Advertisement

ಆರೋಗ್ಯ ವಿವಿಯಲ್ಲಿ ಕನ್ನಡ ಬೋಧಕರಿಲ್ಲ

11:18 AM Nov 05, 2017 | Team Udayavani |

ಬೆಂಗಳೂರು: ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಪ್ರಸ್ತಕ ಸಾಲಿನಿಂದಲೇ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕನ್ನಡ ಬೋಧಿಸಲು ಪಠ್ಯಕ್ರಮ ಸಿದ್ಧವಾಗಿದೆ. ಆದರೆ, ಕನ್ನಡ ಪಠ್ಯ ಬೋಧಿಸುವ ಪ್ರಾಧ್ಯಾಪಕರ ನೇಮಕಕ್ಕೆ ರಾಜ್ಯ ಸರ್ಕಾರ ಈವರೆಗೂ ಅನುಮತಿಯನ್ನೇ ನೀಡಿಲ್ಲ.

Advertisement

ಆರೋಗ್ಯ ವಿವಿಯ ನಿಯಮದ ಪ್ರಕಾರ, ಸರ್ಕಾರದಿಂದ ವಿಶೇಷ ಅನುಮತಿ ನೀಡಿದಾಗ ಮಾತ್ರ ಭಾಷಾ ವಿಷಯದ ಬೋಧನೆಗೆ ಪ್ರಾಧ್ಯಾಪಕರನ್ನು ನೇಮಿಸಿಕೊಳ್ಳಲು ಅವಕಾಶ ಇದೆ. ಆದರೆ, ಸರ್ಕಾರದಿಂದ ಈವರೆಗೂ ಅಂತಹ ಯಾವುದೇ ಅನುಮತಿ, ಆದೇಶ, ನಿರ್ದೇಶನ ಅಥವಾ  ಸೂಚನೆ ನೀಡಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯ ಬೋಧಿಸುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.

ವಿವಿಯಿಂದ ಮಾನ್ಯತೆ ಪಡೆದಿರುವ ರಾಜ್ಯದ ಎಲ್ಲ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜಿನಲ್ಲಿ ಈ ವರ್ಷದಿಂದಲೇ ಕನ್ನಡ ಬೋಧಿಸಲು ತಜ್ಞರ ಮೂಲಕ ಪಠ್ಯಕ್ರಮವನ್ನು ಸಿದ್ಧಪಡಿಸಿದೆ. ಇದಕ್ಕಾಗಿ ಪ್ರತ್ಯೇಕ ಕೋರ್ಸ್‌ ಅಥವಾ ನಿರ್ದಿಷ್ಟ ತರಗತಿಯನ್ನು ಗೊತ್ತು ಮಾಡಿಲ್ಲ. ಆದರೆ, 2017-18ನೇ ಸಾಲಿನಲ್ಲಿ ಎಂಬಿಬಿಎಸ್‌ಗೆ ಸೇರಿದ ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಎರಡು ವರ್ಷ ಕನ್ನಡ ಅಧ್ಯಯನ ಮಾಡಬೇಕು ಎಂಬ ನಿಯಮ ರೂಪಿಸಿದೆ. ಇದನ್ನು ಪಠ್ಯೇತರ ಚಟುವಟಿಕೆಯಾಗಿ ಅನುಷ್ಠಾನ ಮಾಡಲಿದೆ.

ಕನ್ನಡ ಪಠ್ಯಕ್ರಮ: ವೈದ್ಯರ ಗ್ರಾಮೀಣ ಸೇವೆಗೆ ಅನುಕೂಲವಾಗುವಂತೆ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿದ ಸೂಚನೆಯಂತೆ ರಾಜೀವ್‌ಗಾಂಧಿ ಆರೋಗ್ಯ ವಿವಿಯ ಆಡಳಿತ ಮಂಡಳಿ ಇದಕ್ಕಾಗಿ ಹೊಸ ಪಠ್ಯಕ್ರಮ ಸಿದ್ಧಪಡಿಸಿದೆ. ಕನ್ನಡ ಬಲ್ಲ ವಿದ್ಯಾರ್ಥಿಗಳಿಗೆ “ಕನ್ನಡ ಮನಸ್ಸು’ ಮತ್ತು ಕನ್ನಡೇತರ ವಿದ್ಯಾರ್ಥಿಗಳಿಗೆ “ಕನ್ನಡ ಕಲಿ’ ಹೀಗೆ ಎರಡು ವಿಭಾಗದಲ್ಲಿ ಪಠ್ಯ ತಯಾರಾಗಿದೆ.

