Advertisement
ನಗರದ ಡಾ| ಟಿ.ಎಂ.ಎ. ಪೈ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಶುಕ್ರವಾರ ಜರಗಿದ ಮಂಗಳೂರಿನ ಮಣಿಪಾಲ ದಂತ ವೈದ್ಯಕೀಯ ಕಾಲೇಜಿನ (ಎಂಕೋಡ್ಸ್) ವಾರ್ಷಿಕ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಕ್ಷೇತ್ರದಲ್ಲೂ ಉನ್ನತ ಸಾಧನೆಗಳಿಗೆ ಅವಕಾಶಗಳಿವೆ. ಅದೇ ರೀತಿ ದಂತ ವೈದ್ಯಕೀಯ ಕ್ಷೇತ್ರದಲ್ಲೂ ಕೂಡ ಇವೆ. ಪ್ರತಿ ರೋಗಿಗೂ ನೀಡುವ ಚಿಕಿತ್ಸೆ ಹೊಸ ಹೊಸ ವಿಚಾರಗಳನ್ನು ತಿಳಿಸಿಕೊಡುತ್ತದೆ ಎಂದರು. ಜ್ಞಾನಕ್ಕೆ ಮಿತಿ ಎಂಬುದಿಲ್ಲ. ಪ್ರಸ್ತುತ ಕಾಲಘಟ್ಟದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಆವಿಷ್ಕಾರಗಳು, ಸಂಶೋಧನೆಗಳು ತ್ವರಿತಗತಿಯಲ್ಲಿ ಆಗುತ್ತಿವೆ. ಆದುದರಿಂದ ಜ್ಞಾನದ ಉನ್ನತೀಕರಣ ಅತೀ ಅಗತ್ಯ. ಈ ನಿಟ್ಟಿನಲ್ಲೂ ದಂತ ವೈದ್ಯಕೀಯ ಪದವೀಧರರು ಗಮನ ಹರಿಸಬೇಕು ಎಂದವರು ಹೇಳಿದರು.
ಮಣಿಪಾಲ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿವೆ. ಮಣಿಪಾಲ ದಂತ ವೈದ್ಯಕೀಯ ಕಾಲೇಜುಗಳು ಪ್ರತಿಷ್ಠಿತ ದಂತ ವೈದ್ಯಕೀಯ ಸಂಸ್ಥೆಗಳಾಗಿ ಮನ್ನಣೆಗೆ ಪಾತ್ರವಾಗಿವೆ. ಅತ್ಯಾಧುನಿಕ ಸೌಲಭ್ಯಗಳು, ಉತ್ತಮ ಬೋಧಕ ವರ್ಗ ಇಲ್ಲಿದೆ ಎಂದು ಪ್ರೊ| ಕ್ರಿಸ್ ಲೂಕಾ ಶ್ಲಾಘಿಸಿದರು.