ಮೊಳಕಾಲ್ಮೂರು: ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ನೀಡಿದ ಅನುದಾನವನ್ನು ಸದ್ಬಳಕೆ ಮಾಡಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದ ಮತ್ತು ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಬಿ. ಶ್ರೀರಾಮುಲು ಎಚ್ಚರಿಸಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ವಿವಿಧ ಯೋಜನೆಗಳ ಅಡಿ ಕೋಟ್ಯಂತರ ರೂ. ಅನುದಾನ ನೀಡಲಾಗಿದೆ. ಅಗತ್ಯವಿರುವಲ್ಲಿ ಚೆಕ್‌ಡ್ಯಾಂ, ಗೋಕಟ್ಟೆ, ರಸ್ತೆ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮಂಜೂರಾತಿ ನೀಡಿದ್ದರೂ ಇದುವರೆಗೂ ಪೂರ್ಣಗೊಳಿಸಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಹಾಯಕ ಕಾರ್ಯಪಾಲಕ ಅಭಿಯಂತರ ಬಾಲಕೃಷ್ಣ ಮಾತನಾಡಿ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಯೋಜನೆಯಲ್ಲಿ 2.05 ಕೋಟಿ ರೂ. ವೆಚ್ಚದಲ್ಲಿ ಒಟ್ಟು 47 ಕಾಮಗಾರಿಗಳಲ್ಲಿ 43 ಪೂರ್ಣಗೊಂಡಿವೆ. 6 ಪ್ರಗತಿಯಲ್ಲಿವೆ ಎಂದರು. ಮಧ್ಯ ಪ್ರವೇಶಿಸಿದ ಶಾಸಕ ಶ್ರೀರಾಮುಲು, ಅಭಿವೃದ್ಧಿ ಕಾಮಗಾರಿಗಳನ್ನು ಇನ್ನೂ ಪೂರ್ಣಗೊಳಿಸಿಲ್ಲವೇಕೇ ಎಂದು ಪ್ರಶ್ನಿಸಿದರು. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು 15-20 ದಿನಗಳಲ್ಲಿ ಪೂರ್ಣಗೊಳಿಸಿ ವರದಿ ನೀಡುವಂತೆ ಸೂಚಿಸಿದರು.
ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿ ಯೋಜನೆಯಲ್ಲಿ 43.60 ಲಕ್ಷ ರೂ., ಗ್ರಾಮೀಣ ರಸ್ತೆ ದುರಸ್ತಿಗೆ 65 ಲಕ್ಷ ರೂ., ಬಿಆರ್‌ಜಿಎಫ್‌ನ 106.10 ಲಕ್ಷ ರೂ., ಎಸ್‌ಸಿ ಮತ್ತು ಎಸ್‌ಟಿ ಮೂಲಭೂತ ಸೌಲಭ್ಯಗಳ ಯೋಜನೆಯಡಿ 3.40 ಕೋಟಿ ರೂ., ಬಯಲುಸೀಮೆ ಪ್ರದೇಶಾಭಿವೃದ್ಧಿ ಯೋಜನೆಯ 1.80 ಕೋಟಿ ರೂ. ಸೇರಿದಂತೆ ಕೋಟಿಗಟ್ಟಲೆ ಅನುದಾನ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ನರೇಗಾ ಯೋಜನೆಯಲ್ಲಿ ಯಾವುದೇ ಅವ್ಯವಹಾರವಾಗದಂತೆ ಜಾಬ್ ಕಾರ್ಡ್ ಹೊಂದಿದ ಕೂಲಿಕಾರರಿಗೆ ಕೂಲಿ ಕೆಲಸ ನೀಡಬೇಕು. ಈ ಮೂಲಕ ಅವರು ಗುಳೆ ಹೋಗದಂತೆ ತಡೆಯಬೇಕು ಎಂದು ತಿಳಿಸಿದರು.
ಮೊದಲ ಸಭೆಯಾಗಿರುವುದರಿಂದ ಕ್ಷಮಿಸಲಾಗುತ್ತಿದ್ದು, ಮುಂದಿನ ಸಭೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಇದ್ದಲ್ಲಿ ಕಠಿಣ ಕ್ರಮ ಅನಿವಾರ್ಯ. ಹಿಂದೆ ಹೇಗಿತ್ತೋ ಗೊತ್ತಿಲ್ಲ, ಈಗ ಮಾತ್ರ ನಿರ್ಲಕ್ಷ್ಯಕ್ಕೆ ಅವಕಾಶ ನೀಡಲಾಗದು ಎಂದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಎಇಇ ಸುಕುಮಾರ್ ಪವಾರ್ ಮಾತನಾಡಿ, ಎಸ್ ಡಿಪಿ ಯೋಜನೆಯಲ್ಲಿ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲು ಒಂದು ಕೋಟಿ ರೂ. ಅನುದಾನ ಮಂಜೂರಾಗಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಆರ್‌ಒಗಳನ್ನು ನಿರ್ಮಿಸಲಾಗಿದೆ ಎಂದು ವರದಿ ಸಲ್ಲಿಸಿದರು.
