ಬೆಂಗಳೂರು: ಏರೋಸ್ಪೇಸ್ ಪರಿಕರಗಳ ಉತ್ಪಾದನೆಗಾಗಿ ಕೇಂದ್ರ ರಕ್ಷಣಾ ಇಲಾಖೆಯ ಅಂಗ ಸಂಸ್ಥೆ ಬೆಮೆಲ್ ಮತ್ತು ಯುಎಸ್ ಮೂಲದ ಲಾಕ್‌ಹೀಡ್ ಮಾರ್ಟಿನ್ ಏರೋನಾಟಿಕ್ಸ್ ಸಂಸ್ಥೆಗಳು ಗುರುವಾರ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಒಪ್ಪಂದದ ಪ್ರಮಾಣ ಪತ್ರಕ್ಕೆ ಸಹಿ ಹಾಕಿವೆ.
ಈ ಸಂದರ್ಭದಲ್ಲಿ ಬೆಮೆಲ್ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಕುಮಾರ್ ಹಾಗೂ ಲಾಕ್‌ಹೀಡ್ ಸಂಸ್ಥೆಯ ವಾಣಿಜ್ಯಾಭಿವೃದ್ಧಿ ವಿಭಾಗದ ಉಪಾಧ್ಯಕ್ಷ ಡಾ.ವಿವೇಕ್ ಲಾಲ್ ಒಪ್ಪಂದಕ್ಕೆ ಸಹಿ ಹಾಕಿದರು. ಬೆಮೆಲ್ ಈಗಾಲೇ ತೇಜಸ್ ಯೋಜನೆಗೆ ವಿವಿಧ ಪರಿಕರ ಒದಗಿಸುತ್ತಿದೆ. ಹಾಗೇ ಏರ್‌ಕ್ರಾಪ್ಟ್ ಪರಿಕರ ಉತ್ಪಾದನೆಯ ಹಲವು ಟೆಂಡರ್ ಪಡೆದು ಸೇವೆ ಸಲ್ಲಿಸುತ್ತಿದೆ.
ಎಚ್‌ಎಎಲ್ ಒಡಂಬಡಿಕೆ: ಸೂಪರ್‌ಸಾನಿಕ್ ವೇಗದ ಸ್ವದೇಶಿ ನಿರ್ಮಿತ ತೇಜಸ್ ಎಲ್‌ಸಿಎ-ಎಂಕೆ-1 ಏರ್‌ಕ್ರಾಫ್ಟ್ನ್ನು ಎಚ್‌ಎಎಲ್ ಸಂಸ್ಥೆಯು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸುತ್ತಿದೆ. ಸುಧಾರಿತ ತೇಜಸ್ ಎಂಕೆ-1ಎ ಹೆಸರಿನ 73 ಯುದ್ಧ ವಿಮಾನಗಳ ಖರೀದಿಗೆ ಭಾರತೀಯ ವಾಯುಸೇನೆ, ಎಚ್‌ಎಎಲ್ ಜತೆ ಒಡಂಬಡಿಕೆ ಮಾಡಿಕೊಂಡಿದೆ.
ಎಂಕೆ-1ನ 40 ವಿಮಾನಗಳ ಖರೀದಿ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ. ಇದಲ್ಲದೆ ಎಂಕೆ-1 ಎ 73 ವಿಮಾನಗಳಿಗೆ ಭಾರತೀಯ ವಾಯುಸೇನೆ ಈಗಾಗಲೇ ಆರ್‌ಎಫ್ಪಿ (ರಿಕ್ವೆಸ್ಟ್ ಫಾರ್ ಪ್ರಪೋಸಲ್) ನೀಡಿದೆ.
ಟೀಮಿಂಗ್ ಒಪ್ಪಂದ: ರಕ್ಷಣಾ ಇಲಾಖೆಯ ಹೆಲಿಕಾಪ್ಟರ್‌ಗಳಿಗೆ ಸ್ಯಾಟಲೈಟ್ ಕಮ್ಯೂನಿಕೇಷನ್ ಸಲ್ಯೂಶನ್‌ಗೆ ಬೇಕಾದ ವಿನ್ಯಾಸ, ಅಭಿವೃದ್ಧಿ, ಪೂರೈಕೆ, ಅನುಷ್ಠಾನ ಮತ್ತು ಜೋಡಣೆಯನ್ನು ಒಂದು ತಂಡವಾಗಿ ಒದಗಿಸಲು ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆ(ಬಿಇಎಲ್) ಹಾಗೂ ಹಗೇಸ್ ಇಂಡಿಯಾ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ. ಬಿಇಎಲ್ ಮಾರುಕಟ್ಟೆ ವಿಭಾಗದ ನಿರ್ದೇಶಕರಾದ ಆನಂದಿ ರಾಮಲಿಂಗಂ, ಹಗೇಸ್‌ಇಂಡಿಯಾದ ಅಧ್ಯಕ್ಷ ಪತ್ರೋ ಬಾನರ್ಜಿ ಒಪ್ಪಂದಕ್ಕೆ ಸಹಿ ಹಾಕಿದರು.
ರಾಕೆಟ್ ಲಾಂಚಾರ್‌ಗೆ ಒಪ್ಪಂದ: ಭಾರತೀಯ ಸಶಾಸ್ತ್ರ ಪಡೆಯನ್ನು ಇನ್ನಷ್ಟು ಸದೃಢಗೊಳಿಸಲು ಹಿಂದುಸ್ತಾನ್ ಏರೋನೆಟಕ್ಸ್ ಸಂಸ್ಥೆಯು ಥಾಲಾಸ್ ಸಂಸ್ಥೆ ಜತೆಗೆ 2.75 ಇಂಚು ರಾಕೆಟ್ ಲಾಂಚರ್‌ಗಳಿಗಾಗಿ ಒಪ್ಪಂದ ಮಾಡಿಕೊಂಡಿದೆ.
ರಕ್ಷಣಾ ಪಡೆಯಲ್ಲಿ ಬಳಕೆಯಾಗುತ್ತಿರುವ ಲಘು ಮತ್ತು ಯುದ್ಧ ವಿಮಾನ, ಹೆಲಿಕಾಪ್ಟರ್‌ಗಳಿಗೆ 2.75 ಇಂಚಿನ 135 ರಾಕೆಟ್ ಲಾಂಚರ್ ಉತ್ಪಾದಿಸಿ ನೀಡುವಂತೆ ಥಾಲಾಸ್ ಸಂಸ್ಥೆಯ ಜತೆಗೆ ಒಪ್ಪಂದಕ್ಕೆ ಎಚ್‌ಎಎಲ್ ಸಹಿ ಹಾಕಿದೆ.
ಇಷ್ಟು ಮಾತ್ರವಲ್ಲದೇ ಎಚ್‌ಎಎಲ್, ಬೆಮೆಲ್, ಡಿಆರ್‌ಡಿಒ, ಇಸ್ರೊ, ಬಿಇಎಲ್ ಹೀಗೆ ಕೇಂದ್ರೋದ್ಯಮದ ಹಲವು ಸಂಸ್ಥೆಗಳು ವಿದೇಶಿ ಮತ್ತು ಸ್ವದೇಶಿ ವಿಶ್ವಾಸಾರ್ಹ ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಂಡಿವೆ.