ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ತಲೆನೋವಾಗಿರುವ ಎಸ್ಸಿ ಎಸ್ಟಿ ನೌಕರರ ಬಡ್ತಿ ಮೀಸಲಾತಿ ಪ್ರಕರಣ ಹಾಗೂ ಕೆಪಿಎಸ್‌ಸಿ ನೇಮಕಾತಿಯಲ್ಲಿ ಎಸ್ಸಿ ಎಸ್ಟಿ ಮತ್ತು ಇತರೆ ಹಿಂದುಳಿದ ವರ್ಗದವರಿಗೆ ಸಾಮಾನ್ಯ ವರ್ಗದ ಕೋಟಾದಡಿ ಅವಕಾಶ ನಿರಾಕರಿಸುವ ತೀರ್ಮಾನದ ಕುರಿತು ಸೋಮವಾರದ ಸಂಪುಟ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.
ಮುಂಬಡ್ತಿ ಪ್ರಕರಣದ ಕಿಡಿ ಮೈತ್ರಿ ಸರಕಾರದ ಉಭಯ ಪಕ್ಷಗಳ ನಡುವೆ ಹಬೆಯಾಡುತ್ತಿರುವ ಬೆನ್ನಲ್ಲೇ ಈಗ ಕೆಪಿಎಸ್‌ಸಿ ಪ್ರಕರಣ ಮತ್ತೂಂದು ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದೆ. ಮುಂಬಡ್ತಿ ವಿಚಾರದಲ್ಲಿ ಸರಕಾರದ ನಿಲುವಿನ ವಿರುದ್ಧ ಕಿಡಿಕಾರಿದ್ದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಈಗ ಮತ್ತೂಮ್ಮೆ ಕೆಪಿಎಸ್‌ಸಿಯಲ್ಲಿ ಪರಿಶಿಷ್ಟರಿಗೆ ಸಾಮಾನ್ಯವರ್ಗದ ಕೋಟಾದಡಿ ಅವ ಕಾಶ ನಿರಾಕರಣೆ ಬಗ್ಗೆ ಕೆಪಿಎಸ್ಸಿ ಸುತ್ತೋಲೆ ವಿರುದ್ಧ ಸಿಡಿದೆದ್ದಿದ್ದಾರೆ. ಈ ಸುತ್ತೋಲೆ ಸಮ್ಮಿಶ್ರ ಸರ್ಕಾರದಲ್ಲಿ ಎರಡೂ ಪಕ್ಷಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಕೆಪಿಎಸ್‌ಸಿಯ ಈ ತೀರ್ಮಾನಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಹಿಂದುಳಿದ ಹಾಗೂ ದಲಿತ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಕೆಪಿಎಸ್ಸಿಯ ವಿವಾದಾತ್ಮಕ ಸುತ್ತೋಲೆ ಹಾಗೂ ಬಡ್ತಿ ಮೀಸಲು ಕಾಯ್ದೆ ಜಾರಿ ಕುರಿತು ಸೋಮವಾರ ನಡೆಯುವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಬಡ್ತಿ ಮೀಸಲಾತಿ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಅಂತಿಮ ವಿಚಾರಣೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ಆದೇಶಕ್ಕೂ ಮೊದಲೇ ರಾಜ್ಯ ಸರ್ಕಾರದ ಕಾಯ್ದೆ ಜಾರಿಗೊಳಿಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಭಾನುವಾರ ಹೇಳಿದ್ದಾರೆ.
ಸಂವಿಧಾನ ಪ್ರಕಾರ ನಡೆದುಕೊಳ್ಳಲಿ: ಮಲ್ಲಿಕಾರ್ಜುನ ಖರ್ಗೆ
ಕೆಪಿಎಸ್‌ಸಿ ಮೀಸಲಾತಿ ಕುರಿತು ಹೊರಡಿಸಿರುವ ಆದೇಶ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಸಂವಿಧಾನ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ರಾಜ್ಯ ಸರ್ಕಾರ ಸಂವಿಧಾನಕ್ಕೆ ವಿರುದ್ಧವಾಗಿ ಆದೇಶ ಹೊರಡಿಸಿ ನೇಮಕಾತಿ ತಡೆದರೆ ಸಮಸ್ಯೆಯಾಗುತ್ತದೆ. ಮೆರಿಟ್ ಆಧಾರದಲ್ಲಿ ಹಿಂದುಳಿದವರು ಹಾಗೂ ದಲಿತರೂ ನೇಮಕವಾಗಲು ಅವಕಾಶ ಕಲ್ಪಿಸಬೇಕು. ಹೈದರಾಬಾದ್ ಕರ್ನಾಟಕ ಭಾಗದಲ್ಲಿ 4 ರಿಂದ 5 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ರಾಜ್ಯದ ಇತರ ಭಾಗಗಳಲ್ಲಿ ಲಕ್ಷಾಂತರ ಹುದ್ದೆಗಳ ಖಾಲಿ ಇವೆ. ಅವುಗಳನ್ನು ಸಂವಿಧಾನ ಬದ್ದ ಮೀಸಲಾತಿ ಪ್ರಕಾರ ಭರ್ತಿ ಮಾಡಬೇಕು. ಸಿಎಂ ಈ ಬಗ್ಗೆ ಗಮನ ಹರಿಸಬೇಕು. ತಕ್ಷಣ ಇದನ್ನು ಸರಿಪಡಿಸದಿದ್ದರೆ ಮುಂದೆ ದೊಡ್ಡ ಸಮಸ್ಯೆಯಾಗಲಿದೆ ಎಂದಿದ್ದಾರೆ. ಇದೇ ರೀತಿ ಬಡ್ತಿ ಮೀಸಲಾತಿ ವಿಚಾರದಲ್ಲಿಯೂ ರಾಜ್ಯ ಸರ್ಕಾರ ಬದ್ದತೆ ಪ್ರದರ್ಶನ ಮಾಡಬೇಕು ಎಂದು ಹೇಳಿದ್ದಾರೆ.