ಶಾಸಕ ಬಿ. ಶ್ರೀರಾಮುಲು ಮಾತನಾಡಿ, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಎಲ್ಲಿ ಹೋದರೂ
ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕೆಂದು ಜನಸಾಮಾನ್ಯರು ಮುತ್ತಿಕೊಳ್ಳುತ್ತಾರೆ. ಸಾಕಷ್ಟು ಆರ್‌ಒ ಗಳನ್ನು ನಿರ್ಮಿಸಿ ನೀರು ನೀಡಿದ್ದರೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡುವ ಸ್ಥಿತಿ ಉದ್ಭವಿಸುತ್ತಿರಲಿಲ್ಲ. ಸೂಕ್ತವಾಗಿ ಕಾರ್ಯನಿರ್ವಹಿಸದ ಕಾರಣ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ತುಂಗಾ ಹಿನ್ನೀರು ಯೋಜನೆ ಜಾರಿಯಾಗುವವರೆಗೂ ಪ್ರತಿ ಗ್ರಾಮದಲ್ಲೂ ಆರ್‌ಒ ಅಳವಡಿಸಿ ಸಮರ್ಪಕವಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಲ್ಲಿ ಸಹಿಸುವುದಿಲ್ಲ ಎಂದು ಗುಡುಗಿದರು.
ಸಹಾಯಕ ಕೃಷಿ ನಿರ್ದೇಶಕ ರವಿ ಮಾತನಾಡಿ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ರೈತರಿಗೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕಳಪೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡದಂತೆ ಮಾರಾಟಗಾರರಿಗೆ ಸೂಚನೆ ನೀಡಲಾಗಿದೆ. ಶೇಂಗಾ ಬಿತ್ತನೆ ಬೀಜವನ್ನು ಪಟ್ಟಣದ ಗುರುಭವನ ಮತ್ತು ರಾಂಪುರದ ರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನು ಮಾಡಿ ರೈತರಿಗೆ ನಿಗದಿಪಡಿಸಿದ ದರದಂತೆ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ರೈತರ ಪ್ರಗತಿಗಾಗಿ ಕೇಂದ್ರ ಸರ್ಕಾರ ಕೃಷಿ ಇಲಾಖೆಗೆ ಹೆಚ್ಚಿನ ಯೋಜನೆಗಳನ್ನು ನೀಡಿದರು. ಆ ಯೋಜನೆಗಳ ಸೌಲಭ್ಯಗಳನ್ನು ರೈತರಿಗೆ ತಲುಪಿಸಬೇಕೆಂದು ಶಾಸಕರು ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ತಾಪಂ ಅಧ್ಯಕ್ಷೆ ಲತಮ್ಮ, ಉಪಾಧ್ಯಕ್ಷೆ ತಿಮ್ಮಕ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಜಿ. ಬಸಣ್ಣ, ಜಿಪಂ ಮಾಜಿ ಸದಸ್ಯ ಎಚ್.ಟಿ. ನಾಗಿ ರೆಡ್ಡಿ, ತಾಪಂ ಸದಸ್ಯ ಟಿ. ರೇವಣ್ಣ, ತಹಶೀಲ್ದಾರ್ ಜಿ. ಕೊಟ್ರೇಶ್, ತಾಪಂ ಇಒ ಸಿ.ಎನ್. ಚಂದ್ರಶೇಖರಯ್ಯ, ತಾಪಂ ಕೆಡಿಪಿ ಸದಸ್ಯರಾದ ಬಿ. ವಿಜಯ್, ಎಸ್.ಡಿ. ತಿಪ್ಪೇಸ್ವಾಮಿ, ಮಲಿಯಮ್ಮ, ರಾಮಾಂಜನೇಯ, ಬಿಇಒ ಸೋಮಶೇಖರ್, ತೋಟಗಾರಿಕೆ ಇಲಾಖೆಯ ರೇವಣ್ಣ, ಸಮಾಜ ಕಲ್ಯಾಣಾಧಿಕಾರಿ ನಾಗರಾಜ ನಾಯಕ, ಎಸ್‌ಟಿ ಇಲಾಖೆಯ ಗುರುಮೂರ್ತಿ, ಬಿಸಿಎಂನ ಬಸವರಾಜ ಹಾಗೂ ವಿವಿಧ ಇಲಾಖೆಗಳು ಅಧಿಕಾರಿಗಳು ಭಾಗವಹಿಸಿದ್ದರು.