Advertisement
ಅಷ್ಟೇ ಅಲ್ಲ, ಅವರ ಹೊಸ ಪಕ್ಷವು ಮುಂಬರುವ ವಿಧಾನಸಭೆಯಲ್ಲಿಯೂ ಸ್ಪರ್ಧಿಸಲಿದೆ. ಇದೇ ವಿಷಯವಾಗಿ ಉಪೇಂದ್ರ ಅವರು ಶನಿವಾರ ತಮ್ಮ ರುಪ್ಪೀಸ್ ರೆಸಾರ್ಟ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಸದ್ಯ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದು, ಆ ಚಿತ್ರ ಮುಗಿಯುತ್ತಿದ್ದಂತೆಯೇ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿ ದರು. ಅಲ್ಲದೆ,ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ಘೋಷಿಸಿದರು.
Related Articles
Advertisement
ಸದ್ಯಕ್ಕೆ ಹೊಸ ಪಕ್ಷದ ಹೆಸರು, ಲಾಂಛನ ಯಾವುದೂ ತೀರ್ಮಾನವಾಗಿಲ್ಲ ಎಂದು ತಿಳಿಸಿದ ಉಪೇಂದ್ರ, “ಮೊದಲಿಗೆ ಎಲ್ಲರೂ ಬರಲಿ. ನಾವೇನು ಮಾಡಬಹುದು ಎಂದು ಮೊದಲು ತೀರ್ಮಾನವಾಗಲಿ. ಆಸಕ್ತರು ನಮಗೆ ಈಮೇಲ್ ಕಳಿಸಲಿ. ಇನ್ನು ರುಪ್ಪೀಸ್ ರೆಸಾರ್ಟ್‌ಗೆ ಯಾರು ಬೇಕಾದರೂ ಪತ್ರ ಬರೆಯಬಹುದು. ಮೊದಲು ಸಭೆ ನಡೆಸಿ ಆ ನಂತರ ಪಕ್ಷದ ಹೆಸರು, ಚಿಹ್ನೆ ಮುಂತಾದ ವಿಷಯಗಳ ಕುರಿತಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇವೆ. ಮುಂದಿನ ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ’ ಎಂದು ತಿಳಿಸಿದರು.
ಇದೇ 50ನೇ ಸಿನಿಮಾ ಆಗಬಹುದು: ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ವರ್ಷ ಉಪೇಂದ್ರ ಅವರ 50ನೇ ಚಿತ್ರ ಬಿಡುಗಡೆಯಾಗಬಹುದಿತ್ತು. ಆದರೆ, ತಮ್ಮ ರಾಜಕೀಯ ಪ್ರವೇಶವೇ 50ನೇ ಚಿತ್ರವಾಗಬಹುದು ಎನ್ನುತ್ತಾರೆ ಉಪೇಂದ್ರ. “ಜನ ನನ್ನನ್ನು ರಿಯಲ್ ಸ್ಟಾರ್ ಎಂದು ಕರೆದು ಕರೆದೂ, 49 ಸಿನಿಮಾಗಳು ರೀಲ್ ಲೈಫ್ನಲ್ಲಿ ಆದರೆ, 50ನೇ ಸಿನಿಮಾ ನನ್ನ ರಿಯಲ್ ಲೈಫ್ನಲ್ಲಿ ಆಗುವಂತೆ ಕಾಣುತ್ತಿದೆ. ಬಹುಶಃ ರಾಜಕೀಯ ಪ್ರವೇಶವೇ ನನ್ನ 50ನೇ ಸಿನಿಮಾ ಆಗಬಹುದು’ ಎಂದು ನಗುತ್ತಾರೆ ಉಪೇಂದ್ರ. ಅಲ್ಲದೆ, ಮುಂದಿನ ಒಂದು ವರ್ಷ ಯಾವುದೇ ಚಿತ್ರದಲ್ಲೂ ನಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಸದ್ಯಕ್ಕೆ ಒಂದು ಚಿತ್ರ ಮುಗಿಸುವುದು ಬಾಕಿ ಇದೆ. ಅದು ಬಿಟ್ಟರೆ, ಯಾವೊಂದು ಚಿತ್ರವನ್ನೂ ಒಪ್ಪುವುದಿಲ್ಲ. ಆ ನಂತರಹ ಪ್ರಜಾಕೀಯ, ಪ್ರಜಾಕಾರಣದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು. ರಾಜಕೀಯ ಬಿಡುವುದಿಲ್ಲ!: ಈ ಹಿಂದೆ ಹಲವರು ರಾಜಕೀಯ ಪಕ್ಷಗಳನ್ನು ಪ್ರಾರಂಭಿಸಿ, ನಂತರ ಬೇರೆ ಪಕ್ಷಗಳೊಂದಿಗೆ ವಿಲೀನ ಮಾಡುವುದೋ ಅಥವಾ ಆ ಪಕ್ಷವನ್ನೇ ಕೈಬಿಡುವದನ್ನೋ ಮಾಡಿದ್ದಾರೆ. ಆದರೆ, ತಾವು ಯಾವುದೇ ಕಾರಣಕ್ಕೂ ದೂರವಾಗುವುದಿಲ್ಲ ಎಂದು ಉಪೇಂದ್ರ ಸ್ಪಷ್ಟಪಡಿಸಿದರು. ಒಮ್ಮೆ ಚಿತ್ರೀಕರಣದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ, ಮಹಿಳೆಯೊಬ್ಬರು ಬಂದು ಕಿವಿಯಲ್ಲಿ ಒಂದು ಮಾತು ಹೇಳಿದರು. “ಇದೆಲ್ಲಾ ಮಾಡಿದ್ಯಲ್ಲಪ್ಪಾ, ಇನ್ನೂ ಎಷ್ಟು ಮಾಡ್ತೀಯ’ ಎನ್ನುವಂತಿತ್ತು. ಮೊದಲಿನಿಂದಲೂ ನನಗೆ ಏನೋ ಮಾಡಬೇಕು ಎಂಬ ತುಡಿತ ಇತ್ತು. ಅದನ್ನು ಮಾಡುವುದಕ್ಕೆ ಈಗ ಹೊರಟಿದ್ದೀನಿ. ನನಗನ್ನಿಸಿದ್ದು ಮಾಡಲಿಲ್ಲವಲ್ಲ ಎಂಬ ಕೊರಗು ನನ್ನನ್ನು ಕೊನೆಯ ತನಕ ಕಾಡುವುದು ನನಗೆ ಇಷ್ಟವಿಲ್ಲ. ಹಾಗಾಗಿ ಪ್ರಯತ್ನ ಮಾಡುತ್ತಿದ್ದೀನಿ.ನನ್ನ ಪ್ರಕಾರ ಇದು ಮೊದಲ ಗೆಲುವು. ಇನ್ನು ಜನರ ಸಹಕಾರವಿದ್ದರೆ, ಇನ್ನೂ ದೊಡ್ಡ ಗೆಲುವು ನೋಡಬಹುದು ಎಂದರು ಉಪೇಂದ್ರ. ಕರ್ನಾಟಕ ಧ್ವಜ ಬೇಕು!: ಬೇರೆ ಬೇರೆ ವಿಷಯಗಳ ಬಗ್ಗೆ ಹಲವು ಬಾರಿ ಮಾತನಾಡಿರುವ ಉಪೇಂದ್ರ, ಕರ್ನಾಟಕದ ವಿಷಯಗಳ ಕುರಿತಾಗಿ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಅದರಲ್ಲೂ ಇದು ವರೆಗೂ ಕರ್ನಾಟಕದ ಧ್ವಜದ ಕುರಿತಾಗಿ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗಿದ್ದರೂ, ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಕುರಿತು ಪ್ರಶ್ನಿಸಿದಾಗ, “ವೈಯಕ್ತಿಕವಾಗಿ ಹೇಳುವುದಾದರೆ ನನಗೆ ಧ್ವಜ ಬೇಕು. ಆದರೆ, ಈ ವಿಷಯದಲ್ಲಿ ಅನಾವಶ್ಯಕ ರಾಜಕೀಯವಾಗಬಾರದು ಎಂಬುದು ನನ್ನ ಉದ್ದೇಶ. ಇಲ್ಲಿ ರಾಜಕೀಯ ಆಗುವುದಕ್ಕಿಂತ ಹೆಚ್ಚಾಗಿ ಪ್ರಜಾಕೀಯವಾಗಬೇಕು. ಜನರೇ ಈ ಕುರಿತು ಬೇಕು, ಬೇಡಗಳ ಬಗ್ಗೆ ತೀರ್ಮಾನಕೈಗೊಳ್ಳಬೇಕು’ ಎಂದರು ಉಪೇಂದ್ರ. ಉಪೇಂದ್ರರ ಖಾಕಿ ಖದರ್
ಉಪೇಂದ್ರ ಇದುವರೆಗೂ ಹಲವು ಚಿತ್ರಗಳಲ್ಲಿ ಖಾಕಿ ಖದರ್ ಪ್ರದರ್ಶಿಸಿದ್ದಾರೆ. ಶನಿವಾರ ನಡೆದ ಪತ್ರಿಕಾಗೋಷ್ಠಿಗೂ ಅವರು ಖಾಕಿ ಅಂಗಿ ತೊಟ್ಟುಬಂದಿದ್ದರು. ಈ ಕುರಿತು ಮಾತನಾಡಿದ ಅವರು, “ನಾನು ಇಂದು ಖಾಕಿ ತೊಟ್ಟು ಬಂದಿದ್ದಕ್ಕೂ ಕಾರಣ ಇದೆ. ಕಾರಣ ನಮ್ಮದು ಕಾರ್ಮಿಕರ ಪಕ್ಷ. ನಮಗೆ ಜನನಾಯಕರೂ ಬೇಡ, ಜನ ಸೇವಕರೂ ಬೇಡ. ನಮಗೆ ಕೆಲಸ ಮಾಡುವವರಷ್ಟೇ ಬೇಕು. ಕೆಲಸ ಮಾಡುವವರಿಗೆ ಇಲ್ಲಿ ಮೊದಲ ಪ್ರಾಶಸ್ತ್ಯ ಎಂದು ಹೇಳಿದರು. ದುಡ್ಡು ಇಲ್ಲದೆ ರಾಜಕೀಯ
ಪ್ರಮುಖವಾಗಿ ದುಡ್ಡೇ ಇಲ್ಲದೆ ರಾಜಕೀಯ ಮಾಡುವುದು ತಮ್ಮ ಉದ್ದೇಶ ಎನ್ನುತ್ತಾರೆ ಉಪೇಂದ್ರ. “ದುಡ್ಡು ಅಂತ ಬಂದಾಗ ಸಮಸ್ಯೆ ಶುರುವಾಗುತ್ತದೆ. ಈಗ ಪಕ್ಷಕ್ಕೆ ದುಡ್ಡು ಕೊಡೋರು ಸುಮ್ಮನೆ ಕೊಡ್ತಾರಾ? ಹುದ್ದೆ ಕೊಡಬೇಕಲ್ವಾ? ಹಾಗೆ ಹುದ್ದೆ
ಪಡೆದವರು, ಇನ್ನೇನೋ ಮಾಡುತ್ತಾರೆ ಎನ್ನುತ್ತಾರೆ. ನನಗೆ ಎಲ್ಲಾ ಪಕ್ಷಗಳಿಂದಲೂ ಆಹ್ವಾನ ಬಂದಿದೆ. ಆದರೆ, ನಾನು ಯಾವುದೇ ಪಕ್ಷಕ್ಕೂ ಹೋಗುವುದಿಲ್ಲ. ಪ್ರಧಾನಿ ಮೋದಿ
ಅವರು ಸ್ವತ್ಛ ಭಾರತ ಅಭಿಯಾನವನ್ನು ಜಾರಿಗೆ ತಂದಂತೆ, ಸ್ವತ್ಛ ಆಡಳಿತ ಬರಬೇಕು ಎಂಬುದು ನಮ್ಮ ಉದ್ದೇಶ.
– ಉಪೇಂದ್ರ, ನಟ-ನಿರ್ದೇಶಕ ಅನಿಸಿಕೆಗಳನ್ನು ಈ ವಿಳಾಸಕ್ಕೆ ಕಳುಹಿಸಿ
prajakaarana1@gmail.com
prajakaarana2@gmail.com
prajakaarana3@gmail.com