Advertisement

ಪುಟ್ಟ ಮಕ್ಕಳಿಗೆ ಹೋಂವರ್ಕ್‌ ಇಲ್ಲ

06:00 AM Jun 04, 2018 | Team Udayavani |

ಕೋಲ್ಕತ್ತಾ: ಒಂದನೇ ತರಗತಿ ಮಕ್ಕಳಿಗೂ ಹೋಂವರ್ಕಾ? ಅಯ್ಯೋ ಅಂದುಕೊಂಡವರೇ ಹೆಚ್ಚು.ಆದರೀಗ ಕೇಂದ್ರ ಸರ್ಕಾರ ಒಂದನೇ ಮತ್ತು ಎರಡನೇ ತರಗತಿ ಮಕ್ಕಳಿಗೆ ಹೋಮ್‌ವರ್ಕ್‌ ನೀಡದಿರುವ ನಿಯಮ ಜಾರಿಗೆ ತರಲು ಮುಂದಾಗಿದೆ. ಈ ಬಗ್ಗೆ ಹೊಸ ವಿಧೇಯಕವೊಂದನ್ನು ಮುಂದಿನ ಸಂಸತ್‌ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Advertisement

ಈ ಕುರಿತು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಮಾಹಿತಿ ನೀಡಿದ್ದು, “ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಮಾದರಿಯಲ್ಲೇ ನೋ ಹೋಂವರ್ಕ್‌ ವಿಧೇಯಕವನ್ನು ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗುತ್ತದೆ. ಅದು ಅಂಗೀಕಾರವಾಗುತ್ತದೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ.

ಜತೆಗೆ, ಮಕ್ಕಳ ಮೇಲೆ ಯಾವತ್ತೂ ಒತ್ತಡ ಇರಬಾರದು. ಕಳೆದ ತಿಂಗಳು ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ತೀರ್ಪಿನ ಅನ್ವಯ, ಮಕ್ಕಳ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಏನನ್ನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದೂ ಜಾವಡೇಕರ್‌ ತಿಳಿಸಿದ್ದಾರೆ.

ಕೋರ್ಟ್‌ ಏನು ಹೇಳಿತ್ತು?
ಶಾಲಾ ಮಕ್ಕಳ ಬ್ಯಾಗ್‌ಗಳ ತೂಕವನ್ನು ಕಡಿಮೆ ಮಾಡುವಂತೆ ಹಾಗೂ 1 ಮತ್ತು 2ನೇ ತರಗತಿ ಮಕ್ಕಳಿಗೆ ಮನೆಗೆಲಸ ನೀಡದಂತೆ ಎಲ್ಲ ರಾಜ್ಯ ಸರ್ಕಾರಗಳಿಗೂ ಸೂಚಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ಮೇ 30ರಂದು ಆದೇಶಿಸಿತ್ತು. ಮಕ್ಕಳೇನೂ ವೇಯ್‌rಲಿಫ್ಟರ್‌ಗಳೂ ಅಲ್ಲ, ಶಾಲಾ ಬ್ಯಾಗ್‌ ಹೊತ್ತ ಕಂಟೇನರ್‌ಗಳೂ ಅಲ್ಲ. ಶಾಲಾ ಬ್ಯಾಗ್‌ನ ತೂಕವು ಮಗುವಿನ ತೂಕದ ಶೇ.10ಕ್ಕಿಂತ ಹೆಚ್ಚು  ಇರದಂತೆ ನೋಡಿಕೊಳ್ಳಿ ಎಂದೂ ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next