Advertisement

Belgavi ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲಿ ಯಾವ ಕಗ್ಗಂಟೂ ಇಲ್ಲ: ಶೆಟ್ಟರ್

06:45 PM Mar 24, 2024 | Team Udayavani |

ಹುಬ್ಬಳ್ಳಿ: ಬೆಳಗಾವಿ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಯಾವ ಕಗ್ಗಂಟುಗಳೂ ಇಲ್ಲ. ಇಂದು ಇಲ್ಲವೇ ನಾಳೆ‌ ಟಿಕೆಟ್ ಘೋಷಣೆಯಾಗಲಿದೆ. ನನಗೇ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ನಾನಿದ್ದೇನೆ. ಬೆಳಗಾವಿ ಕ್ಷೇತ್ರದ ಹಲವು ನಾಯಕರು ನನಗೆ ಈಗಾಗಲೇ ಆಹ್ವಾನ ನೀಡುತ್ತಿದ್ದಾರೆ. ನಾನು ಸಹ ಅವರ ಜತೆ ಸಂಪರ್ಕದಲ್ಲಿದ್ದೇನೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದ್ದಾರೆ.

Advertisement

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿಂಗಾಲೇಶ್ವರ ಶ್ರೀಗಳು ಸ್ಪರ್ಧೆ ಮಾಡುವುದು ನನಗೆ ಗೊತ್ತಿಲ್ಲ. ಕಾಂಗ್ರೆಸ್ ನ ಗ್ಯಾರಂಟಿಗಳನ್ನು ನೋಡಿ ಜನ ಮತ ಹಾಕಲ್ಲ. ಮೋದಿಯವರ ಕಾರ್ಯಗಳನ್ನು ನೋಡಿ ಲೋಕಸಭಾ ಚುನಾವಣೆಯಲ್ಲಿ ಜನರು ಅವರಿಗೆ ಬೆಂಬಲ ನೀಡುತ್ತಾರೆ. ಮಹಿಳೆಯರಿಗೆ ನ್ಯಾಯ ಒದಗಿಸಿದ್ದು ನಮ್ಮ ಪಕ್ಷ.‌ಮಹಿಳಾ ಮೀಸಲಾತಿ ಜಾರಿಗೆ ತರುತ್ತಿರುವುದು ಮೋದಿ‌ ಸರ್ಕಾರ ಎಂದರು.

ಕೇಂದ್ರ ಸರ್ಕಾರ ಬರ ಪರಿಹಾರ ಅನುದಾನ ಬಿಡುಗಡೆ ವಿಷಯವಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು ರಾಜಕೀಯ ‌ಸ್ಟಂಟ್ . ಚುನಾವಣೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು ಜನರ ಗಮನ ಬೇರೆಡೆ ಸೆಳೆಯುವ ತಂತ್ರ ಇದಾಗಿದೆ. ಅನುದಾನದ ಕುರಿತು ಚರ್ಚಿಸಲು ಬೇರೆ ಬೇರೆ ವೇದಿಕೆಗಳಿವೆ. ಆದರೆ ಈ ವಿಷಯವಾಗಿ ಸುಪ್ರೀಂ ಕೋರ್ಟ್‌ಗೆ ಹೋಗಿದ್ದು ಇತಿಹಾಸದಲ್ಲಿಯೇ ಮೊದಲು ಎಂದರು.

