿವರಿಗೆ ಕರೆ ಮಾಡಿ ವಿಚಾರಿಸಿದೆ. ನನ್ನ ಕಾರು ಚಾಲಕ ಹಾಗೂ ಮತ್ತೂಬ್ಬ ಸಚಿವರ ಆಪ್ತ ಸಹಾಯಕ ಸೇರಿ ಸಂಗ್ರಹಿಸಿದ್ದಾರೆ, ನನಗೆ ಗೊತ್ತಿಲ್ಲ ಎಂದು ಹೇಳಿದರು. ಆದರೂ ಸಚಿವರಾದವರು ಜವಾಬ್ದಾರಿ, ಹೊಣೆಗಾರಿಕೆಯಿಂದ ನಡೆದು ಕೊಳ್ಳಬೇಕು. ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next