ಕನ್ನಡ ಬಲ್ಲ ವಿದ್ಯಾರ್ಥಿಗಳಿಗೆ ವೈದ್ಯಲೋಕದ ಪುಸ್ತಕ, ಸಾಹಿತ್ಯ, ವಿಜ್ಞಾನದ ಹೊಸ ಆವಿಷ್ಕಾರ ಇತ್ಯಾದಿ ಬೋಧಿಸಲಾಗುತ್ತದೆ. ಕನ್ನಡೇತರ ವಿದ್ಯಾರ್ಥಿಗಳಿಗೆ ಕನ್ನಡ ಸಂಭಾಷಣೆ, ವ್ಯಾಕರಣ ಕಲಿಸಲಾಗುತ್ತದೆ. ಕನ್ನಡ ಮತ್ತು ಕನ್ನಡೇತರ ವಿದ್ಯಾರ್ಥಿಗಳಿಗೆ 180 ಗಂಟೆಯ ಬೋಧನೆ ಇದಾಗಿರುತ್ತದೆ.

Advertisement

ಬೋಧಕರ ಕೊರತೆ: ಸಾಮಾನ್ಯವಾಗಿ ಆರೋಗ್ಯ ವಿಜ್ಞಾನಗಳ ವಿವಿಗಳಲ್ಲಿ ಭಾಷಾ ವಿಷಯ ಬೋಧನೆಗೆ ಪ್ರಾಧ್ಯಾಪಕರು ಇರುವುದಿಲ್ಲ. ಅಲ್ಲದೆ ಕನ್ನಡದಲ್ಲಿ ವೈದ್ಯ ಪಠ್ಯಕ್ರಮದ ಪುಸ್ತಕಗಳೂ ಇಲ್ಲ. ಹೀಗಾಗಿ ಕನ್ನಡ ಕಲಿಸಬೇಕಾದರೆ, ಕನ್ನಡ ಬಲ್ಲ ಪ್ರಾಧ್ಯಾಪಕರನ್ನೇ ಬಳಸಿಕೊಳ್ಳಬೇಕು. ಬಹುತೇಕ ವೈದ್ಯಕೀಯ ಕಾಲೇಜಿನಲ್ಲಿ ಕನ್ನಡ ಬೋಧಿಸಬಲ್ಲ ಪ್ರಾಧ್ಯಾಪಕರಿದ್ದಾರೆ.

ಆದರೆ, ಅವರ ತರಗತಿ ವೇಳೆ ಬಿಟ್ಟು, ಕನ್ನಡ ಕಲಿಸುವುದು ಕಷ್ಟ. ಹಾಗೇ ಕನ್ನಡೇತರ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವ ಪ್ರಾಧ್ಯಾಪಕರಿಗೆ ಕನ್ನಡ ವ್ಯಾಕರಣದ ಜ್ಞಾನವೂ ಇರಬೇಕು. ಕನ್ನಡ ಪ್ರಾಧ್ಯಾಪಕರಿಗೆ ಹುಡುಕಾಟ ಆರಂಭವಾಗಿದೆ. ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲೂ ಅವಕಾಶ ಇದೆ. ಆದರೆ, ಬೋಧನಾ ಶುಲ್ಕವನ್ನು ಸರ್ಕಾರ ಭರಿಸಬೇಕೇ ಅಥವಾ ವಿವಿಯಿಂದಲೇ ಭರಿಸಬೇಕೇ ಎಂಬ ಜಿಜ್ಞಾಸೆ ಇದೆ.

ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಎರಡು ವರ್ಷ ಕನ್ನಡ ಬೋಧಿಸಲು ವಿವಿ ಆಡಳಿತ ಒಪ್ಪಿದೆ. ಕನ್ನಡ ಪ್ರಾಧ್ಯಾಪಕರ ನೇಮಿಸುವ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯೊಂದಿಗೆ ಮಾತುಕತೆ ನಡೆಸಿದ್ದೇವೆ. ಸರ್ಕಾರಕ್ಕೂ ತಿಳಿಸಿದ್ದು, ಇನ್ನೂ ನಿರ್ಧಾರ ಕೈಗೊಂಡಿಲ್ಲ. ಅತಿಥಿ ಉಪನ್ಯಾಸಕರನ್ನು ಬಳಸಿಕೊಳ್ಳಲು ಕೂಡ ಅವಕಾಶವಿದೆ.
-ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ವೈದ್ಯ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಎರಡು ರೀತಿಯ ಪಠ್ಯಕ್ರಮ ಸಿದ್ಧವಾಗಿದೆ. ಆದರೆ, ಬೋಧನೆ ಮಾಡಲು ಪ್ರಾಧ್ಯಾಪಕರ ಕೊರತೆ ಎದುರಾಗಿದೆ. ಈ ಸಂಬಂಧ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದೇವೆ. ಕನ್ನಡ ಬೋಧಿಸುವ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಸರ್ಕಾರದ ಅನುಮತಿ ಬೇಕು.
-ಡಾ.ಎಂ.ಕೆ.ರಮೇಶ್‌, ಕುಲಪತಿ (ಹಂಗಾಮಿ) ಆರ್‌ಜಿಯುಎಚ್‌ಎಸ್‌

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next