Advertisement

ಪಟ್ಟಿಯಿಂದ ಬಂಜಾರರ ಬಿಡುವ ಪ್ರಸ್ತಾವನೆಯಿಲ್ಲ

06:30 AM Feb 16, 2019 | Team Udayavani |

ಬೆಂಗಳೂರು: ಬಂಜಾರ ಸಮುದಾಯವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪಟ್ಟಿಯಿಂದ ಕೈಬಿಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಸಂತ ಸೇವಾಲಾಲ್ ಅವರ 280ನೇ ಜಯಂತೋತ್ಸವ’ದಲ್ಲಿ ಮಾತನಾಡಿದ ಅವರು, ಬಂಜಾರ ಸಮುದಾಯವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಈ ವದಂತಿಗಳಿಗೆ ಯಾರೂ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.

ಬಂಜಾರ ಸಮುದಾಯ ಮತ್ತು ತಾಂಡಗಳ ಅಭಿವೃದ್ದಿಗಾಗಿ ಸರ್ಕಾರ ಹಲವು ಯೋಜನೆಯನ್ನು ರೂಪಿಸಿದೆ. ಸಮುದಾಯದ ಕಸೂತಿ ಕಲೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ಸರ್ಕಾರ ಕ್ರಮ ಕೈಗೊಂಡಿದೆ. ತಾಂಡಗಳ ರಸ್ತೆ ಅಭಿವೃದ್ಧಿಗಾಗಿ “ಸೇವಾಲಾಲ್ ಪ್ರಗತಿ ಕಾಲೋನಿ’ ಯೋಜನೆ ಜಾರಿಗೊಳಿಸಿದೆ. ಸೇವಾಲಾಲ್ ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಯುವಕರ ಏಳ್ಗೆಗಾಗಿ ಜನಪರ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಜನಾಂಗದವರನ್ನು ಉದ್ಯಮಿಗಳನ್ನಾಗಿ ಮಾಡುವ ಗುರಿ ಸರ್ಕಾರದ ಮುಂದಿದು, ಈ ಉದ್ದೇಶದ ಈಡೇರಿಕೆಗಾಗಿ 800 ಕೋಟಿ ರೂ.ಮೀಸಲಿಡಲಾಗಿದೆ. ಶಿಕ್ಷಣದ ಜತೆಗೆ ಹಲವು ಕ್ಷೇತ್ರಗಳಲ್ಲಿ ಅಭಿವೃದ್ದಿ ಹೊಂದಲಿ ಎಂಬ ಕಾರಣಕ್ಕಾಗಿ ಪ್ರಬುದ್ಧ ಯೋಜನೆ, ಸಮೃದ್ಧಿ, ಐರಾವತ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದರು.

ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ, ವಿಧಾನ ಪರಿಷತ್‌ ಸದಸ್ಯ ಪ್ರಕಾಶ್‌ ರಾಥೋಡ್‌ ಮಾತನಾಡಿದರು. ಮಾಜಿ ಸಚಿವರಾದ ಕೆ.ಶಿವಮೂರ್ತಿ, ರುದ್ರಪ್ಪ ಎಂ.ಲಮಾಣಿ, ಬಿ.ಟಿ.ಲಲಿತಾನಾಯಕ್‌, ವಿಧಾನಪರಿಷತ್‌ನ ಮಾಜಿ ಸದಸ್ಯೆ ಜಲಜಾನಾಯ್ಕ, ಜಾನಪದ ವಿವಿ ಕುಲಪತಿ ಡಾ.ಡಿ.ಬಿ.ನಾಯಕ ಉಪಸ್ಥಿತರಿದ್ದರು.

Advertisement

ಸಂತ ಸೇವಾಲಾಲ್ ಅವರ ಹುಟ್ಟೂರು ಸುರಗೊಂಡನಕೊಪ್ಪದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಯೋಜನೆ ರೂಪಿಸಿದೆ. ಇದಕ್ಕಾಗಿ 180 ಕೋಟಿ ರೂ.ಮೀಸಲಿರಿಸಲಾಗಿದ್ದು ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ. ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಸರ್ಕಾರದ ಮೂಲ ಮಂತ್ರವಾಗಿದೆ.
-ಪ್ರಿಯಾಂಕ್‌ ಖರ್ಗೆ

Advertisement

Udayavani is now on Telegram. Click here to join our channel and stay updated with the latest news.

Next