ಕಾರ್ಕಳ: ಶಾಲೆ-ಕಾಲೇಜಿಗೆ ಹೋಗಲು ನಾವು ಸಿದ್ಧರಾಗಿದ್ದೇವೆ. ಆದರೆ ಇಲ್ಲಿ ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ. ಖಾಸಗಿ ವಾಹನ ಮಾಡಿಕೊಂಡು ಹೋಗುವಷ್ಟು ಶಕ್ತಿ ನಮಗಿಲ್ಲ. ಇದು ಪಳ್ಳಿ, ಕುಂಟಾಡಿ ಪರಿಸರದ ನೂರಾರು ಮಕ್ಕಳಿಂದ ಕೇಳಿ ಬಂದ ಅಳಲು.
ಶಾಲಾ ಕಾಲೇಜಿಗೆ ಮಕ್ಕಳು ತೆರಳಲು ಆರಂಭಿಸಿದ್ದಾರೆ. ಶಾಲಾರಂಭ ಆಗುತ್ತಿದ್ದಂತೆ ತಾ|ನಲ್ಲಿ ಸಂಚಾರ ವ್ಯವಸ್ಥೆ ಯಲ್ಲಿನ ತಾಪತ್ರಯಗಳು ಎಲ್ಲೆಡೆಯಿಂದ ಕೇಳಿ ಬರುತ್ತಿವೆ. ಸಂಚಾರ ಸಮಸ್ಯೆ ನಿವಾರಿಸಿ ಎಂದು ಮಕ್ಕಳು ಗೋಳು ತೋಡಿಕೊಂಡಿದ್ದಾರೆ.
ಕಾರ್ಕಳ ತಾಲೂಕಿನ ಪಳ್ಳಿ, ಕುಂಟಾಡಿ, ಗುಂಡ್ಯಡ್ಕ ಅತ್ತೂರು ಈ ಭಾಗದಿಂದ ನಗರದ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಕಲಿಕೆಗೆಂದು ಸುಮಾರು 150ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ ಇವರಿಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲ. ಆಟೋರಿಕ್ಷಾ ಬಾಡಿಗೆ ಮಾಡಿಕೊಂಡು ಶಾಲೆಗೆ ತೆರಳಲು ಸುಮಾರು 80ರಿಂದ 150 ರೂ.ನಂತೆ ಎರಡೂ ಹೊತ್ತು ನೀಡಬೇಕಿದೆ. ಪ್ರತಿನಿತ್ಯ ಇಷ್ಟೊಂದು ಮೊತ್ತ ಪಾವತಿಸಿ ಶಾಲೆಗೆ ಬರುವುದು ಮಕ್ಕಳಿಗೆ ಕಷ್ಟವೆನಿಸಿದೆ.
ಬಸ್ ಕಡಿತದಿಂದ ಸಮಸ್ಯೆ:
ಪಳ್ಳಿ, ಕುಂಟಾಡಿ, ಗುಂಡ್ಯಡ್ಕ ಅತ್ತೂರು ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಹಿಂದೆ 8.15ಕ್ಕೆ ಮಾಳ ಕಡೆಯ ಮತ್ತು 8.45ಕ್ಕೆ ಇರ್ವತ್ತೂರು ಮಾರ್ನಾಡು ಭಾಗಕ್ಕೆ ಖಾಸಗಿ ಬಸ್ ಬರುತ್ತಿತ್ತು. ಲಾಕ್‌ಡೌನ್ ಸಂದರ್ಭ ಸ್ಥಗಿತಗೊಂಡ ಬಸ್ ಮತ್ತೆ ಆರಂಭಗೊಂಡಿಲ್ಲ. ಈಗ 9.30ಕ್ಕೆ ಒಂದು ಖಾಸಗಿ ಬಸ್ ಇದ್ದರೂ ಅದು ಸಮಯಕ್ಕೆ ಸರಿಯಾಗಿ ಬಾರದೆ ಶಾಲೆಗೆ ತಲುಪಲು ಅನನುಕೂಲವಾಗಿದೆ. ಅದು ಬಿಟ್ಟರೆ ಮಧ್ಯಾಹ್ನ 1ಕ್ಕೆ ಮತ್ತು ಸಂಜೆ 5 ಗಂಟೆಗೆ ಕಾರ್ಕಳ ಪೇಟೆಯಿಂದ ಊರುಗಳತ್ತ ಕೊನೆಯ ಬಸ್ ಬರುತ್ತದೆ. ಕಾಲೇಜುಗಳಲ್ಲಿ ಹೆಚ್ಚುವರಿ ತರಗತಿ, ಪ್ರಯೋಗ ತರಗತಿಗಳನ್ನು ನಡೆಸಿದರೆ ಮಕ್ಕಳಿಗೆ ಊರಿಗೆ ಹೋಗಲು ಸಂಜೆ ಅನನುಕೂಲವಾಗುತ್ತಿದೆ.
ಶುಲ್ಕಕ್ಕಿಂತ ಪ್ರಯಾಣ ದರ ಹೊರೆ!:
ಕೊರೊನಾ ಸೋಂಕು, ಲಾಕ್‌ಡೌನ್ ಇತ್ಯಾದಿ ಕಾರಣಗಳಿಂದ ಎಲ್ಲರೂ ಮೊದಲೇ ಆರ್ಥಿಕ ಸಮಸ್ಯೆಗೆ ಒಳಗಾಗಿದ್ದಾರೆ. ಈ ನಡುವೆ ಮಕ್ಕಳ ಶಾಲೆ ಕಾಲೇಜುಗಳ ಶುಲ್ಕಕ್ಕಿಂತ ಬಾಡಿಗೆ ವಾಹನದ ಖರ್ಚು ದುಬಾರಿಯಾಗಿದ್ದು, ನಿತ್ಯ ಆಟೋ, ಖಾಸಗಿ ವಾಹನಗಳಲ್ಲಿ ಮಕ್ಕಳನ್ನು ಶಾಲೆ ಕಾಲೇಜುಗಳಿಗೆ ಕಳಿಸುವ ಪ್ರಯಾಣ ದರವೇ ದೊಡ್ಡ ಹೊರೆಯಾಗಿದೆ ಎಂದು ಹೆತ್ತ ವರು ದೂರಿದ್ದಾರೆ.
ನಾವು ಹಲ ವು ಮಂದಿ ವಿದ್ಯಾರ್ಥಿಗಳು ನಗರದ ಶಾಲಾ ಕಾಲೇಜಿಗೆ ಹೋಗುತ್ತಿದ್ದೇವೆ. ಸರಿಯಾದ ಸಮಯಕ್ಕೆ ಬಸ್ ಇಲ್ಲದೆ ತರಗತಿ ತಲುಪುವಲ್ಲಿ ಸಮಸ್ಯೆಯಾಗುತ್ತಿದೆ. ಇದರಿಂದ ನಮ್ಮ ಕಲಿಕೆ ಕುಂಠಿತವಾಗುತ್ತಿದೆ.
–ಶ್ರದ್ಧಾ, ವಿದ್ಯಾರ್ಥಿನಿ
ಬಸ್ ಸಮಸ್ಯೆ ನಿವಾರಣೆಗೆ ಸಂಬಂಧಿಸಿದವರ ಜತೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಲು ಶ್ರಮಿಸುವೆ.
–ಸತೀಶ್ , ಗ್ರಾ.ಪಂ. ಅಧ್ಯಕ್ಷ, ನಿಟ್ಟೆ
-ಬಾಲಕೃಷ್ಣ ಭೀಮಗುಳಿ