ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಲಾಕ್ ಡೌನ್ ಹೇರುವ ಯೋಚನೆ ಇಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ(ಏಪ್ರಿಲ್ 02) ತಿಳಿಸಿದ್ದಾರೆ. ರಾಜಧಾನಿಯಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸಿಎಂ ಈ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ ಭೀತಿ: ಬೆಂಗಳೂರು ನಗರದಲ್ಲಿ 6-9 ನೇ ತರಗತಿಗಳು ಕ್ಲೋಸ್:ಶಿಕ್ಷಣ ಇಲಾಖೆ ಅಧಿಕೃತ ಆದೇಶ
ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದ್ದರು.
ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಕೇಜ್ರಿವಾಲ್, ದೆಹಲಿಯಲ್ಲಿ ಕೋವಿಡ್ ನಾಲ್ಕನೇ ಅಲೆ ಕಾಣಿಸಿಕೊಂಡಿದ್ದು, ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿದೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ಆದರೆ ನಾವು ಈ ಬಗ್ಗೆ ತೀವ್ರ ನಿಗಾ ವಹಿಸಿದ್ದು, ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
ದೆಹಲಿಯಲ್ಲಿ ಕೋವಿಡ್ ಪರೀಕ್ಷೆ, ಪತ್ತೆ ಹಚ್ಚುವಿಕೆ ಮತ್ತು ಐಸೋಲೇಶನ್ ಬಗ್ಗೆ ಹೆಚ್ಚು ನಿಗಾ ವಹಿಸಿದ್ದೇವೆ. ಜನರು ಕೋವಿಡ್ ಸೋಂಕಿನ ಕುರಿತು ಮುಂಜಾಗ್ರತೆ ವಹಿಸಬೇಕೆಂದು ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದು, ಲಾಕ್ ಡೌನ್ ಹೇರುವ ಯೋಚನೆ ಇಲ್ಲ ಎಂದು ತಿಳಿಸಿದ್ದಾರೆ.