ಸಾಗರ: 2017ರಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಕಾಗೋಡು ತಿಮ್ಮಪ್ಪ ಅವರು 3.17 ಕೋಟಿ ರೂ. ಅನುದಾನ ತಂದಿದ್ದರು. ಆದರೆ ಕ್ರೀಡಾಂಗಣದ ಉದ್ಘಾಟನಾ ಸಂದರ್ಭದಲ್ಲಿ ಕಾಗೋಡು ತಿಮ್ಮಪ್ಪ ಅವರ ಹೆಸರು ಪ್ರಸ್ತಾಪವಾಗಿಲ್ಲ. ಸೌಜನ್ಯಕ್ಕೂ ಆಹ್ವಾನ ಪತ್ರಿಕೆ ಕೊಟ್ಟಿಲ್ಲ, ಕರೆದಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಬೇಸರ ವ್ಯಕ್ತಪಡಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2017 ರಲ್ಲಿ ಒಳಾಂಗಣ ಕ್ರೀಡಾಂಗಣ ಯೋಜನೆಯನ್ನು ಜಾರಿಗೆ ತಂದು ಅದಕ್ಕಾಗಿ 3.12 ಕೋಟಿ ರೂ. ಅನುದಾನ ಮೀಸಲು ಇರಿಸಲಾಗಿತ್ತು. ಈ ಪೈಕಿ 15 ಲಕ್ಷ ರೂ.ಗಳ ಮೊದಲ ಕಂತು ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಪ್ರಾರಂಭ ಮಾಡಲಾಗಿತ್ತು. ಕಾಗೋಡು ತಿಮ್ಮಪ್ಪ ಅವರು ವಿಧಾನಸಭಾಧ್ಯಕ್ಷರಾಗಿದ್ದಾಗ, ಸಚಿವರಾಗಿದ್ದಾಗ ಅನೇಕ ಕಾಮಗಾರಿಗಳನ್ನು ಮಂಜೂರು ಮಾಡಿಸಿ ಚಾಲನೆ ನೀಡಿದ್ದರು. ಈ ಪೈಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಂತೆ ಮೈದಾನ, ಈಜುಕೊಳ, ಮೀನು ಮಾರುಕಟ್ಟೆ ಎಲ್ಲದ್ದಕ್ಕೂ ಅನುದಾನ ತಂದಿದ್ದರು. ಆದರೆ ಈ ಹಿಂದೆ ಬಿಡುಗಡೆಯಾದ ಹಣದ ಬಗ್ಗೆ ಪ್ರಸ್ತಾಪ ಮಾಡಿಲ್ಲದಿರುವುದು ನೋವು ತಂದಿದೆ ಎಂದರು.
ನಗರ ಅಧ್ಯಕ್ಷ ಐ.ಎನ್.ಸುರೇಶಬಾಬು ಮಾತನಾಡಿ, ಸರ್ಕಾರಿ ಆಸ್ಪತ್ರೆಯ ಆಹಾರ ಟೆಂಡರ್ ಅವ್ಯವಹಾರದ ಕುರಿತು ದಾಖಲೆಗಳನ್ನು ಮಾಹಿತಿ ಹಕ್ಕು ಹಾಗೂ ಇತರ ಮೂಲಗಳಿಂದ ಸಂಗ್ರಹಿಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಅಡುಗೆ ಮನೆ ವ್ಯವಸ್ಥೆ ಇರುವಲ್ಲಿ ಟೆಂಡರ್ ಅನ್ವಯವಾಗುವುದಿಲ್ಲ. ಮಾಸಿಕ ಪಥ್ಯದ ಆಹಾರ ಮಾಡಲು 25 ಸಾವಿರ ರೂ.ವೆಚ್ಚದ ಗ್ಯಾಸ್ ಸಿಲೆಂಡರ್,18 ಸಾವಿರ ರೂ. ವಿದ್ಯುತ್ ಬಿಲ್ ಪಾವತಿಸಿರುವ ಮಾಹಿತಿಯಿದೆ. ಟೆಂಡರ್‌ನಲ್ಲಿ ಅಮ್ಮ, ಮಗ, ಇತರರ ಮೂರು ಅರ್ಜಿಗಳೇ ದಾಖಲಾಗಿರುವುದು ಸಂಶಯಾಸ್ಪದವಾಗಿದೆ. ಸದ್ಯದಲ್ಲಿಯೇ ಸಂಪೂರ್ಣ ಮಾಹಿತಿಯೊಂದಿಗೆ ದಾಖಲೆಗಳನ್ನು ಬಹಿರಂಗಪಡಿಸುವುದು ಎಂದರು.
