ಶಿವಮೊಗ್ಗ: ಸಿಎಂ ಯಾವಾಗ ಸಭೆ ನಿಗದಿ ಮಾಡುತ್ತಾರೋ ಗೊತ್ತಿಲ್ಲ. ಇನ್ನು ಚರ್ಚೆಯ ಹಂತದಲ್ಲಿದೆ. ಕಾನೂನು ತಜ್ಞರ ಜೊತೆ ಚರ್ಚೆ ನಡೆಸಬೇಕು. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ಚುನಾವಣೆಗೂ ಮುನ್ನ ಕಾಂಗ್ರೆಸ್ ಬೇಕು ಅಂದಿತ್ತು. ಬಿಜೆಪಿಯವರು ಬೇಡ ಎಂದಿದ್ದರು. ಸರ್ಕಾರ ಬಂದಾಗ ಯಾರೋ ಕೇಳಿದ್ದಾರೆ. ಸಿಎಂ ಹೇಳಿದ್ದಾರೆ. ಸರ್ಕಾರವಾಗಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸಮವಸ್ತ್ರ ವಿಚಾರಕ್ಕೆ ಯಾವುದೇ ಗೊಂದಲ ಇಲ್ಲ. ಮೊದಲಿನಂತೆ ನಡೆಯುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು
ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಐದು ಗ್ಯಾರಂಟಿಯನ್ನು ಘೋಷಣೆ ಮಾಡಿತ್ತು. ಐದನೇ ಗ್ಯಾರಂಟಿ ಶಿವಮೊಗ್ಗದಲ್ಲಿ ಜಾರಿ ಮಾಡುತ್ತಿದ್ದೇವೆ. ಡಿಸೆಂಬರ್ 26 ರಿಂದ ನೋಂದಣಿ ಕೂಡ ಆರಂಭವಾಗಲಿದೆ. ಜನವರಿ 12 ರಂದು ಶಿವಮೊಗ್ಗದಲ್ಲಿ ಯುವನಿಧಿ ಗ್ಯಾರಂಟಿಗೆ ಚಾಲನೆ ನೀಡುತ್ತೇವೆ. ಸ್ವಾಮಿ ವಿವೇಕಾನಂದ ಜಯಂತಿಯ ದಿನ ಚಾಲನೆ ನೀಡುತ್ತೇವೆ. ಆ ದಿನವೇ ಫಲಾನುಭವಿಗಳ ಖಾತೆಗೆ ಹಣ ಹೋಗಲಿದೆ ಎಂದರು.
ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ನಡೆಯಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸಚಿವರು ಭಾಗಿಯಾಗುತ್ತಾರೆ. ರಾಜ್ಯದ ಎಲ್ಲಾ ಭಾಗದಿಂದಲೂ ಫಲಾನುಭವಿಗಳು ಭಾಗವಹಿಸುತ್ತಾರೆ. ಯುವಕರು ಅರ್ಜಿ ಹಾಕಿ, ಸರ್ಕಾರದ ಯೋಜನೆಯ ಲಾಭ ಪಡೆಯಬೇಕು. ಅದೇ ರೀತಿ ಬೇರೆ ಗ್ಯಾರಂಟಿ ಸಿಗದಿದ್ದರೆ, ಈಗಲೂ ಅವಕಾಶ ಇದೆ. ಸಂಬಂಧಪಟ್ಟ ಇಲಾಖೆಗೆ ಗ್ರಾ.ಪಂ ಮಟ್ಟದಲ್ಲೂ ಹೋಗಿ ಯೋಜನೆ ತಲುಪಿಸಲು ಹೇಳಿದ್ದಾರೆ. ಶಕ್ತಿ ಯೋಜನೆ ಮತ್ತಷ್ಟು ಅನುಷ್ಠಾನಕ್ಕೆ ಹೊಸ ಬಸ್ ಖರೀದಿ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ:Test; ವಾಂಖೆಡೆಯಲ್ಲಿ ವನಿತೆಯರ ವಿಕ್ರಮ; ಆಸೀಸ್ ವಿರುದ್ಧ ಮೊದಲ ಬಾರಿಗೆ ಟೆಸ್ಟ್ ಗೆದ್ದ ಭಾರತ
ಶಾಲಾ ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಬಾರದು. ಮಕ್ಕಳ ಜೊತೆ ಕ್ಲೀನ್ ಮಾಡಿಸೋದು ತಪ್ಪು. ಹೀಗಾಗಿ ಡಿ.ಗ್ರೂಪ್ ನೌಕರರ ನೇಮಕಾತಿ ಬಗ್ಗೆ ಚರ್ಚೆಯಾಗುತ್ತಿದೆ. ಗುತ್ತಿಗೆ ಆಧಾರದಲ್ಲಿ ಡಿ-ಗ್ರೂಪ್ ಸಿಬ್ಬಂದಿ ನೇಮಕಕ್ಕೆ ಸಿಎಂ ಜೊತೆ ಚರ್ಚಿಸಿ, ತೀರ್ಮಾನ ಮಾಡುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದರು.