Advertisement

ಬದುಕಿನಲ್ಲಿ ಅಮೃತವಿದೆ; ಸವಿದರೆ ಚಿರಂಜೀವಿಗಳಾಗುತ್ತೇವೆ!

01:25 AM Nov 26, 2020 | mahesh |

ಒಬ್ಬ ಕುದುರೆ ವ್ಯಾಪಾರದವನಿದ್ದ. ಅವನಿಗೆ ಕುದುರೆಗಳನ್ನು ಮಾರುವುದು ಬರೀ ಬದುಕಲ್ಲ; ಹವ್ಯಾಸವೂ ಸಹ. ಯಾವು ದ್ಯಾವುದೋ ಊರುಗಳಿಂದ ಒಂದಿಷ್ಟು ಕುದುರೆಗಳನ್ನು ತರುವುದು, ಅದನ್ನು ರೇಸಿನಲ್ಲಿ ಗೆಲ್ಲುವ ಕುದುರೆಗಳನ್ನಾಗಿ ರೂಪಿಸುವುದು, ಯಾವ ಕುದುರೆಗಳು ಅವನ ನಿರೀಕ್ಷೆಗೆ ತಕ್ಕಂತೆ ನಡೆದು ಕೊಳ್ಳುವುದಿಲ್ಲವೋ, ಅವುಗಳನ್ನು ಹೊರಗೆ ಹಾಕುವುದು, ಒಳ್ಳೆಯ ದೆಂದು ಅಂದು ಕೊಂಡ ಕುದುರೆಗಳನ್ನು ಮಾರು ಕಟ್ಟೆ ದರ ಅನುಸರಿಸಿ ಮಾರುವುದು- ಬಂದಷ್ಟು ಲಾಭವನ್ನು ಸಂಗ್ರಹಿಸಿಟ್ಟುಕೊಂಡು, ನಾನಿಂತಿಷ್ಟು ಹಣದ ಒಡೆಯ ಎಂದು ಕೊಂಡು ಸಂಭ್ರಮಿಸುವುದು. ಇಷ್ಟು ಬಿಟ್ಟರೆ ಮನೆ, ಕುಟುಂಬ ಯಾವುದೂ ಖುಷಿ ತರುವ ಸಂಗತಿಯಾಗಿರಲಿಲ್ಲ ಅವನಿಗೆ.

Advertisement

ಅದೇ ಊರಿನಲ್ಲಿ ಮತ್ತೂಬ್ಬನಿದ್ದ. ಅವನ ಲೆಕ್ಕಾಚಾರವೇ ಬೇರೆ. ಇವನೂ ಕುದುರೆ ವ್ಯಾಪಾರದವನೇ. ಮೊದಲಿನವನು ಹೀಗೆ ಬೇಡವೆಂದು ತಿರಸ್ಕರಿಸುವ ಕುದುರೆಗಳನ್ನು ತಂದು, ಕೆಲವೊಮ್ಮೆ ಒಂದಿಷ್ಟು ಕಾಸನ್ನು ಕೊಟ್ಟು ಖರೀದಿ ಮಾಡಿ, ಅವುಗಳನ್ನು ತರಬೇತು ಮಾಡಿ ಇತರ ಕೆಲಸಗಳಿಗೆ ಬಳಸಿ ಬದುಕು ಕೊಡುತ್ತಿದ್ದ. ಕೆಲವರು ತಮ್ಮ ಅಗತ್ಯಗಳಿಗ ನುಸಾರ ಇವ ನಲ್ಲಿಗೆ ಕುದುರೆ ಕೇಳಿಕೊಂಡು ಬರುತ್ತಿದ್ದರು. ಇವನೂ ತಾನು ಕೊಟ್ಟ ಬೆಲೆ ಹಾಗೂ ಇದುವರೆಗೆ ಮಾಡಿರಬ ಹುದಾದ ಅಂದಾಜು ವೆಚ್ಚ ಹೇಳಿ, ಅದಕ್ಕಿಂತ ಹತ್ತು ರೂ. ಜಾಸ್ತಿ ದರಕ್ಕೆ ಮಾರುತ್ತಿದ್ದ. ಹಾಗೆ ನೋಡುವುದಾದರೆ ಇವನ ಕುದುರೆಗಳೇ ಹೆಚ್ಚು ಮಾರಾಟವಾಗುತ್ತಿದ್ದವು. ಆದರೆ ಲಾಭ ಕಡಿಮೆ.

ದಿನೇದಿನೆ ಇಬ್ಬರ ಜನಪ್ರಿಯತೆಯೂ ಹೆಚ್ಚ ತೊಡಗಿತು. ಮೊದಲಿನವನ ಮನೆ ಎದುರು ಬರೀ ಕಾರುಗಳೇ ನಿಲ್ಲುತ್ತಿದ್ದವು. ಎರಡನೆ ಯವನ‌ ಮನೆಯಲ್ಲಿ ಯಾವಾಗಲೂ ಜನ ಜಂಗುಳಿ. ವಾಸ್ತವದಲ್ಲಿ ಎರಡನೆ ಯವನ‌ ಜನಪ್ರಿಯತೆಯೇ ಕೊಂಚ ಹೆಚ್ಚಾಗಿತ್ತು.