ಲೋಕಸಭಾ ಮತ್ತು ರಾಜ್ಯಸಭೆಯಲ್ಲಿ ಚರ್ಚಿಸಬಹುದಿತ್ತು. ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆಯವರೇ ವಿಪಕ್ಷ ನಾಯಕರಾಗಿದ್ದಾರೆ. ಆದರೆ ಅಲ್ಲಿ ಚರ್ಚಿಸುತ್ತಿಲ್ಲ. ಚುನಾವಣೆ ಪೂರ್ವದಲ್ಲಿ ದೆಹಲಿಗೆ ಹೋಗಿ ಹೋರಾಟ ಮಾಡುವ ಸ್ಟಂಟ್ ಮಾಡಿದ್ದರು. ಈಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಇದೆಲ್ಲವೂ ಚುನಾವಣೆ ಪ್ರಚಾರದ ಗಿಮಿಕ್ ಎಂದು ಕುಟುಕಿದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಉತ್ತಮವಾದ ಕೆಲಸ ಮಾಡಿದೆ. ಕೇಂದ್ರ ಸರ್ಕಾರದ ಅನುದಾನ ವಿಳಂಬವಾದಾಗ ರಾಜ್ಯ ಸರ್ಕಾರ ತನ್ನ ಬಳಿಯಿದ್ದ ಹಣ ಖರ್ಚು ಮಾಡಿದ ಉದಾಹರಣೆ ಇದೆ. ಮೋದಿಯವರ ಮೇಲೆ ಅಪ್ರಚಾರ ಮಾಡುವುದು ಅಕ್ಷಮ್ಯ ಅಪರಾಧ ಎಂದರು.

Advertisement

ಚುನಾವಣೆ ಬಳಿಕ ಸಿಎಂ ರಾಜೀನಾಮೆ
ಲೋಕಸಭಾ ಚುನಾವಣೆ ನಂತರ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟೆ ಕೊಡುತ್ತಾರೆ. ನಾವು ಏನೂ ಆಪರೇಷನ್ ಮಾಡುವ ಅವಶ್ಯಕತೆ ಇಲ್ಲ. ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆಯಿಂದ ಸರ್ಕಾರ ಪತನವಾಗುತ್ತದೆ. ಅದಕ್ಕೆ ಗುಬ್ಬಿ ಶಾಸಕರ ಬಹಿರಂಗ ಹೇಳಿಕೆಯೇ ಸಾಕ್ಷಿ ಎಂದರು.

ಕಾಂಗ್ರೆಸ್‌‌ನಲ್ಲಿ ಗುಂಪುಗಳಿವೆ. ಈ ಗುಂಪುಗಳಿಂದ ಸರ್ಕಾರ ಬಿದ್ದು ಹೋಗಲಿದೆ. ಅಧಿಕಾರಕ್ಕಾಗಿ ಅವರಲ್ಲಿಯೇ ಕಿತ್ತಾಟ ನಡೆದಿದೆ. ಕೆಲವು ದಿನಗಳ ಹಿಂದಷ್ಟೇ ದಲಿತ ಸಿಎಂ ಕೂಗು ಕೇಳಿ ಬಂದಿತ್ತು. ಅನಂತರ ನಾಲ್ಕು ಡಿಸಿಎಂ ಮಾಡಬೇಕೆಂಬುದು ಮುನ್ನಲೆಗೆ ಬಂದಿತ್ತು. ಈಗ ಸಿಎಂ ಬದಲಾವಣೆ ವಿಚಾರ ಜೋರಾಗಿ ಚರ್ಚೆ ಆಗುತ್ತಿದೆ ಎಂದರು.

2014ರಲ್ಲಿಯೂ ಸಿದ್ದರಾಮಯ್ಯ ಸಿಎಂ ಇದ್ದಾಗ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಇದೆಲ್ಲಾ ಬೆಳವಣಿಗೆ ನೋಡಿದರೆ ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರ ಪತನವಾಗುವುದು ಖಚಿತ. ಆದರೆ ವಿನಾಕಾರಣ ಬಿಜೆಪಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು.

ಕಾಂಗ್ರೆಸ್ ಶಾಸಕರಿಗೆ 50ಕೋಟಿ ರೂ. ಆಮಿಷ ಹಸಿ ಸುಳ್ಳು.‌ಇದನ್ನು ಶಾಮನೂರು ಶಿವಶಂಕರಪ್ಪನವರೇ ಸ್ಪಷ್ಟ ಪಡಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಪತನಗೊಳಿಸಲು ಕಾಂಗ್ರೆಸ್‌ನಲ್ಲಿಯೇ ಒಳತಂತ್ರ ರೂಪಿಸಲಾಗುತ್ತದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಹಸಿಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next