ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಮಂತ್ರಿ ಮಂಡಲದಲ್ಲಿ 13 ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಇಲ್ಲ. ಹೊಸ ಸಂಪುಟದ ಬಗ್ಗೆ ಯಾವುದೇ ನಿರೀಕ್ಷೆಗಳೂ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.24.1 ರಷ್ಟು ದಲಿತರಿದ್ದಾರೆ. ಆದರೆ, ಪರಿಶಿಷ್ಟರಿಗೆ ನಾಲ್ಕು ಸ್ಥಾನ ಮಾತ್ರ ನೀಡಲಾಗಿದೆ. ಭೋವಿ, ಕೊರಚ, ಕೊರಮರಿಗೆ ಅವಕಾಶ ಕೊಟ್ಟಿಲ್ಲ. ಸಂಪುಟದಲ್ಲಿ ಪ್ರಾದೇಶಿಕ ಅಸಮತೋಲ ಹಾಗೂ ಸಾಮಾಜಿಕ ನ್ಯಾಯಕ್ಕೆ ಅವಕಾಶವೇ ಇಲ್ಲ ಎಂದು ಹೇಳಿದರು.
ಜಮೀರ್ ಅಹಮದ್ ಮನೆ ಮೇಲೆ ಇಡಿ ದಾಳಿ ಕುರಿತು ಪ್ರತಿಕ್ರಿಯಿಸಿ, ಬಿಜೆಪಿಯವರ ಮೇಲೆ ಏಕೆ ದಾಳಿ ನಡೆಯುವುದಿಲ್ಲ. ಅವರೆಲ್ಲ ಬಡವರೇ, ಬಿಪಿಎಲ್ ಕಾರ್ಡುದಾರರೇ ? ಕಾಂಗ್ರೆಸ್ಸಿಗರನ್ನೇ ಟಾರ್ಗೆಟ್ ಮಾಡುವುದೇಕೆ ? ಜಮೀರ್ ಅಹಮದ್ ಅವರು ನನ್ನ ಆಪ್ತರು. ಅದೇ ರೀತಿ ಹಲವಾರು ಮಂದಿ ನನಗೆ ಆಪ್ತರಿದ್ದಾರೆ. ಬಿಜೆಪಿಯಲ್ಲಿಯೂ ಇದ್ದಾರೆ. ಆದರೆ, ಸ್ನೇಹ ಬೇರೆ, ರಾಜಕೀಯ ಬೇರೆ ಎಂದು ತಿಳಿಸಿದರು.
ಇದನ್ನೂ ಓದಿ:ಆನ್ ಲೈನ್ ತರಗತಿಗೆ ಸಿಗದ ನೆಟ್ವರ್ಕ್: ಗುಡ್ಡದ ಮೇಲೆ ಟೆಂಟ್ ಹಾಕಿದ ವಿದ್ಯಾರ್ಥಿಗಳು
ಸಾಮಾನ್ಯವಾಗಿ ಐಟಿ ದಾಳಿಯಾದ ಬಳಿಕ ಅದರ ಶಿಫಾರಸು ಪ್ರಕಾರ ಇಡಿಯವರು ದಾಳಿ ಮಾಡುತ್ತಾರೆ. ಆದಾಯಕ್ಕೂ ಮೀರಿ ಆಸ್ತಿ ಇದ್ದರೆ, ಅಕ್ರಮ ಹಣ ವರ್ಗಾವಣೆ ಅತವಾ ದುರುಪಯೋಗ ಸಂದರ್ಭಗಳಲ್ಲಿ. ಆದರೆ, ಜಮೀರ್ ಅಹಮದ್ ಮನೆ ಮೇಲೆ ಏಕಾಏಕಿ ದಾಳಿ ನಡೆಸಿದ್ದು ಇದು ರಾಜಕೀಯ ಪ್ರೇರಿತ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದರು.