Advertisement

Mangaluru ಸೆಂಟ್ರಲ್‌ಗೆ ರೈಲುಗಳ ವಿಸ್ತರಣೆ ಇಲ್ಲ

12:58 AM Jan 02, 2024 | Team Udayavani |

ಮಂಗಳೂರು: ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಪ್ಲಾಟ್‌ಫಾರಂಗಳ ನಿರ್ಮಾಣದ ಹೊರತಾಗಿಯೂ ಬಹುಬೇಡಿಕೆಯ ರೈಲುಗಳನ್ನು ಸೆಂಟ್ರಲ್‌ಗೆ ವಿಸ್ತರಿಸುವ ಪ್ರಸ್ತಾವವನ್ನು ದಕ್ಷಿಣ ರೈಲ್ವೇ ತಿರಸ್ಕರಿಸಿದೆ.

Advertisement

ನಂ. 12133/134 ಮುಂಬಯಿ ಸಿಎಸ್‌ಎಂಟಿ-ಮಂಗಳೂರು ಜಂಕ್ಷನ್‌-ಮುಂಬಯಿ ಸಿಎಸ್‌ಎಂಟಿ ಸೂಪರ್‌ಫಾಸ್ಟ್‌ ರೈಲು, ನಂ.16575/576 ಯಶವಂತ ಪುರ-ಮಂಗಳೂರು ಜಂಕ್ಷನ್‌-ಯಶವಂತಪುರ ಟ್ರೈ ವೀಕ್ಲಿ ಎಕ್ಸ್‌ಪ್ರೆಸ್‌, ನಂ.16539/540 ಯಶವಂತಪುರ -ಮಂಗಳೂರು ಜಂಕ್ಷನ್‌-ಯಶವಂತಪುರ ಗೋಮಟೇಶ್ವರ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ಮತ್ತು ನಂ 07337/338 ವಿಜಯಪುರ -ಮಂಗಳೂರು ಜಂಕ್ಷನ್‌-ವಿಜಯಪುರ ಡೈಲಿ ಎಕ್ಸ್‌ಪ್ರೆಸ್‌ ರೈಲನ್ನು ಮಂಗಳೂರಿಗೆ ವಿಸ್ತರಿಸುವಂತೆ ಪ್ರಯಾಣಿಕ ಸಂಘಟನೆಗಳು, ಪ್ರಯಾಣಿಕರು ಮತ್ತು ಸಾರ್ವಜನಿಕರು ಕಳೆದ ಹಲವು ಸಮಯದಿಂದ ಆಗ್ರಹಿಸುತ್ತಿದ್ದು, ಅದಕ್ಕೆ ಪೂರಕವಾಗಿ ಸೆಂಟ್ರಲ್‌ನಲ್ಲಿ 4-5ನೇ ಪ್ಲಾಟ್‌ಫಾರಂಗಳೂ ನಿರ್ಮಾಣವಾಗಿವೆ. ಇದು ಸಂಘಟನೆಗಳಿಗೆ ಹೊಸ ಆಶಾಭಾವನೆ ಮೂಡಿಸಿತ್ತು. ಆದರೆ ಇದಕ್ಕೆ ದಕ್ಷಿಣ ರೈಲ್ವೇ ತಣ್ಣೀರು ಎರಚಿದೆ.

ರೈಲುಗಳ ವಿಸ್ತರಣೆಗೆ ಸಂಬಂಧಿಸಿದಂತೆ ಸಂಸದ ನಳಿನ್‌ ಕುಮಾರ್‌ ಕಟೀಲು ಮಾಡಿದ್ದ ಮನವಿಗೆ ದಕ್ಷಿಣ ರೈಲ್ವೇ ಜನರಲ್‌ ಮ್ಯಾನೇಜರ್‌ ಆರ್‌.ಎನ್‌. ಸಿಂಗ್‌ ಉತ್ತರ ಬರೆದಿದ್ದು, ಪ್ಲಾಟ್‌ಫಾರಂ ಮತ್ತು ಖಾಲಿ ಲೈನ್‌ಗಳ ಕೊರತೆಯ ಕಾರಣ ನೀಡಿ ತಿರಸ್ಕರಿಸಿದ್ದಾರೆ. ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮತ್ತು ಯಶವಂತಪುರ- ಮಂಗಳೂರು ಜಂಕ್ಷನ್‌ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲುಗಳು ಸಂಜೆ 4.40ಕ್ಕೆ ಜಂಕ್ಷನ್‌ಗೆ ಆಗಮಿಸುತ್ತವೆ. ಇದನ್ನು ಸೆಂಟ್ರಲ್‌ಗೆ ವಿಸ್ತರಿಸುವುದರಿಂದ ಸಂಜೆಯ ಒತ್ತಡ ಹೆಚ್ಚಾಗುತ್ತದೆ. ಜತೆಗೆ ವಿವಿಧ ರೈಲುಗಳ ಆಗಮನ ನಿರ್ಗಮನ, ಕ್ರಾಸಿಂಗ್‌ ಮೇಲೆ ಪರಿಣಾಮ, ಪ್ಲಾಟ್‌ಫಾರಂ ಕೊರತೆ ಮೊದಲಾದ ಸಮಸ್ಯೆಗಳು ತಲೆದೋರಲಿವೆ.

