Advertisement

ವಲಸೆ ಎಬ್ಬಿಸಿದ ಜನರ ಬವಣೆ ಪರಿಹರಿಸುವ ಯತ್ನ ನಡೆಸಿಲ್ಲ: ಬೇಸರ

05:34 PM Dec 21, 2017 | Girisha |

ಶಿವಮೊಗ್ಗ: ಶರಾವತಿ ಪ್ರದೇಶದಲ್ಲಿ ವಲಸೆ ಎಬ್ಬಿಸಿದ ಜನರ ಬವಣೆ ಪರಿಹರಿಸಲು ಇಂದಿಗೂ ಪ್ರಯತ್ನವಾಗಿಲ್ಲದಿರುವುದು ದುರದೃಷ್ಟಕರ ಎಂದು ಸಾಹಿತಿ ನಾ.ಡಿಸೋಜಾ ಬೇಸರ ವ್ಯಕ್ತಪಡಿಸಿದರು.

Advertisement

ನಗರದ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಸಂಜೆ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು, ರಾಜಕಾರಣಿಗಳ ಸ್ವಾರ್ಥ ಭಾವನೆಯಿಂದ ಶರಾವತಿ ಪ್ರದೇಶದಲ್ಲಿನ ಜೀವನ ನಡೆಸುತ್ತಿರುವ ಜನರು ಹಕ್ಕು ಪತ್ರ ಇಲ್ಲದೇ ಉಳುಮೆ ಮಾಡಿಕೊಂಡು ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ವ್ಯವಸ್ಥಿತ ಸೇತುವೆ ಕಟ್ಟಲು ಸಾಧ್ಯವಾಗಿಲ್ಲ. ವಿದ್ಯುತ್‌ ಉತ್ಪಾದನೆಯಿಂದ ಕೋಟ್ಯಾಂತರ ರೂ. ಬರುತ್ತಿರುವಾಗ ಅದರಲ್ಲಿ ಒಂದಂಶ ಖರ್ಚು ಮಾಡಿದ್ದರೂ ಸೇತುವೆ
ನಿರ್ಮಿಸಬಹುದಿತ್ತು. ಆದರೆ ಯಾವ ಪ್ರಯತ್ನವೂ ಇಲ್ಲಿಯವರೆಗು ನಡೆದಿಲ್ಲ ಎಂದು ತಿಳಿಸಿದರು.

ಸಮ್ಮೇಳನ ಒಂದು ವರ್ಗದ ಜನರಿಗೆ ಆಸಕ್ತಿ ಹುಟ್ಟಿಸುತ್ತಿರಲಿಲ್ಲ. ಅಪಸ್ವರ ಕೇಳಿ ಬರುತ್ತಿತ್ತು. ಪರ್ಯಾಯವಾಗಿ ಸಮ್ಮೇಳನ ನಡೆಸಿರುವುದು ನೋಡುತ್ತೇವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಪಸ್ವರ ಮತ್ತು ಪರ್ಯಾಯಗಳಾಗುತ್ತಿಲ್ಲ. ಇದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು. ಸಾಹಿತ್ಯ ಜನರನ್ನು ಹತ್ತಿರಕ್ಕೆ ಕರೆತರುವ ಕೆಲಸ ಮಾಡುತ್ತದೆ. ಎಲ್ಲರನ್ನು ಕಟ್ಟಿ ಹಾಕುವ ಗುಣ ಸಾಹಿತ್ಯಕ್ಕಿದೆ. ಜಿಲ್ಲೆಯಲ್ಲಿ ನಡೆದಿರುವ 12ನೇ ಶಿವಮೊಗ್ಗ ಕನ್ನಡ ಸಾಹಿತ್ಯ ಸಮ್ಮೇಳನ ಬಹಳ ಯಶಸ್ವಿಯಾಗಿ ನಡೆದಿದೆ. 7 ಪುಸ್ತಕಗಳ ಬಿಡುಗಡೆ ಜತೆಯಲ್ಲಿ ಜನರಿಗೆ ತಲುಪಿಸಲು ಒಂದು ಗೋಷ್ಠಿಯಲ್ಲಿ ಅವಲೋಕನ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಹೊಸ ಬೆಳವಣಿಗೆ ಎಂದರು. ಸಮ್ಮೇಳನಾಧ್ಯಕ್ಷ ಶ್ರೀಕಂಠ ಕೂಡಿಗೆ ಮಾತನಾಡಿ, ಸಾಹಿತ್ಯ ಸಮ್ಮೇಳನಗಳಲ್ಲಿ ಪುನಾರವರ್ತಿತ ತಪ್ಪುಗಳು ಪದೇ ಪದೇ ಆಗುತ್ತಿರುತ್ತವೆ. ಮುಂದಿನ ಬಾರಿ ಸಮ್ಮೇಳನ ನಡೆಸುವಾಗ ಹಿಂದಿನ ಸಮ್ಮೇಳನಗಳ  ವಿಮರ್ಶೆ ಹಾಗೂ ವಿಶ್ಲೇಷಣೆಗೆ ಒಳಪಡಿಸುವ ಮೂಲಕ ಬದಲಾಯಿಸಿಕೊಳ್ಳಬೇಕು. ಪ್ರಸ್ತುತ ಸಮ್ಮೇಳನ ಉತ್ತಮವಾಗಿ ನಡೆದಿದೆ ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಬಿ.ಶಂಕರಪ್ಪ, ಎಂ.ಎನ್‌. ಸುಂದರ್‌ರಾಜ್‌, ಡಾ. ಮಲ್ಲೇಶ ಹುಲ್ಲುಮನಿ, ಮಲ್ಲಿಕಾರ್ಜುನ ಸಂಪತ್‌ಕುಮಾರ್‌, ಆಡಿನಸರ
ಸತೀಶ್‌, ರುದ್ರಮುನಿ ಸಜ್ಜನ್‌, ಚಂದ್ರಕಲಾ ಮತ್ತಿತರರು ಉಪಸ್ಥಿತರಿದ್ದರು.

ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯ :
 ಕನ್ನಡ ಮಾಧ್ಯಮಗಳಲ್ಲಿ ಎಸ್‌ಎಸ್‌ಎಲ್‌ಸಿವರೆಗೆ ಅಧ್ಯಯನ ನಡೆಸಿದವರಿಗೆ ಸರ್ಕಾರಿ ಕೆಲಸಗಳಲ್ಲಿ ಶೇ.  30 ಮೀಸಲಾತಿ ನೀಡಬೇಕು.  ಆರ್‌ಟಿಇ ಅನುಕೂಲತೆ ಖಾಸಗಿ ಶಾಲೆಗೆ ಹೋಗಬಾರದು. ಸರ್ಕಾರಿ ಶಾಲೆಗಳಿಗೆ ಸೇರಿಸುವಂತೆ ವಾತಾವರಣ ನಿರ್ಮಿಸಬೇಕು. ಆರ್‌ಟಿಇಗೆ ವ್ಯಯಿಸುವ ಅನುದಾನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಬೇಕು.  ಕೃಷಿ, ಇಂಜಿನಿಯರಿಂಗ್‌ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಪಿಎಚ್‌ಡಿ ಸಂಶೋಧನಾ ಪ್ರಬಂಧವನ್ನು ಕನ್ನಡದಲ್ಲಿಯೇ ಮಂಡಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next