ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದ ನಗರಸಭೆ ವ್ಯಾಪ್ತಿಯಲ್ಲಿ ನಗರಸಭೆ ನಿರ್ಲಕ್ಷ್ಯದಿಂದ ಅಮೂಲ್ಯವಾದ ಶುದ್ಧ ಕುಡಿಯುವ ನೀರು ಪೋಲಾಗುವುದು ಮತ್ತೆ ಶುರುವಾಗಿದೆ. ನಗರದ ವಿವಿಧಡೆಗಳಲ್ಲಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಪೈಪ್‌ಲೈನ್ ಒಡೆದು ಕುಡಿಯುವ ನೀರು ರಸ್ತೆಗಳಲ್ಲಿಯೆ ಹರಿದು ಹೋಗುತ್ತಿರುವುದು ಎದ್ದು ಕಾಣುತ್ತಿದ್ದರೂ ನಗರಸಭೆ ಅಧಿಕಾರಿಗಳು ಮಾತ್ರ ಇತ್ತಕಡೆ ತಲೆ ಹಾಕಿಲ್ಲ.
ನಗರದ ಶಿಡ್ಲಘಟ್ಟ ರಸ್ತೆ, ವಾಪಸಂದ್ರ, ಚಾಮರಾಜನಗರ, ಗಂಗನಮಿದ್ದೆ, ಕಂದವಾರ ಮತ್ತಿತರರ ಕಡೆಗಳಲ್ಲಿ ಪೈಪ್‌ಲೈನ್‌ಗಳು ಹಾಳಾಗಿ ಅಪಾರ ಪ್ರಮಾಣದ ಜೀವ ಜಲ ಸಂರಕ್ಷಣೆ ಇಲ್ಲದೇ ಕೋಡಿ ಹರಿದಂತೆ ರಸ್ತೆಗಳಲ್ಲಿ ಹರಿಯುತ್ತಿದ್ದರೂ ನಗರಸಭೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ನೀರು ಪೋಲಾಗುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ವಹಿಸುತ್ತಿಲ್ಲ ಎಂಬ ಆರೋಪ ನಗರದ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಕಾಲಮಿತಿ ಇಲ್ಲ: ಕೆಲವು ಕಡೆ ನಗರಸಭೆಯಿಂದ ಪೈಪ್‌ಲೈನ್ ದುರಸ್ತಿ ಕಾರ್ಯಕ್ಕಾಗಿ ರಸ್ತೆಯ ಅಕ್ಕಪಕ್ಕದಲ್ಲಿ ಗುಂಡಿಗಳನ್ನು ಆಗೆದು ದುರಸ್ತಿಪಡಿಸದೇ ಹಾಗೆ ಬಿಟ್ಟಿರುವುದರಿಂದ ಅಮೂಲ್ಯವಾದ ಕುಡಿಯುವ ನೀರು ರಸ್ತೆಗಳಿಗೆ ಹರಿಯುವಂತಾಗಿದೆ. ಪೈಪ್‌ಲೈನ್ ದುರಸ್ತಿ ಕಾರ್ಯ ಕಾಲಮಿತಿಯೊಳಗೆ ಪೂರ್ಣ ಗೊಳ್ಳದ ಕಾರಣ ಜೀವ ಜಲ ಹೀಗಿ ಪೋಲಾಗುತ್ತಿದ್ದು,
ಇನ್ನೂ ದುರಸ್ತಿ ಕಾರ್ಯ ಆಗದೆ ಗುಂಡಿಗಳಲ್ಲಿ ಮಣ್ಣು , ಘನ ತಾಜ್ಯ ವಸ್ತುಗಳು ಸೇರಿಕೊಂಡು ಕುಡಿಯುವ ನೀರು ಕೊಳಚೆ ನೀರಾಗಿ ಸಾರ್ವಜನಿಕರ ಮನೆಗಳು ಪೂರೈಕೆಯಾಗುತ್ತಿವೆ. ಇದರಿಂದ ಶುದ್ಧ ಕುಡಿಯುವ ನೀರು ಬದಲಾಗಿ ಕೆಲವು ಮನೆಗಳಿಗೆ ಕಲುಷಿತ ನೀರು ಪೂರೈಕೆ ಆಗುತ್ತಿದೆ. ಜೊತೆಗೆ ನೀರು ಮಲಿನವಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಕೂಡ ಎದುರಾಗಿದೆ.
ನಗರಸಭೆ ಪ್ರತಿ ವರ್ಷ ಪೈಪ್‌ಲೈನ್ ಕಾರ್ಯಕ್ಕೆಂದು ಲಕ್ಷಾಂತರ ರೂ. ವೆಚ್ಚ ಮಾಡುತ್ತಿದೆ. ಆದರೆ, ಗುಣಮಟ್ಟದ ಪೈಪ್‌ಲೈನ್ ಅಳವಡಿಸದ ಕಾರಣ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಪೈಪ್‌ಗ್ಳು ನಗರದ ಎಲ್ಲಿಂದರಲ್ಲಿ ಒಡೆದು ಹಾಳಾಗುತ್ತಿರುವುದರಿಂದ ನೀರು ವ್ಯರ್ಥವಾಗುತ್ತಿದೆ.
ವಾಟ್ಸಪ್ ಗ್ರೂಪ್ ಹಾಕಿದರೂ ಪ್ರಯೋಜವಿಲ್ಲ: ನಗರದ ವಿವಿಧಡೆಗಳಲ್ಲಿ ಪೈಪ್‌ಲೈನ್ ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವ ಚಿತ್ರಗಳನ್ನು ತೆಗೆದು ನಗರಸಭೆ ವಾಟ್ಸಪ್ ಗ್ರೂಪ್ ಹಾಕಿದರೂ ಗಮನಿಸುವರು ಇಲ್ಲ ಎಂಬ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಜತೆಗೆ ನಗರಸಭೆಯ ನೀರು ಸರಬರಾಜು ಶಾಖೆಗೆ ವಿಷಯ ತಿಳಿಸಿದರೂ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ನಗರಸಭೆ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಅಮೂಲ್ಯವಾದ ಜೀವ ಜಲ ಸಂರಕ್ಷಣೆಗೆ ಮುಂದಾಗಬೇಕಿದೆ.