ಗೋಷ್ಠಿಯಲ್ಲಿ ಪ್ರಮುಖರಾದ ಮಧುಮಾಲತಿ, ಮಹಾಬಲ ಕೌತಿ, ವೆಂಕಟೇಶ್ ಮೆಳವರಿಗೆ, ಡಿ. ದಿನೇಶ್, ಆನಂದ್ ಭೀಮನೇರಿ ಇನ್ನಿತರರು ಹಾಜರಿದ್ದರು.
ಸಾಗರ: ಗಣಪತಿ ಕೆರೆ ವಿಚಾರದಲ್ಲಿ ಶಾಸಕ ಎಚ್.ಹಾಲಪ್ಪ ಹರತಾಳು ಬರೀ ಸುಳ್ಳುಗಳನ್ನು ಹೇಳುತ್ತಾರೆ. ಕೆರೆ ಜಾಗದಲ್ಲಿಯೇ ರಾಷ್ಟ್ರಧ್ವಜ ಸ್ತಂಭದ ನಿರ್ಮಾಣವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಹೇಳುತ್ತಿದ್ದಾಗ, ರಾಷ್ಟ್ರಧ್ವಜ ಸ್ತಂಭದ ಉದ್ಘಾಟನೆ ಸಂದರ್ಭದಲ್ಲಿ ನೀವೂ ಪಾಲ್ಗೊಂಡಿದ್ದೀರಲ್ಲಾ ಎಂಬ ಪ್ರಶ್ನೆ ಎದುರಾಯಿತು. ಪ್ರಶ್ನೆಗೆ ಕಿರಿಕಿರಿಗೊಂಡ ಜಯಂತ್, ಅದನ್ನು ಆಗಲೂ ನಾನು ವಿರೋಧಿಸಿದ್ದೆ. ಧ್ವಜ ಹಾರಿಸುವ ಸಂದರ್ಭದಲ್ಲಿ ಕರೆದಾಗ ಹೋಗಿದ್ದೆ. ನೀವು ನಿಮಗೆ ಬೇಕಾದ್ದು ಬರೆದುಕೊಳ್ಳಿ ಎಂದು ಕಿಡಿಕಾರಿದರು.
ಈಗ ರಾಷ್ಟ್ರಧ್ವಜ ಸ್ತಂಭವಿರುವ ಜಾಗವೇ ಕೆರೆಯ ಕಣ್ಣಿನ ಪ್ರದೇಶ. ಈ ಹಿಂದೆ ಕಾಂಗ್ರೆಸ್‌ನ ಪುರಸಭೆಯ ಆಡಳಿತದ ಕಾಲದಲ್ಲಿ ಈ ಭಾಗದಲ್ಲಿ ನಗರದ ಕಸಗಳನ್ನು ಸುರಿದದ್ದು ನಿಜ. ಕೆರೆ ಹಬ್ಬದಲ್ಲಂತೂ ಅರ್ಥವೇ ಇಲ್ಲ. ಕೆರೆಯ ನೀರು ಇಳಿದಿರುವ ಕಾಲದಲ್ಲಿ ಅದರಲ್ಲಿರುವ ಹೂಳು ಸ್ಪಷ್ಟವಾಗಿ ಕಾಣುತ್ತದೆ. ಧ್ವಜ ಸ್ತಂಭವನ್ನು ಖುಲ್ಲಾಗೊಳಿಸಿ ಕೆರೆಯನ್ನು ಉಳಿಸಬೇಕು ಎಂದರು.