Advertisement

ಕಲ್ಮಕಾರು: ಇದ್ದ ಮುರುಕಲು ಸೇತುವೆಯೂ ಮುರಿದು ಬಿತ್ತು

05:30 AM May 26, 2018 | Karthik A |

ಸುಬ್ರಹ್ಮಣ್ಯ: ಮಳೆ ನಿತ್ಯವೂ ಸುರಿಯುತ್ತಲೇ ಇದೆ. ಇನ್ನೇನು ಎರಡೇ ದಿನಗಳಲ್ಲಿ ಮಕ್ಕಳಿಗೆ ಶಾಲೆಯೂ ಆರಂಭವಾಗಲಿದೆ. ಮಕ್ಕಳು ಶಾಲೆಗೆ ತೆರಳಲು ಸಿದ್ಧರಾಗಿದ್ದಾರೆ. ಇತ್ತ ಶಾಲೆಗೆ ತೆರಳುವುದು ಹೇಗೆ ಎನ್ನುವ ಚಿಂತೆ ಮಕ್ಕಳು, ಪೋಷಕರನ್ನು ಇಲ್ಲಿ ಕಾಡುತ್ತಿದೆ. ಸುಳ್ಯ ತಾಲೂಕಿನ ತುತ್ತತುದಿಯಲ್ಲಿದೆ ಕಲ್ಮಕಾರು ಗ್ರಾಮ. ಇಲ್ಲಿಂದ ಅಂಜನಕಜೆ ಕೊಪ್ಪಡ್ಕ ಗುಳಿಕಾನ ಗುಡ್ಡೆಕಾನ ಪೆರ್ಮುಕಜೆ ಭಾಗಗಳನ್ನು ತಲುಪಬೇಕಿದ್ದರೆ ಶೆಟ್ಟಿಕಜೆ ಎಂಬಲ್ಲಿ ಹರಿಯುತ್ತಿರುವ ಹೊಳೆ ದಾಟಬೇಕು. ಮಳೆಗಾಲ ಈ ಹೊಳೆ ನೆರೆಯಿಂದ ತುಂಬಿ ಹರಿಯುತ್ತಿದೆ. ಸಂಚಾರಕ್ಕೆ ತೊಡಕಾಗುತ್ತದೆ. ಇದು ಈ ಬಾರಿಯೂ ಪುನಾರವರ್ತನೆಗೊಂಡಿದೆ. ಇದ್ದ ಒಂದು ಮುರುಕುಲು ಸೇತುವೆಯೂ ಇತ್ತೀಚೆಗೆ ಮುರಿದು ಬಿದ್ದು, ಸಮಸ್ಯೆ ಮತ್ತಷ್ಟೂ ಬಿಗಡಾಯಿಸಿದೆ.

Advertisement

ಅಡಿಕೆ ದಬ್ಬೆ ಸೇತುವೆ
ಈ ಭಾಗದ ಮಕ್ಕಳು ಕಲ್ಮಕಾರು ಪ್ರಾಥಮಿಕ ಶಾಲೆ, ಅಂಗನವಾಡಿ ಹಾಗೂ ಇತರೆಡೆಯ ಶಾಲಾ ಕಾಲೇಜುಗಳಿಗೆ ಬಂದುಹೋಗುತ್ತಾರೆ. ಶೆಟ್ಟಿಕಜೆ ಎಂಬಲ್ಲಿ ಸ್ಥಳಿಯರೇ ಅಡಿಕೆ ಸಲಾಕೆಗಳಿಂದ ತಾತ್ಕಾಲಿಕ ತೂಗು ಸೇತುವೆ ನಿರ್ಮಿಸಿಕೊಂಡು ಬಳಕೆ ಮಾಡುತ್ತಾರೆ. ಇದುವರೆಗೆ ಈ ರೀತಿ ನಿರ್ಮಿಸಿಕೊಂಡ ಸೇತುವೆಯಲ್ಲೆ ಓಡಾಡುತ್ತಿದ್ದರು. ಜೀವ ಕೈಯಲ್ಲಿ ಹಿಡಿದುಕೊಂಡು ಈ ಸೇತುವೆ ದಾಟುವ ಸಾಹಸ ಮಾಡುತ್ತಿದ್ದರು. ಈಗ ಅದಕ್ಕೂ ಸಂಚಕಾರ ಬಂದಿದೆ. ಶಾಲಾ ಆರಂಭದ ದಿನಗಳಲ್ಲೆ ವಿಘ್ನ ಉಂಟಾಗಿದೆ.

