Advertisement

ಈ ಬಾರಿ ಯಾವ ಪಕ್ಷದ ಜೊತೆಯೂ ಹೊಂದಾಣಿಕೆಯಿಲ್ಲ, ಪೂರ್ಣಪ್ರಮಾಣದ ಸರ್ಕಾರಕ್ಕೆ ಹೋರಾಟ; ಎಚ್ ಡಿಕೆ

11:09 AM Apr 12, 2022 | Team Udayavani |

ಮೈಸೂರು: ಈ ಬಾರಿ ಕನ್ನಡಿಗರ ಬಹುಮತದ ಸರ್ಕಾರ ಬೇಕು. ಯಾವ ಪಕ್ಷದ ಜೊತೆಯೂ ಹೊಂದಾಣಿಕೆ ಮಾಡುವುದಿಲ್ಲ. 30 ಅಥವಾ 40 ಸ್ಥಾನಕ್ಕಾಗಿ ಹೋರಾಟ ಅಲ್ಲ. ಪೂರ್ಣ ಪ್ರಮಾಣದ ಸರ್ಕಾರಕ್ಕೆ ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.

Advertisement

ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜನತಾ ಜಲಧಾರೆ ಯಾತ್ರೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ವಿಚಾರಾಧಾರಿತವಾದ ಹೋರಾಟ. ಧರ್ಮ -ಧರ್ಮಗಳ ನಡುವೆ ಬೆಂಕಿ ಇಟ್ಟು ಮತ ಕೇಳುತ್ತಿಲ್ಲ. ರಾಜ್ಯದ ಅಭಿವೃದ್ದಿಗಾಗಿ ನಮ್ಮ ಹೋರಾಟ ಎಂದರು.

ಈ ಬಾರಿ ಜೆಡಿಎಸ್‌ಗೆ ಬಹುಮತ ಕೊಡಿ. 5 ವರ್ಷದಲ್ಲಿ ರಾಜ್ಯದ ನೀರಾವರಿ ಯೋಜನೆ ಅನುಷ್ಠಾನ ಮಾಡುತ್ತೇನೆ. ಸಾಧ್ಯವಾಗದಿದ್ದರೆ ಜೆಡಿಎಸ್ ವಿಸರ್ಜನೆ ಮಾಡಲಾಗುವುದು ಎಂದರು.

ಜನತಾ ಜಲಧಾರೆ ಯಾತ್ರೆ ವಿಚಾರವಾಗಿ ಮಾತನಾಡಿ, ಇದು ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಪರ್ಯಾಯವಲ್ಲ. ಅದು ಶೋಗಾಗಿ ನಡೆಸಿದ ಯಾತ್ರೆ. ಅವರು ನೇರವಾಗಿ ರಾಜಕೀಯ ಯಾತ್ರೆ ಎಂದು ಹೇಳಲಿಲ್ಲ. ನಮ್ಮದು ಜನರ ಮುಂದೆ ಸಮಸ್ಯೆ ಬಿಚ್ಚಿಡಲು ಯಾತ್ರೆ. ಈ ಮೂಲಕ ಅಧಿಕೃತ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ. ಇದನ್ನು ನಾನು ನೇರವಾಗಿ ಹೇಳುತ್ತಿದ್ದಾನೆ ಎಂದರು.

ಇದನ್ನೂ ಓದಿ:4ನೇ ಅಲೆಯ ಭೀತಿ: ಮತ್ತೆ ಕೋವಿಡ್ 19 ಸೋಂಕು ಪತ್ತೆ-ದೆಹಲಿ, ಎನ್ ಸಿಆರ್ ಶಾಲೆಗಳು ಬಂದ್

Advertisement

ಸಿಎಂ ಬಸವರಾಜ ಬೊಮ್ಮಾಯಿ ಮೌನ ವಿಚಾರವಾಗಿ ಪ್ರತಿಕ್ರಿಯಿಸಿ, ನಿಮ್ಮ ಯಾವ ಕೆಲಸ ಮಾತನಾಡುತ್ತಿದೆ.? ರಾಯಚೂರಿನಲ್ಲಿ ತಲವಾರ್ ಹಂಚಿದ್ದಾರೆ. ಯಾವ ಕಾರಣಕ್ಕೆ ತಲವಾರ್ ಹಂಚಿದ್ದಾರೆ? ಅವರ‌ನ್ನು ನೀವು ಅರೆಸ್ಟ್ ಮಾಡಿದ್ದೀರಾ? ಮೌನಿ‌ ಬಸವರಾಜ ಬೊಮ್ಮಾಯಿ ಅವರೇ ಎಂದು ಕಿಡಿಕಾರಿದರು.

