Advertisement

‘4 ಜಿ’ಯುಗದಲ್ಲೂ ‘ನೋ ಜಿ’ಪ್ರದೇಶ

06:20 AM Apr 18, 2018 | Team Udayavani |

ಕುಂದಾಪುರ : ಇದು 4ಜಿ ಯುಗ. ಕುಳಿತಲ್ಲಿಂದಲೇ ವಿಶ್ವಾದ್ಯಂತ ಸಂಪರ್ಕ ಸಾಧ್ಯ. ಆದರೆ ನಕ್ಸಲ್‌ ಪೀಡಿತ ಗ್ರಾಮ ಅಮಾಸೆಬೈಲು ಸಮೀಪದ ಊರವರು ಕರೆಮಾಡಲು 5 ಕಿ.ಮೀ.  ಕ್ರಮಿಸಬೇಕು. ಅದೂ ಬಿಎಸ್ಸೆನ್ನೆಲ್‌ ಸಿಮ್‌ ಇದ್ದರೆ ಮಾತ್ರ! ಕುಂದಾಪುರದಿಂದ 50 ಕಿ. ಮೀ., ಅಮಾಸೆಬೈಲಿನಿಂದ 13 ಕಿ. ಮೀ. ದೂರ ಇರುವ ಜಡ್ಡಿನಗದ್ದೆ ಸಮೀಪದ ಕೆಳಸುಂಕ, ಶ್ಯಾಮೆಹಕ್ಲು, ಗೋಳಿಕಾಡು ಭಾಗದವರ ದೂರ ಸಂಪರ್ಕ ಸಂಕಟ ಇದು. ಇದು ನಕ್ಸಲ್‌ ಪೀಡಿತ ಪ್ರದೇಶ. ಅನಾಹುತ, ಅವಘಡ ಗಳಾದರೆ ಆ್ಯಂಬುಲೆನ್ಸ್‌ ಅಥವಾ ಇತರ ವಾಹನಕ್ಕೆ 5 ಕಿ. ಮೀ. ದೂರ ತೆರಳಿಯೇ ಕರೆ ಮಾಡಬೇಕು. ಈ ಭಾಗದಲ್ಲಿ 100ಕ್ಕೂ ಹೆಚ್ಚು ಮನೆಗಳಿವೆ, 600 ಮಂದಿ ನೆಲೆಸಿದ್ದಾರೆ. ವಿದ್ಯುತ್‌ ಸಂಪರ್ಕ ಆಗಿ 8-10 ವರ್ಷ ಕಳೆದಿವೆ. ಬಸ್‌ ಸಂಪರ್ಕವೂ ಇದೆ. ಆದರೆ ಮೊಬೈಲ್‌, ಸ್ಥಿರ ದೂರವಾಣಿ ಸಂಪರ್ಕ ಇಲ್ಲ.

Advertisement

ಅರ್ಜಿ ಕೊಟ್ಟರೂ ಪ್ರಯೋಜನವಿಲ್ಲ
ಗ್ರಾಮಸ್ಥರು ಉಡುಪಿ ಬಿಎಸ್ಸೆನ್ನೆಲ್‌ ಕಚೇರಿಗೆ ತೆರಳಿ ಟವರ್‌ಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪೊಲೀಸ್‌ ಜನಸಂಪರ್ಕ ಸಭೆಯಲ್ಲೂ  ಪ್ರಸ್ತಾವಿಸಿದ್ದರು. ಕೆಳಸುಂಕದಲ್ಲಿ ಮಿನಿ ಟವರ್‌ ನಿರ್ಮಿಸುವ ಪ್ರಸ್ತಾವ ಇನ್ನೂ ಈಡೇರಿಲ್ಲ.

ಬಿಎಸ್ಸೆನ್ನೆಲ್‌ ಮಾತ್ರ
ಅಮಾಸೆಬೈಲಿನಿಂದ ತುಸು ದೂರದಲ್ಲಿರುವ ಜಡ್ಡಿನಗದ್ದೆಗೂ ಕೇವಲ ಬಿಎಸ್ಸೆನ್ನೆಲ್‌ ಮೊಬೈಲ್‌ ಸಂಕೇತ ಲಭ್ಯ. ಅದು ಆರಂಭವಾದದ್ದು 2014ರಲ್ಲಿ. ಅದಕ್ಕೂ ಹಿಂದೆ ಕರೆ ಮಾಡಲು 10 ಕಿ. ಮೀ. ಕ್ರಮಿಸಬೇಕಿತ್ತು. ಉಳಿದ ಯಾವುದೇ ದೂರಸಂಪರ್ಕ ಕಂಪೆನಿಗಳ ನೆಟ್‌ವರ್ಕ್‌ ಸಿಗದು.

ಕುಂದಾಪುರದಿಂದ ಇರುವ ದೂರ : 50 ಕಿ.ಮೀ.
ಅಮಾಸೆಬೈಲು ಪೇಟೆಯಿಂದ ದೂರ : 13 ಕಿ.ಮೀ.

ಇಲ್ಲಿರುವ ಮನೆಗಳು
ಕೆಳಸುಂಕ 66 
ಗೋಳಿಕಾಡು 40 
ಒಟ್ಟು 100ಕ್ಕೂ ಹೆಚ್ಚು

Advertisement

ನಮ್ಮ ಪ್ರಯತ್ನ ಮಾಡುತ್ತೇವೆ
ಎಲ್ಲೆಡೆೆ ಸಂಪರ್ಕ ಕಲ್ಪಿಸುವುದು ನಮ್ಮ ಉದ್ದೇಶ. ಆ ನಿಟ್ಟಿನಲ್ಲಿ  ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಹೊಸ ಸಂಪರ್ಕ ಕಲ್ಪಿಸುವುದು, ಟವರ್‌ ನಿರ್ಮಿಸುವುದು ಡಿಜಿಎಂ ಮಟ್ಟದ ನಿರ್ಧಾರ. ಇಲ್ಲಿಗೆ ಬಂದ ಅರ್ಜಿಗಳನ್ನು ಅವರಿಗೆ ಕಳುಹಿಸಲಾಗುತ್ತದೆ. ಸಂಸದರ ಕೋಟಾದಲ್ಲೂ ನಿರ್ಮಿಸಲು ಅವಕಾಶವಿದೆ.
– ಮೋಹನ್‌, ಎಜಿಎಂ ಬಿಎಸ್ಸೆನ್ನೆಲ್‌ (ಉಡುಪಿ)

ನಾವು ಸಾಕಷ್ಟು ಬಾರಿ ಯತ್ನಿಸಿದ್ದರೂ ಪ್ರಯೋಜನವಾಗಿಲ್ಲ. ಈ ವರ್ಷವಾದರೂ ಟವರ್‌ ನಿರ್ಮಾಣ ಆಗಲಿ ಎನ್ನುವುದು ಸ್ಥಳೀಯರ ಆಗ್ರಹ. ತುರ್ತು ಸಂಪರ್ಕ ಸಾಧಿಸಲು ಅಸಾಧ್ಯವಾಗಿ ಅನಾಹುತ ಸಂಭವಿಸಿದೆ.
– ಶೇಖರ್‌ ನಾಯ್ಕ , ಕೆಳಸುಂಕ ನಿವಾಸಿ

— ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next