ಕಳೆದ ಮಳೆಗಾಲದ ವೇಳೆಗೆ ನಿರ್ಮಿಸಿದ ತಾತ್ಕಾಲಿಕ ತೂಗು ಸೇತುವೆ ಬಳಿಕ ದಿನಗಳಲ್ಲಿ ಶಿಥಿಲಗೊಂಡಿತ್ತು. ಅದೀಗ ಮುರಿದಿದ್ದರಿಂದ ಈಗ ಈ ಮಾರ್ಗವಾಗಿ ಹೋಗಬೇಕಾದರೆ ನದಿ ದಾಟಿ ಹೋಗಬೇಕು. ಈ ಹೊಳೆ ನೆರೆಯಿಂದ ತುಂಬಿ ಹರಿಯುತ್ತದೆ. ಮಕ್ಕಳು ಸಹಿತ ನಾಗರಿಕರು ಹೊಳೆ ದಾಟಿ ತೆರಳುವ ಈ ಪ್ರಯತ್ನದಲ್ಲಿ ಅಪಾಯಕ್ಕೆ ಒಳಗಾಗುವ ಸನ್ನಿವೇಶಗಳು ಇವೆ.


ಪೋಷಕರಿಗೆ ದಡ ಕಾಯುವ ಶಿಕ್ಷೆ

ಇಷ್ಟು ವರ್ಷವೂ ಪ್ರತಿ ಮಳೆಗಾಲದ ಅವಧಿಯಲ್ಲಿ ಪ್ರತಿದಿನ ಮಕ್ಕಳ ಪೋಷಕರು ಎರಡು ಹೊತ್ತು ಅರ್ಧ ದಾರಿ ತನಕ ಅಂದರೆ ಸೇತುವೆ ತನಕ ಬಂದು ಮಕ್ಕಳನ್ನು ಸೇತುವೆ ದಾಟಿಸಿ ಶಾಲೆಗೆ ಕಳುಹಿಸಿ ತೆರಳುತ್ತಾರೆ. ಸಂಜೆ ಮತ್ತೆ ಸೇತುವೆಯ ದಡದ ಬದಿ ಕಾದು ಕುಳಿತು ಶಾಲೆ ಬಿಟ್ಟಾಗ ಮನೆಗೆ ಕರೆದೊಯ್ಯುತ್ತಾರೆ. ಈ ವರ್ಷವೂ ಅದು ಮುಂದುವರೆಯುವ ಆತಂಕ ಸೃಷ್ಟಿಯಾಗಿದೆ.

ಈ ಪ್ರದೇಶದಲ್ಲಿ ನಲವತ್ತಕ್ಕೂ ಅಧಿಕ ಮನೆಗಳಿವೆ. ಪರಿಶಿಷ್ಟ ಜಾತಿ ಪಂಗಡಗಳ ಕುಟುಂಬಗಳು ಇಲ್ಲಿವೆ. ಪಡಿತರ, ಆಹಾರ ಸಾಮಾಗ್ರಿ ತರಲು, ಅನಾರೋಗ್ಯ ಇತ್ಯಾದಿ ಬಾಧಿಸಿದಾಗ ಇವರು ಸಂಚಾರಕ್ಕೆ ಇದೇ ಸೇತುವೆಯ ಆಶ್ರಯ ಪಡೆಯಬೇಕು. ವಾಹನ ಸಂಚಾರ ಊರಿಗೆ ಬರದೆ ಇರುವುದರಿಂದ ಸೇತುವೆ ಮೇಲೆ ಹೊತ್ತು ಅನಾರೋಗ್ಯಪೀಡಿತರನ್ನು ಚಿಕಿತ್ಸೆಗೆ ಒಳಪಡಿಸಬೇಕು. ಪರ್ಯಾಯ ದಾರಿಗಳಲ್ಲಿ ಸುತ್ತುಬಳಸಬೇಕಿದೆ. ಅಲ್ಲಿಯೂ ಹೊಳೆಗಳು ಇರುವುದು ಸಮಸ್ಯೆ ಆಗಿದೆ.

Advertisement

ತಲೆ ಹೊರೆಯೇ ಗತಿ
ನಾಗರಿಕರಿಗೆ ಪಡಿತರ, ಗೃಹಬಳಕೆ ವಸ್ತುಗಳಿಗೆ, ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿ ಸಾಗಾಣಿಕೆಗೆ ತುಂಬಿ ಹರಿಯುವ ಹೊಳೆ ಅಡ್ಡಿಯಾಗುತ್ತದೆ. ಸೇತುವೆ ಇಲ್ಲದೆ ವಾಹನ ವ್ಯವಸ್ಥೆ ಕೈ ಕೊಡುವುದರಿಂದ ತಲೆ ಹೊರೆಯಲ್ಲಿ ಸಾಮಗ್ರಿಗಳನ್ನು ಹೊತ್ತು ಮಾರಾಟ ಮತ್ತು ಖರೀದಿ ಮಾಡಬೇಕಿದೆ.

ಮಕ್ಕಳ ಶಿಕ್ಷಣಕ್ಕೆ ಕತ್ತರಿ: ಭೀತಿ
ಮಳೆಗಾಲದಲ್ಲಿ ಈ ತಾತ್ಕಾಲಿಕ ಸೇತುವೆ ಏನಾದರೂ ಕೈಕೊಟ್ಟರೆ ತ್ರಿಶಂಕು ಸ್ಥಿತಿ. ಮಕ್ಕಳಿಗೆ ಶಾಲೆಗೆ ತೆರಳಲು ಕಷ್ಟವಾಗಿ ರಜೆ ಹಾಕಿ ಮನೆಯಲ್ಲಿ ಕುಳಿತುಕೊಳ್ಳಬೇಕು. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಮಕ್ಕಳ ಮೂಲ ಶಿಕ್ಷಣಕ್ಕೆ ಕತ್ತರಿ ಬೀಳುತ್ತಿದೆ.

ಜೀವ ಉಳಿಸಲು ಸೆಣಸಾಟ
ಮಕ್ಕಳಿಗೆ ಹೊಳೆ ದಾಟುವುದು ಹೇಗಪ್ಪ ಅನ್ನುವ ಚಿಂತೆ. ಪೋಷಕರ ಎದೆಯಲ್ಲಿ ಮಕ್ಕಳ ಪ್ರಾಣದ ಕುರಿತು ಭೀತಿ. ಅಡಿಗಡಿಗೆ ಗಡಗಡ ಅಲುಗುವ ಮರದ ತೂಗು ಸೇತುವೆಯೂ ಈಗ ಇಲ್ಲದ ಮೇಲೆ ಇನ್ನು ಪ್ರಾಣ ಉಳಿಸಿಕೊಳ್ಳೊದು ಹೇಗೆ ಅನ್ನುವ ಆತಂಕ ಇವರನ್ನು ಕಾಡುತ್ತಿದೆ.

ಆತಂಕವಾಗಿದೆ
ಶಾಲೆಗಳು ಆರಂಭವಾಗುವ ಹೊತ್ತಲ್ಲಿ ಇಲ್ಲಿ ಸರಿಯಾದ ಸೇತುವೆ ವ್ಯವಸ್ಥೆ ಇಲ್ಲದೆ ಪೋಷಕರಾದ ನಾವು ಆತಂಕಕ್ಕೆ ಒಳಗಾಗಿದ್ದೇವೆ. ಸಂಬಂದಿಸಿದ ಜನಪ್ರತಿನಿಧಿಗಳು ಈ ಕುರಿತು ಗಮನಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
– ವೆಂಕಪ್ಪಮಲೆಕುಡಿಯ, ಸಂತ್ರಸ್ತರು

— ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next