ವಿಜಯಪುರ ಎಕ್ಸ್‌ಪ್ರೆಸ್‌ ಮತ್ತು ಸಿಎಸ್‌ಟಿ ಸೂಪರ್‌ಫಾಸ್ಟ್‌ ರೈಲುಗಳಿಗೆ ಮಂಗಳೂರು ಜಂಕ್ಷನ್‌ನಲ್ಲಿ ಕ್ರಮವಾಗಿ 2 ಗಂಟೆ 10 ನಿಮಿಷ ಮತ್ತು 55 ನಿಮಿಷ ಮಾತ್ರ ವಿರಾಮದ ಅವಧಿಯಿದೆ. ಈ ಕಿರು ಸಮಯದಲ್ಲಿ ರೈಲನ್ನು ಸೆಂಟ್ರಲ್‌ಗೆ ವಿಸ್ತರಿಸಲು ಅಸಾಧ್ಯ ಎಂದು ಅವರು ಉತ್ತರದಲ್ಲಿ ವಿವರಿಸಿದ್ದಾರೆ.

ದಕ್ಷಿಣ ರೈಲ್ವೇಯಿಂದ ನಕಾರಾತ್ಮಕ ಧೋರಣೆ
ದಕ್ಷಿಣ ರೈಲ್ವೇ ಪ್ರತೀ ಬಾರಿಯೂ ಮಂಗಳೂರಿಗೆ ಸಂಬಂಧಿಸಿದಂತೆ ನಕಾರಾತ್ಮಕ ಧೋರಣೆಯನ್ನೇ ಅನುಸರಿಸುತ್ತಿದೆ. ಹೆಚ್ಚವರಿ ರೈಲುಗಳ ಓಡಾಟಕ್ಕೆಂದೇ ಸೆಂಟ್ರಲ್‌ನಲ್ಲಿ ಹೊಸ ಪ್ಲಾಟ್‌ಫಾರಂಗಳು ನಿರ್ಮಾಣ ಮಾಡಲಾಗಿದೆ. ನೈಋತ್ಯ ರೈಲ್ವೇ ವಿಜಯಪುರ ರೈಲನ್ನು 1.30ಕ್ಕೆ ಮಂಗಳೂರು ತಲುಪುವಂತೆ ಸಿದ್ಧತೆ ನಡೆಸಿದೆ. ಇದರಿಂದ ಸೆಂಟ್ರಲ್‌ಗೆ ವಿಸ್ತರಿಸಲು ಸಾಧ್ಯವಾಗಲಿದೆ. ಸಿಎಸ್‌ಟಿ ಮುಂಬಯಿ ಎಕ್ಸ್‌ಪ್ರೆಸ್‌ ರೈಲು ಪ್ರತೀ ಬಾರಿಯೂ ವಿಳಂಬವಾಗಿ ಸಂಚರಿಸುತ್ತಿದ್ದು, ವೇಳಾಪಟ್ಟಿಯನ್ನು ಸಮರ್ಪಕವಾಗಿ ಬದಲಾಯಿಸಬೇಕಾದ ಅಗತ್ಯವಿದೆ ಎಂದು ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ. ಹನುಮಂತ ಕಾಮತ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಅಮೃತ್‌ ಭಾರತ್‌ ಯೋಜನೆ
ಕಾಸರಗೋಡು ರೈಲು ನಿಲ್ದಾಣ ಆಯ್ಕೆ
ಕಾಸರಗೋಡು: ಕಾಸರಗೋಡು ಸಹಿತ ಕೇರಳದ 30 ರೈಲು ನಿಲ್ದಾಣಗಳನ್ನು ಕೇಂದ್ರ ಸರಕಾರದ ಹೊಸ ಅಮೃತ್‌ ಭಾರತ್‌ ಯೋಜನೆಯಲ್ಲಿ ಸೇರ್ಪಡೆಗೊಳಿಸಲಾಗಿದೆ.

ಪ್ರತೀ ನಿಲ್ದಾಣವನ್ನು 15 ಕೋಟಿ ರೂ. ವ್ಯಯಿಸಿ ಮೇಲ್ದರ್ಜೆಗೇರಿಸಲಾಗುವುದು. ಕೇರಳ ಸಹಿತ ದೇಶದಲ್ಲಿ 1,309 ನಿಲ್ದಾಣಗಳನ್ನು ಅಮೃತ್‌ ಭಾರತ್‌ ಯೋಜನೆಯಲ್ಲಿ ಕೇಂದ್ರ ರೈಲ್ವೇ ಇಲಾಖೆ ಸೇರಿಸಿದೆ. ಈ ಪೈಕಿ 509 ನಿಲ್ದಾಣಗಳ ನವೀಕರಣ ಶೀಘ್ರ ಆರಂಭಗೊಳ್ಳಲಿದೆ. ಹಳೆ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವುದು, ಎಕ್ಸಲೇಟರ್‌, ಮೇಲ್ಸೇತುವೆ, ಲಿಫ್ಟ್‌, ಪಾರ್ಕಿಂಗ್‌, ಪ್ಲಾಟ್‌ಫಾರಂ, ವಿಶ್ರಾಂತಿ ಕೊಠಡಿ ಇತ್ಯಾದಿಗಳನ್ನು ಅಭಿವೃದ್ಧಿಪಡಿಸುವುದು, ಸಿಸಿ
ಕೆಮರಾ, ವೈಫೈ ಸೌಕರ್ಯಗಳನ್ನು ಕಲ್ಪಿಸುವುದು ಇದರಲ್ಲಿ ಸೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next