Advertisement

ಉಪಕಾರ ಕಾಲೋನಿಯಲ್ಲಿ ಮೂಲಸೌಕರ್ಯ ಮರೀಚಿಕೆ

09:12 PM Jun 30, 2019 | Lakshmi GovindaRaj |

ಗುಂಡ್ಲುಪೇಟೆ: ತಾಲೂಕಿನ ಕಾಡಂಚಿನ ಉಪಕಾರ ಕಾಲೋನಿ ಗ್ರಾಮ ಮೂಲಸೌಕರ್ಯದಿಂದ ವಂಚಿತವಾಗಿದೆ. ಪರಿಶಿಷ್ಟ ಜಾತಿಯವರೇ ಹೆಚ್ಚು ವಾಸಿಸುತ್ತಿರುವ ಈ ಗ್ರಾಮದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ.

Advertisement

ವಸತಿ ಯೋಜನೆಯ ಮನೆಗಳು ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿದ್ದರೂ ಸಹ, ಈ ಗ್ರಾಮಕ್ಕೆ ಯಾವುದೇ ಅಭಿವೃದ್ಧಿಯತ್ತ ಕ್ರಮ ಕೈಗೊಳ್ಳದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲೆ, ಅಂಗನವಾಡಿಗೆ ಗೋಡೆ ಇಲ್ಲ: ಬಂಡೀಪುರ ರಾಷ್ಟ್ರೀಯ ಉದ್ಯಾನದ ಕುಂದಕೆರೆ ವಲಯದ ಕಾಡಂಚಿನಲ್ಲಿರುವ ಈ ಗ್ರಾಮದಲ್ಲಿರುವ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸಂಬಂಧಪಟ್ಟ ಇಲಾಖೆಗಳು ಸುತ್ತುಗೋಡೆ ನಿರ್ಮಾಣ ಮಾಡಿಲ್ಲ. ಇದರಿಂದಾಗಿ ಕಾಡಿನ ತುತ್ತತುದಿಯಲ್ಲಿರುವ ಈ ಶಾಲೆಯ ಎದುರಿರುವ ಕೆರೆಗೆ ನೀರು ಕುಡಿಯಲು ಬರುವ ಯಾವುದಾದರೂ ವನ್ಯಜೀವಿಯು ಶಾಲೆಯ ಬಳಿಗೆ ಬರುವ ಸಂಭವವಿದೆ.

ಅಲ್ಲದೆ, ಶಾಲಾ ಶೌಚಾಲಯವು ಶಾಲೆಯ ಎದುರಿನ ಸರ್ಕಾರಿ ಕಟ್ಟಡದಲ್ಲಿದ್ದು, ಶೌಚಕ್ಕೆ ಹೋಗುವ ಮಕ್ಕಳು ಶಾಲಾವರಣವನ್ನು ದಾಟಿಕೊಂಡು ಹೋಗಬೇಕಾಗಿದೆ. ಅದೂ ಕೂಡ ಸಮಸ್ಯೆಯಾಗಿ ಕಾಡುತ್ತಿದೆ. ಇನ್ನು ಅಂಗನವಾಡಿ ಕಟ್ಟಡಕ್ಕೆ ಶೌಚಾಲಯ ನಿರ್ಮಾಣ ಮಾಡಿಲ್ಲ. ಇದರಿಂದ ಶಾಲಾ ಕೊಠಡಿಯಿಂದ ಹೊರ ಬರುವ ಮಕ್ಕಳನ್ನು ಶಿಕ್ಷಕರು ಎಚ್ಚರಿಕೆಯಿಂದ ಗಮನಿಸಿಕೊಳ್ಳಬೇಕಾಗಿದೆ.

ಸಮರ್ಪಕ ಬಸ್‌ ಸೌಕರ್ಯವಿಲ್ಲ: ಗ್ರಾಮವನ್ನು ಸಂಪರ್ಕಿಸುವ ರಸ್ತೆಯನ್ನು ಇತ್ತೀಚೆಗೆ ಡಾಂಬರೀಕರಣ ಮಾಡಿದ್ದರೂ ಸಮರ್ಪಕವಾಗಿ ಬಸ್ಸುಗಳ ಸೌಕರ್ಯವಿಲ್ಲ. ಬೆಳಗ್ಗೆ ಮತ್ತು ರಾತ್ರಿ ಮಾತ್ರ ಬಸ್‌ ಬರುತ್ತಿದ್ದು, ಉಳಿದ ವೇಳೆಯಲ್ಲಿ ವನ್ಯಜೀವಿಗಳ ಭೀತಿಯ ನಡುವೆಯೇ ಕಾಲ್ನಡಿಗೆಯಲ್ಲಿ 5 ಕಿ.ಲೋ ಮೀಟರ್‌ ಕ್ರಮಿಸಿ ಕುಂದಕೆರೆ ಗ್ರಾಮಕ್ಕೆ ಬರಬೇಕಾಗಿದೆ.

