Advertisement

ಐತಿಹಾಸಿಕ ದೇವಾಲಯ ಇದ್ದರೂ ಇಲ್ಲಿ ಮೂಲ ಸೌಕರ್ಯ ಇಲ್ಲ: ಗ್ರಾ.ಪಂ ನಿರ್ಲಕ್ಷ್ಯ

04:41 PM Jun 14, 2022 | Team Udayavani |

ಚನ್ನರಾಯಪಟ್ಟಣ: ತಾಲೂಕಿನ ನುಗ್ಗೇಹಳ್ಳಿ ಗ್ರಾಮ ಹೋಬಳಿ ಕೇಂದ್ರವಾಗಿದ್ದರೂ ಅಗತ್ಯ ಮೂಲ ಸೌಕರ್ಯ ವಿಲ್ಲದೆ ಇಲ್ಲಿನ ಜನರು ಪರದಾಡುವಂತಾಗಿದೆ. ನುಗ್ಗೇಹಳ್ಳಿಯಲ್ಲಿ ಐತಿಹಾಸಿಕ ಲಕ್ಷ್ಮೀನರಸಿಂಹ ಸ್ವಾಮಿ, ಸದಾಶಿವಸ್ವಾಮಿ ದೇವಾಲಯ ಇದೆ. ಬೆಂಗಳೂರು, ತುಮಕೂರು, ಮೈಸೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು, ಪ್ರವಾಸಿಗರು ದೇವಾಲಯ ದರ್ಶನ ಪಡೆಯುತ್ತಾರೆ. ಆದರೆ, ಗ್ರಾಮ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿವೆ. ರಾಷ್ಟ್ರೀಯ ಹೆದ್ದಾರಿಗೆ ದೇವಾಲಯದ ನಾಮಫ‌ಲ ಅಳವಡಿಕೆ ಮಾಡುವಲ್ಲಿ ಪ್ರವಾಸೋದ್ಯಮ ಇಲಾಖೆ ವಿಫ‌ಲವಾಗಿದೆ.

Advertisement

ಕಸದ ರಾಶಿಯ ದರ್ಶನ: ಗ್ರಾಮದಲ್ಲಿ ಸಮಸ್ಯೆಗಳ ಸರಮಾಲೆ ಇದೆ. ಎಲ್ಲೆಂದರಲ್ಲಿ ಕಸದ ರಾಶಿ ಇದ್ದು, ಗ್ರಾಮಕ್ಕೆ ಆಗಮಿಸುವವರಿಗೆ ಆಹ್ವಾನ ನೀಡುತ್ತವೆ. ಕಸ ವಿಲೇವಾರಿ ಮಾಡಬೇಕಾಗಿರುವ ಗ್ರಾಪಂ ಜಾಣ ಕುರುಡು ಅನುಸರಿ ಸುತ್ತಿದೆ, ಗ್ರಾಮದ ಅನೇಕ ವಾರ್ಡ್‌ನಲ್ಲಿ ಸಾಂಕ್ರಾಮಿಕ ರೋಗ ಹರಡುವ ಲಕ್ಷಣಗಳು ಕಾಣುತ್ತಿವೆ.

ಸೊಳ್ಳೆ-ನೊಣದ ಕಾಟ: ನುಗ್ಗೇಹಳ್ಳಿ ಹೋಬಳಿ ಕೇಂದ್ರದಿಂದ ಬಾಗೂರು ಹೋಬಳಿಗೆ ತೆರಳುವ ರಸ್ತೆಯಲ್ಲಿನ ಕೆಂಗೆಟ್ಟೆ ಬಳಿ ಹೆಚ್ಚು ತ್ಯಾಜ್ಯ ಸುರಿಯುತ್ತಿದ್ದು, ಕಟ್ಟೆಯ ನೀರು ಸಂಪೂರ್ಣ ಕಲುಷಿತಗೊಂಡಿದೆ. ಈ ನೀರನ್ನು ದನಕರು ಕುಡಿಯುತ್ತವೆ, ಕಟ್ಟೆ ಸುತ್ತ ಕೋಳಿ ಸೇರಿ ಇತರ ಮಾಂಸದ ಅಂಗಡಿಗಳ ತ್ಯಾಜ್ಯ ಸುರಿಯುತ್ತಿರುವುದರಿಂದ ಸೊಳ್ಳೆ-ನೊಣದ ಕಾಟ ಹೆಚ್ಚಾಗಿ, ಈ ಭಾಗದ ಜನತೆ ತೊಂದರೆ ಅನುಭವಿಸುವಂತಾಗಿದೆ.

ಗ್ರಾಪಂ ಎಚ್ಚೆತ್ತುಕೊಂಡಿಲ್ಲ: ಪ್ರಸಿದ್ಧ ಜೋಡಿ ಕಲ್ಯಾಣಿಯನ್ನು ಸದಾಶಿವಸ್ವಾಮಿ ದೇಗುಲ ಸಮೀಪ ರಾಜರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ, ಇದನ್ನು ಅಭಿವೃದ್ಧಿ ಮಾಡಲು ತಾಲೂಕು ಆಡಳಿತ ಮುಂದಾಗಿಲ್ಲ, ಜೋಡಿ ಕಲ್ಯಾಣಿಗೆ ತಡೆಗೋಡೆ ನಿರ್ಮಾಣ ಮಾಡದ ಹಿನ್ನೆಲೆಯಲ್ಲಿ ಗ್ರಾಮದ ಯುವಕರು ಕಲ್ಯಾಣಿಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದಾರೆ.ಆದರೂ, ಗ್ರಾಪಂ ಎಚ್ಚೆತ್ತುಕೊಂಡಿಲ್ಲ.

ವೈದ್ಯರಿಲ್ಲ: ಹೋಬಳಿ ಕೇಂದ್ರದಲ್ಲಿ ಸರ್ಕಾರ ಪಶು ಆಸ್ಪತ್ರೆ ನಿರ್ಮಾಣ ಮಾಡಿದೆ. ಆದರೆ, ಹಲವು ತಿಂಗಳು ಕಳೆದರೂ ಹೊಸಕಟ್ಟಡ ಉದ್ಘಾಟನೆ ಭಾಗ್ಯ ಕಂಡಿಲ್ಲ, ಸೋರುತ್ತಿರವ ಹಳೆಯ ಕಟ್ಟಡದಲ್ಲಿ ಪಶುಗಳ ತಪಾಸಣೆ ಮಾಡಲಾಗುತ್ತಿದೆ. ಸಮುದಾಯ ಆರೋಗ್ಯ ಕೇಂದ್ರವಿದೆ. ಆದರೆ, ತಜ್ಞ ವೈದ್ಯರ ಕೊರತೆ ಕಾಡುತ್ತಿದೆ. ಇನ್ನು ನರ್ಸ್‌ ಸೇರಿ ಇತರ ಸಿಬ್ಬಂದಿ ಕೊರತೆ ಇದ್ದರೂ ಕ್ಷೇತ್ರದ ಜನಪ್ರತಿನಿಧಿಗಳು ಇತ್ತ ಗಮನ ಹರಿಸುತ್ತಿಲ್ಲ. ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ: ನುಗ್ಗೇಹಳ್ಳಿ ಹೋಬಳಿ ಕೇಂದ್ರದ ಸುತ್ತಮುತ್ತ ಇರುವ ಹತ್ತಾರು ಹಳ್ಳಿಗಳಿಂದರೋಗಿಗಳು ಆಸ್ಪತ್ರೆಗೆ ನಿತ್ಯವೂ ಆಗಮಿಸುತ್ತಾರೆ.

Advertisement

ಕೆಲವರು ವಿಧಿಇಲ್ಲದೆ ತಿಪಟೂರು, ಚನ್ನರಾಯಪಟ್ಟಣ ತಾಲೂಕು ಕೇಂದ್ರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತಾಗಿದೆ. ಸಣ್ಣಪುಟ್ಟ ರೋಗಕ್ಕೂ ಚಿಕಿತ್ಸೆ ಪಡೆಯಲು ದೂರದ ನಗರಕ್ಕೆ ತೆರಳುವುದರಿಂದ ಬಡ ಹಾಗೂ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ.

ನುಗ್ಗೇಹಳ್ಳಿ ಹೋಬಳಿಯ ಹೂವಿನಹಳ್ಳಿಯ ಗ್ರಾಮದ ಬಳಿ ಗ್ರಾಪಂನಿಂದ ಘನತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಾಣ ಮಾಡಿದ್ದರೂ, ಯಂತ್ರೋಪಕರಣವನ್ನು ಅಳವಡಿಸಿಲ್ಲ. ಹಾಗಾಗಿ ಅಲ್ಲಿಗೆ ಕಸ ವಿಲೇವಾರಿ ಮಾಡುತ್ತಿಲ್ಲ. ರಸ್ತೆ ಬದಿ, ಕಲ್ಯಾಣಿ ಹಾಗೂ ಕಟ್ಟೆಗಳ ಬಳಿ ಕಸ ಸುರಿಯಲಾಗುತ್ತಿದೆ. ಆದಷ್ಟು ಬೇಗ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸವನ್ನು ವೈಜ್ಞಾನಿಕ ವಾಗಿ ವಿಲೇವಾರಿ ಮಾಡಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನುಗ್ಗೇಹಳ್ಳಿ ಹೋಬಳಿಯ ಹೂವಿನಹಳ್ಳಿ ಬಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಯಂತ್ರೋಪಕರಣ ಅಳವಡಿಸಿ ಶೀಘ್ರವೇ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುವುದು, ಗ್ರಾಮಕ್ಕೆ ಅಗತ್ಯ ಇರುವ ಮೂಲ ಸೌಕರ್ಯ ಆದಷ್ಟು ಬೇಗ ಕಲ್ಪಿಸಲಾಗುವುದು.
● ಮಂಜುಳಾ,
ನುಗ್ಗೇಹಳ್ಳಿ ಗ್ರಾಪಂ ಅಧ್ಯಕ್ಷೆ

ಗ್ರಾಮದ ಕೆಲವರು ಕಲ್ಯಾಣಿ, ಹಾರೋವರೆಕೆಟ್ಟೆ ಕೆರೆಗೆ ಕಸ ಹಾಕುತ್ತಿದ್ದಾರೆ. ಇದರಿಂದ ನೀರು ಕಲುಷಿತವಾಗುತ್ತಿದೆ. ಗ್ರಾಮದ ಅನೇಕ ಕಡೆ ತ್ಯಾಜ್ಯ ಸುರಿಯುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ. ಗ್ರಾಪಂನಿಂದ ಕ್ರಮ ಕೈಗೊಳ್ಳಬೇಕು, ಕಸದ ಸಮಸ್ಯೆ ನಿವಾರಿಸಬೇಕು.
● ರೇಣುಕಾ ಪ್ರಸಾದ್‌, ಹಾರೋವರೆಕಟ್ಟೆ
ಕಲ್ಯಾಣಿ ಹಿರೇಕೆರೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ

● ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next