ಉಡುಪಿ: ಶೀರೂರು ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿಯವರ ರಾಜಕೀಯ ನಡೆಯ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರು, ಶೀರೂರು ಶ್ರೀಗಳಲ್ಲಿ ಸ್ಪಷ್ಟತೆಯೇ ಇಲ್ಲ ಎಂದು ಹೇಳಿದ್ದಾರೆ.
ಶೀರೂರು ಶ್ರೀಗಳು ದಂದ್ವದಲ್ಲಿದ್ದಾರೆ, ಅದನ್ನು ಅವರೇ ಸರಿಪಡಿಸಿಕೊಳ್ಳಬೇಕು. ಶ್ರೀಗಳು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದವರು, ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ. ಜಿಲ್ಲಾ ಬಿಜೆಪಿ ಬಗ್ಗೆ ಅವರು ಮಾಡಿರುವ ಆರೋಪದಲ್ಲೂ ಸ್ಪಷ್ಟತೆಯಿಲ್ಲ. ಜಿಲ್ಲಾ ಬಿಜೆಪಿ ಸರಿಯಾಗಿದೆ, ಸರಿಪಡಿಸುವ ಉದ್ದೇಶದಿಂದ ಯಾರೂ ಬಿಜೆಪಿಗೆ ಬರುವ ಆವಶ್ಯಕತೆ ಇಲ್ಲ ಎಂದರು.
ಶ್ರೀಗಳು ಒಂದೆಡೆ ಕಾಂಗ್ರೆಸ್ ಶಾಸಕ ಪ್ರಮೋದ್ ಮಧ್ವರಾಜ್ ಅವರನ್ನು ಹೊಗಳಿದ್ದಾರೆ, ಇನ್ನೊಂದೆಡೆ ಬಿಜೆಪಿಯಿಂದ ಟಿಕೆಟ್ ಬಯಸಿದ್ದಾರೆ. ಈ ವಿಚಾರದಲ್ಲಿ ಅವರಲ್ಲಿ ಸಾಕಷ್ಟು ಗೊಂದಲವಿದೆ. ಜಿಲ್ಲಾ ಬಿಜೆಪಿ ಬಗ್ಗೆ ಅವರಲ್ಲಿರುವ ಅಸಮಾಧಾನದಲ್ಲೂ ಸ್ಪಷ್ಟತೆ ಇಲ್ಲ ಎಂದು ಮಟ್ಟಾರು ಹೇಳಿದರು.
ಶೀರೂರು ಶ್ರೀ “ರಾಜಕೀಯ’- ತಲೆಕೆಡಿಸಿಕೊಂಡಿಲ್ಲ: ರಘುಪತಿ ಭಟ್
ಶೀರೂರು ಶ್ರೀಗಳು ರಾಜಕೀಯ ಪ್ರವೇಶಕ್ಕೆ ನಿರ್ಧರಿಸಿರುವುದರ ಕುರಿತು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ನಾನು ಕಾರ್ಯಕರ್ತರ ಜತೆ ಮನೆ ಮನೆ ಭೇಟಿ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇನೆ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಪ್ರತಿಕ್ರಿಯಿಸಿದ್ದಾರೆ.
ಚುನಾವಣೆಗೆ ಸ್ಪರ್ಧಿಸುವುದು ಅವರ ವೈಯಕ್ತಿಕ ಅಭಿಪ್ರಾಯ. ಅದನ್ನು ಯಾರೂ ಪ್ರಶ್ನೆ ಮಾಡಲಾಗದು. ಆದರೆ ಅವರಿಗೆ ಬಿಜೆಪಿ ಟಿಕೆಟ್ ದೊರೆಯುತ್ತದೆ ಎಂದು ಹೇಳಲಾರೆ. ಪಕ್ಷದ ಸದಸ್ಯನೇ ಅಲ್ಲದವರಿಗೆ, ಟಿಕೆಟ್ ನೀಡದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಎಂದು ಹೇಳುವವರಿಗೆ ಟಿಕೆಟ್ ನೀಡುವ ಸಂಪ್ರದಾಯವನ್ನು ಬಿಜೆಪಿ ಇದುವರೆಗೆ ಅನುಸರಿಸಿಕೊಂಡು ಬಂದಿಲ್ಲ. ಯಾರಿಗೆ ಟಿಕೆಟ್ ದೊರೆತರೂ ಒಂದಾಗಿ ಕೆಲಸ ಮಾಡುತ್ತೇವೆ ಎಂಬ ಮನಃಸ್ಥಿತಿಯವರನ್ನು ಮಾತ್ರ ಬಿಜೆಪಿ ಪರಿಗಣಿಸುತ್ತದೆ. ಪ್ರಮೋದ್ ಮಧ್ವರಾಜ್ ಅವರಿಗೆ ಸೋಲಿನ ಭೀತಿ ಹೆಚ್ಚಾಗುತ್ತಿದೆ. ಶೀರೂರು ಶ್ರೀಗಳ ನಿರ್ಧಾರದಲ್ಲಿಯೂ ಪ್ರಮೋದ್ ಅವರ ಷಡ್ಯಂತ್ರ ಇದೆ ಎಂಬ ಸಂಶಯ ಜನರಲ್ಲಿದೆ. ಬಿಜೆಪಿಯ ಎದುರಾಳಿ ಪ್ರಮೋದ್ ಅವರನ್ನು ಗೆಲ್ಲಿಸುವ ಪ್ರಯತ್ನವಾಗಿ ಸ್ವಾಮೀಜಿ ಸ್ಪರ್ಧೆಯ ವಿಚಾರ ಮಾತನಾಡಿದ್ದಾರೆ ಎಂಬ ಸಂದೇಹ ಜನರಲ್ಲಿದೆ. ನಮ್ಮ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿಲ್ಲ. ನಾವು ನಮ್ಮ ಪಕ್ಷದ ಕೆಲಸವನ್ನು ನಿಷ್ಠೆಯಿಂದ ಮುಂದುವರಿಸಿದ್ದೇವೆ ಎಂದು ರಘುಪತಿ ಭಟ್ ಅವರು ಪ್ರತಿಕ್ರಿಯಿಸಿದ್ದಾರೆ.