Advertisement

ಯಾರಿಗಾದರೂ ಆರೋಗ್ಯದಲ್ಲಿ ಏರುಪೇರಾದರೇ ಯಾವುದೇ ರೀತಿಯ ಪ್ರಥಮ ಚಿಕಿತ್ಸೆ ದೊರೆಯದಂತಾಗಿದೆ. ಶಾಲೆಯ ಎದುರಿಗೆ ನಿರ್ಮಿಸಿರುವ ಡಿಪಿಇಪಿ ಕಟ್ಟಡವು ಉಪಯೋಗಕ್ಕೆ ಬಾರದೇ ದನಗಳ ದೊಡ್ಡಿಯಾಗಿದೆ. ಆನೆಗಳ ದಾಳಿಯಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಗ್ರಾಮಸ್ಥರು ಈ ಕಟ್ಟಡದ‌ ಚಾವಣಿಯ ಮೇಲೆ ಹುರುಳಿ ಮೇವನ್ನು ಸಂಗ್ರಸಿಟ್ಟುಕೊಳ್ಳುತ್ತಿದ್ದಾರೆ.

ಚರಂಡಿಗಳಲ್ಲಿ ದುರ್ವಾಸನೆ: ಎಸ್‌ಇಪಿ/ಎಸ್‌ಟಿಪಿ ಯೋಜನೆಯಲ್ಲಿ ಪರಿಶಿಷ್ಟ ಸಮುದಾಯದ ಬಡಾವಣೆಗಳಿಗೆ ಕಾಂಕ್ರಿಟ್‌ ರಸ್ತೆ ಹಾಗೂ ಚರಂಡಿಗಳ ನಿರ್ಮಾಣ ಮಾಡಬೇಕಾಗಿದ್ದರೂ ಇನ್ನೂ ಮಾಡಿಲ್ಲ. ಆದ್ದರಿಂದ ಗ್ರಾಮದ ಚರಂಡಿಗಳಲ್ಲಿ ಹೂಳು ತುಂಬಿ ಕೊಳಚೆ ನೀರು ಮಡುಗಟ್ಟಿ ನಿಲ್ಲುತ್ತಿದೆ. ಸಮೀಪದ ಮನೆಯವರು ಈ ದುರ್ವಾಸನೆಯನ್ನು ಸಹಿಸಿಕೊಳ್ಳಬೇಕಾಗಿದೆ.

ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯ್ತಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಿಲ್ಲ. ಅಂಗನವಾಡಿ ಹಾಗೂ ಶಾಲೆಯ ಸುತ್ತಲೂ ಪಾಥೆನಿಯಂ ಬೆಳೆದುನಿಂತಿದ್ದರೂ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ಹಳೆ ಕಾಲದ ಮನೆಗಳು ಕುಸಿದು ಬೀಳುತ್ತಿದ್ದರೂ ವಸತಿ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಿಕೊಡಲು ಗ್ರಾಪಂ ಮುಂದಾಗಿಲ್ಲ.

ಇನ್ನಾದರೂ ಸಂಬಂಧಪಟ್ಟವರು ಗ್ರಾಮಕ್ಕೆ ಅಗತ್ಯವಾದ ಮೂಲಸೌಕರ್ಯಗಳು ಹಾಗೂ ಶಾಲೆಗೆ ಸುತ್ತುಗೋಡೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ರಾಜೇಂದ್ರ, ಲಿಂಗರಾಜು, ಕುಮಾರ್‌ ಹಾಗೂ ಮಣಿಕಂಠ ಒತ್ತಾಯಿಸಿದ್ದಾರೆ.

ಶಾಲೆಗೆ ಕಾಂಪೌಂಡ್‌ ಹಾಕಿಸಲು ನಮ್ಮಿಂದ ಯಾವುದೇ ಅನುದಾನವಿಲ್ಲ. ಆದರೆ, ಚರಂಡಿಗಳ ಹೂಳೆತ್ತಿಸಿ ಸ್ವಚ್ಛತೆ ಕಾಪಾಡುವಂತೆ ಹಾಗೂ ಚರಂಡಿಗಳ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸುವಂತೆ ಬೊಮ್ಮನಹಳ್ಳಿ ಗ್ರಾಪಂಗೆ ಸೂಚನೆ ನೀಡಲಾಗುವುದು.
-ಡಾ.ಕೃಷ್ಣಮೂರ್ತಿ, ತಾಪಂ ಇಒ

ಎಸ್‌ಇಪಿ ಎಸ್‌ಟಿಪಿ ಯೋಜನೆಯಲ್ಲಿ ಗ್ರಾಮದ ರಸ್ತೆಯನ್ನು ಡಾಂಬರೀಕರಣ ಹಾಗೂ ಚರಂಡಿ ನಿರ್ಮಾಣ ಮಾಡಲು ಮತ್ತು ಗ್ರಾಮವನ್ನು ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳುತ್ತೇವೆ.
-ಸಿ.ಎಸ್‌.ನಿರಂಜನ ಕುಮಾರ್‌, ಶಾಸಕರು

* ಸೋಮಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next