Advertisement

ಈ ಕಾಲೇಜಲ್ಲಿ ಗಣಿತ,ಜೀವಶಾಸ್ತ್ರ ಬೋಧಕರೇ ಇಲ್ಲ!

04:06 PM Sep 20, 2018 | |

ಶ್ರೀರಂಗಪಟ್ಟಣ: ಮಧ್ಯಂತರ ಪರೀಕ್ಷೆ ಎದುರಾಗಿದ್ದರೂ ಈ ಕಾಲೇಜಿನಲ್ಲಿ ಗಣಿತ, ಜೀವಶಾಸ್ತ್ರ ಬೋಧಕರಿಲ್ಲ, ಅತಂತ್ರ ಸ್ಥಿತಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ, ಕುಸಿಯುವ ಹಂತದಲ್ಲಿರುವ ಕಾಲೇಜು ಕಟ್ಟಡ, ಭದ್ರತೆ ಇಲ್ಲದೆ ರಾತ್ರಿ ವೇಳೆ ಅನೈತಿಕ
ಚಟುವಟಿಕೆಯ ತಾಣ…

Advertisement

ಇಷ್ಟೆಲ್ಲಾ ಅವ್ಯವಸ್ಥೆಗಳ ಆಗರ ಹೊಂದಿರುವುದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು. ಈ ಕಾಲೇಜಿಗೆ 60 ವರ್ಷಗಳ ಇತಿಹಾಸವಿದೆ. ಒಂದು ಕಾಲದಲ್ಲಿ ಜೂನಿಯರ್‌ ಕಾಲೇಜಿನಲ್ಲಿ ಓದು ವುದೆಂದರೆ ಪ್ರತಿಷ್ಠೆಯ ವಿಷಯವಾಗಿತ್ತು. ಆದರೆ, ಈಗ ಮೂಲ ಸೌಕರ್ಯಗಳಿಲ್ಲದೆ, ಕಾಲೇಜು ಕಟ್ಟಡ ಕುಸಿಯುವ ಹಂತ ತಲುಪಿದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದು ದುರ್ದೈವದ ಸಂಗತಿ. 

ಆರು ತಿಂಗಳಿಂದ ಬೋಧಕರಿಲ್ಲ: ಶ್ರೀರಂಗಪಟ್ಟಣ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳಿಂದ ಪ್ರಥಮ ಪಿಯುಸಿಗೆ 128 ಹಾಗೂ ದ್ವಿತೀಯ ಪಿಯುಸಿಗೆ 191 ವಿದ್ಯಾರ್ಥಿಗಳಿದ್ದಾರೆ. ಒಟ್ಟು 17 ಮಂದಿ
ಬೋಧಕರಿದ್ದು, ಇದರಲ್ಲಿ ಗಣಿತ ಮತ್ತು ಜೀವಶಾಸ್ತ್ರ ವಿಷಯದ ಬೋಧಕರಿಲ್ಲದೆ ವಿದ್ಯಾರ್ಥಿಗಳ ಸ್ಥಿತಿ ಅತಂತ್ರವಾಗಿದೆ.

ಈ ಹಿಂದೆ ಇದ್ದ ಜೀವಶಾಸ್ತ್ರದ ಉಪನ್ಯಾಸಕರನ್ನು ವರ್ಗಾವಣೆ ಮಾಡಲಾಯಿತು. ಆ ಸ್ಥಾನಕ್ಕೆ ಇದುವರೆಗೂ ಯಾರೂ ಬಂದಿಲ್ಲ. ಆರು ತಿಂಗಳಿಂದ ಜೀವಶಾಸ್ತ್ರಕ್ಕೆ ಉಪನ್ಯಾಸಕರಿಲ್ಲ. ಈ ಸಂದರ್ಭದಲ್ಲಿ ಕೆಆರ್‌ಎಸ್‌ನಿಂದ ಒಬ್ಬರು ಉಪನ್ಯಾಸಕರನ್ನು ಇಲ್ಲಿಗೆ ವರ್ಗಾವಣೆ ಮಾಡಿಕೊಂಡರೂ ರಾಜಕೀಯ ಪ್ರತಿನಿಧಿಗಳು ಅವರಿಗೆ ಆರೋಗ್ಯ ಸರಿಯಿಲ್ಲ ಎಂದು ಶಿಫಾರಸು ಪತ್ರ ನೀಡಿದ್ದಾರೆ. ಇದರಿಂದ ಅವರು ಶ್ರೀರಂಗಪಟ್ಟಣ ಕಾಲೇಜಿಗೆ ಬರುತ್ತಿಲ್ಲ.

ಗಣಿತ ಪಾಠ ಮಾಡುವ ಉಪನ್ಯಾಸಕರನ್ನು ಅರಕೆರೆಯಿಂದ ಕರೆಸಿಕೊಂಡರು. ಅವರೂ ಸರಿಯಾಗಿ ಕಾಲೇಜಿಗೆ ಬರುತ್ತಿಲ್ಲ. ಈಗ ಮಧ್ಯಂತರ ಪರೀಕ್ಷೆ ಅಕ್ಟೋಬರ್‌ 3ಕ್ಕೆ ಇದೆ. ಗಣಿತ, ಜೀವಶಾಸ್ತ್ರ ಉಪನ್ಯಾಸಕರಿಲ್ಲದೇ ವಿದ್ಯಾರ್ಥಿಗಳು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕರು ಗಮನಹರಿಸದಿರುವುದು ವಿಪರ್ಯಾಸದ ಸಂಗತಿ. ವಿದ್ಯಾರ್ಥಿಗಳ ಪೋಷಕರಲ್ಲಿ ಮಕ್ಕಳ ಬಗ್ಗೆ ಆತಂಕ ಶುರುವಾಗಿದೆ.