ರಾಯಚೂರಿನಲ್ಲಿ ಲವ್ ಕೇಸರಿ ವಿಚಾರವಾಗಿ ಮಾತನಾಡಿ, ಯಾವುದೇ ಪ್ರೀತಿಯಲ್ಲಿ ಬಾಂಧವ್ಯ ಮುಖ್ಯ. ಪರಸ್ಪರ ಪ್ರೀತಿಸುವವರಿಗೆ ತೊಂದರೆ ಕೊಡಬಾರದು. ಅವರು ಯಾವ ಧರ್ಮದವರೇ ಆಗಿರಲಿ. ಅವರನ್ನು ನಿಯಂತ್ರಿಸುವ ಕೆಲಸ ಮಾಡಬಾರದು ಎಂದರು.

ನಮ್ಮ ಹಾಸನ ಜಿಲ್ಲೆಯಲ್ಲಿ ಯಾವ ಜಾತ್ರೆಯಲ್ಲೂ ಮುಸ್ಲಿಂಮರಿಗೆ ನಿರ್ಬಂಧ ಹೇರುವುದಕ್ಕೆ ಅವಕಾಶ ಕೊಡುವುದಿಲ್ಲ. ಚೆನ್ನಕೇಶವ ಜಾತ್ರೆಯಲ್ಲಿ ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿದೆ. ಖುದ್ದು ರೇವಣ್ಣ ಅವರಿಗೆ ಸಮಸ್ಯೆ ಬಗೆಹರಿಸುವಂತೆ ಹೇಳಿದ್ದೇನೆ. ನಿರ್ಬಂಧ ತೆರವು ಮಾಡಿಸಿ ಅವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಿಸುತ್ತೇನೆ. ಹಾಸನ ಜಿಲ್ಲೆ ಮಾತ್ರ ಅಲ್ಲ, ಎಲ್ಲಾ ಜಿಲ್ಲೆಗಳಲ್ಲೂ ನಿರ್ಬಂಧ ತೆರವಿಗೆ ನನ್ನ ಹೋರಾಟ ಇರುತ್ತೆ ಎಂದರು.

ಜ್ಞಾನೋದಯವಾಗಿದೆ: ನಮ್ಮ ಪಕ್ಷ ಬಿಟ್ಟುಹೋಗುವ ಮನಸ್ಸು ಮಾಡಿದವರಿಗೆ ಈಗ ಜ್ಞಾನೋದಯವಾಗುತ್ತಿದೆ‌. ಜ್ಞಾನೋದಯವಾಗಿ ಅವರು ಪಕ್ಷದಲ್ಲೇ ಉಳಿದರೆ ನನಗೇನು ಸಮಸ್ಯೆ ಇಲ್ಲ. ಪಕ್ಷ ಬಿಟ್ಟವರೂ‌ ಕೂಡಾ ಪಕ್ಷಕ್ಕೆ ಬರುವ ಮಾತಾಡುತ್ತಿದ್ದಾರೆ. ಅವರು ಬಂದರೂ ಸಂತೋಷ. ಯಾವುದೇ ಪಕ್ಷದಿಂದ ಯಾರೇ ನಮ್ಮ ಪಕ್ಷಕ್ಕೆ ಬಂದರೂ ಸ್ವಾಗತ. ಆದರೆ ಅಧಿಕಾರಕ್ಕಾಗಿ ಪಕ್ಷಕ್ಕೆ ಬಂದರೆ ಅಂತವರಿಗೆ ನಮ್ಮಲ್ಲಿ ಅವಕಾಶ ಇಲ್ಲ. ಈ ಬಾರಿ ಹೊಸ ಮುಖಗಳಿಗೆ ಅವಕಾಶ ಕೊಡಬೇಕೆಂಬುದು ನನ್ನ ಆಸೆ ಎಂದು ಎಚ್ ಡಿಕೆ ಹೇಳಿದರು.

ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಿರಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ತಮ್ಮ ಮನಸ್ಸಿನ ಮಾತನ್ನು ನೇರವಾಗಿ ಹೇಳಿದ್ದಾರೆ. ಅದು ಅವರ ಬಾಯ್ತಪ್ಪಿನಿಂದ ಬಂದ ಮಾತಲ್ಲ. ಅದು ಅವರ ಮನಸ್ಸಿನ ಮಾತು ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next