ಒಮ್ಮೆ ಇಬ್ಬರೂ ಪರಸ್ಪರ ಭೇಟಿಯಾದರು. ಕುಶಲೋಪರಿ ಮುಗಿಯಿತು. ಆ ಬಳಿಕ ಮೊದಲಿನವನು, ತನ್ನ ಮನೆಗೆ ಬರುವವರ ಬಗ್ಗೆ, ಅವರು ಖರೀದಿಸಿದ ಕುದುರೆಗಳ ಬಗ್ಗೆ, ಹಣದ ಬಿಕರಿಯ ಕುರಿತೆಲ್ಲ ವಿವರಿಸಿದ. ಇದನ್ನು ಕೇಳಿದ ಮತ್ತೂಬ್ಬನಲ್ಲಿ ಹೇಳುವಂಥದ್ದೇನೂ ಇರಲಿಲ್ಲ. ಹಾಗಾಗಿ ತನ್ನ ಕುದುರೆಗಳ ವೈಶಿಷ್ಟéದ ಕುರಿತು ಗ್ರಾಹಕರಲ್ಲಿ ವಿವರಿಸುವುದನ್ನೆಲ್ಲ ಹೇಳಿದ. ಇದರ ಹೆಸರು ಇಂಥದ್ದು, ಇದಕ್ಕೆ ಇಂಥ ಆಹಾರವೇ ಇಷ್ಟ, ಇದನ್ನು ಹೀಗೆಯೇ ನೋಡಿಕೊಳ್ಳಬೇಕು ಎಂದು ಹೇಳುವುದನ್ನೆಲ್ಲ ಹೇಳಿದ. ಮೊದಲಿನವನಿಗೆ ಇವೆಲ್ಲ ವ್ಯರ್ಥ ಅನಿಸಿತು. ಆಗ ಸಲಹೆ ನೀಡುವಂತೆ, ನಾಳೆಯಿಂದ ನಾನು ಮಾಡಿದಂತೆ ಮಾಡು. ಬಂದವರಿಗೆ ಕುದುರೆಯನ್ನು ತೋರಿಸು. ಒಳ್ಳೆಯದನ್ನು ಹುಡುಕಿ ಕೊಂಡು ಹೋಗಲಿ, ಅದು ಅವರವರ ಅದೃಷ್ಟ ಎಂದ. ಅದಕ್ಕೆ ಎರಡನೆಯವನು ಮೃದು ಸ್ವರದಲ್ಲಿ, ಅಣ್ಣಾ, ಅದು ನಿನಗೆ ವ್ಯಾಪಾರ. ಇದು ನನಗೆ ಬದುಕು ಎಂದಷ್ಟೇ ಹೇಳಿ ಹೊರಟು ಹೋದ.

ನಾವು ಹಲವು ಬಾರಿ ಬದುಕಿನಲ್ಲಿ ವ್ಯಾಪಾರಿ ಗಳಂತಾಗಿ ಬಿಡುತ್ತೇವೆ; ಮಧ್ಯವರ್ತಿಗಳಂತೆ. ಹಾಗೆ ತಂದು ಹೀಗೆ ದಾಟಿಸಿಬಿಡುತ್ತೇವೆ. ಯಾವುದನ್ನೂ ಅನುಭವಿಸುವುದಿಲ್ಲ. ಆಗ ಸಂತಸ ಎನ್ನುವುದು ಸಿಗುವುದಾದರೂ ಹೇಗೆ? ಮೊದಲಿನ ಕುದುರೆ ವ್ಯಾಪಾರಿ ಜೀವಿಸುತ್ತಿದ್ದ; ಬದುಕುತ್ತಿರಲಿಲ್ಲ. ಎರಡನೆ ಯವ ಜೀವಿಸುತ್ತಲೂ ಇದ್ದ; ಬದುಕುತ್ತಲೂ ಇದ್ದ. ನಮ್ಮಲ್ಲಿ ಎಷ್ಟಿದೆ ಎಂಬುದಕ್ಕಿಂತಲೂ ಇರುವುದನ್ನು ಎಷ್ಟು ಅನುಭವಿಸುತ್ತಿದ್ದೇವೆ ಎನ್ನುವುದೇ ಮುಖ್ಯ. ಇಲ್ಲವಾದರೆ ನಮ್ಮ ಬದುಕಿಗೂ, ಯಂತ್ರದ ತಿರುಗುವಿಕೆಗೂ ಕೊಂಚವೂ ವ್ಯತ್ಯಾಸವಿರದು.

Advertisement

ಬದುಕಿನಲ್ಲಿ ಅಮೃತವಿದೆ; ಸವಿದರೆ ಚಿರಂಜೀವಿಗಳಾಗುತ್ತೇವೆ!

Advertisement

Udayavani is now on Telegram. Click here to join our channel and stay updated with the latest news.

Next