Advertisement

ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಗೊಂದಲವಿಲ್ಲ

08:51 PM Jan 29, 2020 | Team Udayavani |

ಚನ್ನರಾಯಪಟ್ಟಣ: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲದೇ ಸುಸೂತ್ರವಾಗಿ ನಡೆಯಲಿದ್ದು, ಮುಖ್ಯ ಮಂತ್ರಿ ಯಡಿಯೂರಪ್ಪ ಶೀಘ್ರದಲ್ಲಿ ದಿನಾಂಕ ಘೋಷಣೆ ಮಾಡಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಪಟ್ಟಣದಲ್ಲಿ ನೂತನವಾಗಿ ಪ್ರಾತಂಭವಾಗಿರುವ ಲಕ್ಷ್ಮೀನಾರಾಯಣ ಪೆಟ್ರೋಲ್‌ ಬಂಕ್‌ ಉದ್ಘಾಟನಾ ಸಮಾರಂಭಕ್ಕೆ ಮುನ್ನ ಹೆಲಿಪ್ಯಾಡ್‌ನ‌ಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು, ಸಚಿವ ಸಂಪುಟ ವಿಸ್ತರಣೆ ಸುಸೂತ್ರವಾಗಿ ನಡೆಯುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ನಂತರದ ದಿವಸದಲ್ಲಿ ಸಿಎಂ ಸಂಪುಟ ವಿಸ್ತರಣೆಯ ದಿನಾಂಕ ನಿಗದಿಪಡಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ದಿನೇ ದಿನೇ ಕುತೂಹಲ ಕೆರಳಿಸುತ್ತಿದೆ. ಪಕ್ಷದಲ್ಲಿ ಭಿನ್ನಾಭಿಪ್ರಾಯ ಮೂಡಬಹುದೆಂಬ ಆತಂಕದಿಂದ ಸಂಪುಟ ವಿಸ್ತರಣೆ ಕಗ್ಗಂಟಾಗಿದೆ ಎಂಬುದಾಗಿ ವಿರೋಧ ಪಕ್ಷಗಳು ಚಾತಕ ಪಕ್ಷಿಗಳಂತೆ ಕಾಯುತ್ತಿವೆ. ಯಾವುದೇ ಗೊಂದಲವಿಲ್ಲದೇ ಸುಸೂತ್ರವಾಗಿ ಸಚಿವ ಸಂಪುಟ ವಿಸ್ತರಣೆಯೊಂದಿಗೆ ಮೂರೂವರೆ ವರ್ಷ ಬಿಜೆಪಿ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಜನಪರ ಸರ್ಕಾರವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.

ಸೋತವರಿಗೆ ಸಚಿವ ಸ್ಥಾನವಿಲ್ಲ: ಮಾಜಿ ಸಚಿವ ವಿಶ್ವನಾಥ್‌ ಮಂತ್ರಿ ಸ್ಥಾನ ಕೇಳುವುದು ಸಹಜ. ಆದರೆ ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಏನು ಹೇಳಿದೆಯೋ ಅದರಂತೆ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ. ಈ ಸರ್ಕಾರ ರಚಿಸಲು ತ್ಯಾಗ ಮಾಡಿದವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ವಿಶ್ವನಾಥ್‌ ಪಟ್ಟು ಹಿಡಿದಿದ್ದಾರೆ. ಇವರನ್ನು ಸಿಎಂ ಸಮಾಧಾನ ಮಾಡಲಿದ್ದಾರೆ, ಶಾಸಕರಾಗದೇ ಚುನಾವಣೆಯಲ್ಲಿ ಸೋತವರಿಗೆ ಯಾವುದೇ ಕಾರಣಕ್ಕೆ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ ಎಂದು ಡಿಸಿಎಂ ಪರೋಕ್ಷವಾಗಿ ಸ್ಪಷ್ಟಪಡಿಸಿದರು.

ಸುಪ್ರೀಂಕೋರ್ಟ್‌ ತೀರ್ಪಿನಲ್ಲಿ ಗೆದ್ದವರಿಗೆ ಮಂತ್ರಿ ಸ್ಥಾನ ಕೊಡಬೇಕು ಎಂದಿದೆ, ಹೀಗಾಗಿ ಸೋತವರ ಬಗ್ಗೆ ಬಿಜೆಪಿಯ ರಾಜ್ಯ, ರಾಷ್ಟ್ರೀಯ ವರಿಷ್ಠರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನ ಮಾಡಲಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ತ್ಯಾಗ ಮಾಡಿದವರಿಗೆಲ್ಲಾ ಬಿಜೆಪಿಯಿಂದ ಒಳ್ಳೆಯದಾಗಲಿದೆ ಎಂದರು.

Advertisement

ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಬೇಕೆಂಬ ವಿಚಾರಕ್ಕೆ ಅದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು, ಇದರಲ್ಲಿ ನನ್ನ ಪಾತ್ರವಿಲ್ಲ ಮಾಜಿ ಮಂತ್ರಿ ಆರ್‌.ಶಂಕರ್‌ ಅವರಿಗೂ ಮುಂದಿನ ದಿವಸದಲ್ಲಿ ಖಂಡಿತ ಒಳ್ಳೆಯದಾಗುತ್ತದೆ. ಆಡಳಿತ ಪಕ್ಷಕ್ಕಿಂತ ವಿರೋಧ ಪಕ್ಷದವರಿಗೆ ಮಂತ್ರಿ ಮಂಡಲದ ಮೇಲೆ ಹೆಚ್ಚು ಆಸಕ್ತಿ ಇರುವುದು ಏಕೆ ಎಂದು ಪ್ರಶ್ನಿಸಿದರು.

ಪಕ್ಷ ನಿಷ್ಠರಿಗೆ ಅಧಿಕಾರ: ನಮ್ಮ ಪಕ್ಷದಲ್ಲಿರುವ ಎಲ್ಲಾ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಗೌರವ ಸ್ಥಾನಮಾನ ದೊರಕಿದ್ದು, ಮುಂದಿನ ದಿವಸದ‌ಲ್ಲಿಯೂ ಪಕ್ಷಕ್ಕಾಗಿ ದುಡಿಯುವ ನಿಷ್ಠಾವಂತರಿಗೆ ಅಧಿಕಾರ ದೊರೆಯುತ್ತದೆ. ಮುಖ್ಯಮಂತ್ರಿಗಳು ಕಾನೂನು ಚೌಕಟ್ಟಿನಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next