Advertisement

ಕುಸಿಯುವ ಹಂತದಲ್ಲಿ ಕಟ್ಟಡ: 60 ವರ್ಷ ಪೂರೈಸಿರುವ ಶ್ರೀರಂಗಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡ ಸರಿಯಾದ ನಿರ್ವಹಣೆ ಇಲ್ಲದೇ ಕುಸಿಯುವ ಹಂತ ತಲುಪಿದೆ. ಪಾಠ ಮಾಡುವ ಕೊಠಡಿಗಳಲ್ಲಿ ಬೋಧಕರು ಹಾಗೂ ವಿದ್ಯಾರ್ಥಿಗಳ ಮೇಲೆ ಮೇಲ್ಛಾವಣಿಯ ಗಾರೆ ಚೆಕ್ಕೆಗಳು ಉದುರುತ್ತಿದೆ. ಯಾವಾಗ ತಲೆ ಮೇಲೆ ಬಿದ್ದು ಪ್ರಾಣಾಪಾಯ ಸಂಭವಿಸುತ್ತದೋ ಎಂದು ಬೋಧಕರು ಹಾಗೂ ವಿದ್ಯಾರ್ಥಿಗಳು ಕೈಯಲ್ಲಿ ಜೀವ ಹಿಡಿದು ಕೂರಬೇಕಾಗಿದೆ.

ಇದಲ್ಲದೆ ಕೊಠಡಿ ಹೊರಗೆ ಒಳಗೆ ನೆಲಹಾಸುಗಳು ಗುಂಡಿ ಬಿದ್ದು, ಗೋಡೆ ಸೇರಿದಂತೆ ಇತರ ಕಂಬಗಳು ಬಿರುಕು ಬಿಟ್ಟಿವೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ಬಗ್ಗೆ ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಸಂಬಂಧಿಸಿದ ಇಲಾಖೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಅಳಲು
ವ್ಯಕ್ತಪಡಿಸುತ್ತಾರೆ.

ಅನೈತಿಕ ಚಟುವಟಿಕೆ ತಾಣ: ಕಾಲೇಜಿಗೆ ರಾತ್ರಿ ಹೊತ್ತಿನಲ್ಲಿ ಕಾವಲುಗಾರರಿಲ್ಲ. ಗೇಟಿಗೆ ಬೀಗಗಳಿಲ್ಲದೆ ಬಾಗಿಲು ತೆರೆದ ಸ್ಥಿತಿಯಲ್ಲಿವೆ. ರಾತ್ರಿ ವೇಳೆ ಕಾಲೇಜಿನ ಆವರಣ ಪ್ರವೇಶಿಸುವ ಪುಂಡ-ಪೋಕರಿಗಳು ಮದ್ಯದ ಬಾಟಲು ಹಿಡಿದು ಕಾಲೇಜಿನ ಕೊಠಡಿಯ ವಿದ್ಯಾರ್ಥಿಗಳ ಬೆಂಚನ್ನೇ ಬಳಸಿ ಆವರಣದಲ್ಲೇ ಅಡುಗೆ ತಯಾರಿಸಿ, ಊಟ, ಮದ್ಯ ಸೇವಿಸಿ ಮೋಜು ಮಸ್ತಿ ಮಾಡಿ, ಬೆಳಗಿನವರೆಗೂ ಅಲ್ಲೇ ಮಲಗಿ ವಿಶ್ರಾಂತಿ ಪಡೆದು ನಂತರ ಅಲ್ಲಿಂದ ತೆರಳುವುದು ದಿನಂಪ್ರತಿ ನಡೆಯುತ್ತಿದೆ.

ಒಟ್ಟಾರೆ ರಾಜಕೀಯ ಹಿತಾಸಕ್ತಿ ಕಾಯುವ ಜನಪ್ರತಿನಿಧಿಗಳು ಸರ್ಕಾರ ಉರುಳುತ್ತಾ ಅಥವಾ ಉಳಿಯುವುದೇ ಎಂದು ಸರ್ಕಾರದ ಕಡೆ ಆಸಕ್ತಿಯಿಂದ ಗಮನಹರಿಸುವ ಬದಲು ತಮಗೆ ಮತ ಕೊಟ್ಟು ಗೆಲ್ಲಿಸಿದ ಜನರ ಸಮಸ್ಯೆ ಹಾಗೂ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ದೃಷ್ಟಿ ಹರಿಸಿದರೆ ಇಂಥ ಸಮಸ್ಯೆಗಳಿಗೆ ಮುಕ್ತಿ ಕಾಣಿಸಬಹುದು.
  ಗಂಜಾಂ ಮಂಜು

Advertisement

Udayavani is now on Telegram. Click here to join our channel and stay updated with the latest news.

Next