Advertisement
ಜಾರಿಗೆ ಹಣ್ಣು (Indian gamboge fruit) ಎಂದಾಕ್ಷಣ ಒಂದು ವಯೋ ಮಾನದವರಿಗೆ ಬಾಯಲ್ಲಿ ನೀರೂರುವುದು ಸಹಜ. ಆರಂಭದಲ್ಲಿ ಹುಳಿಯಾಗಿದ್ದು, ಹೆಚ್ಚು ಹೆಚ್ಚು ಹಣ್ಣಾಗುತ್ತಲೇ ಹುಳಿಯಿಂದ ಸಿಹಿಗೆ ಜಾರುವ ಹಣ್ಣು ಇದು. ನವೆಂಬರ್ ತಿಂಗಳಿನಿಂದ ಮಾರ್ಚ್‌ನವರೆಗೆ ಈ ಹಣ್ಣು ಲಭಿ ಸು ತ್ತದೆ. ಮುಂಡ್ಕೂರು, ಪಡುಬಿದಿರೆ, ಕಟೀಲು, ಕಿನ್ನಿಗೋಳಿ, ಬಜಪೆ ಪ್ರದೇಶದಲ್ಲಿ ಈ ಹಣ್ಣು ವ್ಯಾಪಕವಾಗಿ ಬೆಳೆಯುತ್ತಿತ್ತು. ಅದು ಬೆಳೆಯುವ ಪ್ರದೇಶಗಳು ಜಾರಿಗೆ ಕಟ್ಟೆ, ಜಾರಿಗೆದಡಿ, ಜಾರಿಗೆಬೈಲ್ ಮೊದಲಾದ ಹೆಸರುಗಳಿಂದ ಜನಪ್ರಿಯವೂ ಆಗಿವೆ.
30 ವರ್ಷಗಳ ಹಿಂದೆ ಜಾರಿಗೆ ಸಿಪ್ಪೆ ಸಂಗ್ರಹ ದೊಡ್ಡ ವ್ಯಾಪಾರವಾಗಿತ್ತು. ಕಿನ್ನಿಗೋಳಿ, ಬಜಪೆ ಭಾಗದಲ್ಲಿ ವ್ಯಾಪಾರಿಗಳು ಲಾರಿಗಟ್ಟಲೆ ಸಿಪ್ಪೆಯನ್ನು ಖರೀದಿಸಿ ಹೊರ ರಾಜ್ಯಗಳಿಗೆ ರವಾನೆ ಮಾಡುತ್ತಿದ್ದರು. ದೊಡ್ಡ ದೊಡ್ಡ ಲೋಡ್‌ಗಳೇ ಬೇರೆ ರಾಜ್ಯಕ್ಕೆ ಹೋಗುತ್ತಿತ್ತು. ಆಗೆಲ್ಲ ಕೆ.ಜಿ.ಗೆ 5 ರೂ. ಇತ್ತು ಎಂದು ಹಿರಿಯ ವ್ಯಾಪಾರಿಯೊಬ್ಬರು ಹೇಳುತ್ತಾರೆ. ಈಗಲೂ ಗುಜರಾತ್, ಮಹಾರಾಷ್ಟ್ರ ರಾಜ್ಯದಲ್ಲಿ ಈ ಸಿಪ್ಪೆಗೆ ಭಾರಿ ಬೇಡಿಕೆ ಇದೆ. ಅಲ್ಲಿಂದ ಊರಿಗೆ ಬಂದವರು ಹುಡುಕಿಕೊಂಡು ಬಂದು ಸಿಪ್ಪೆ ಒಯ್ಯುತ್ತಾರೆ. ಆದರೆ, ಈಗ ಅಷ್ಟು ಪ್ರಮಾಣದಲ್ಲಿ ಸಿಪ್ಪೆ ಸಿಗುವುದಿಲ್ಲ. ಈಗ ರೈತರಿಂದ ಖರೀದಿಸುವ ದರ ಕೆ.ಜಿಗೆ 180 ರೂ. ಇದ್ದು, 300 ರೂ.ಗೆ ಮಾರಾಟ ಮಾಡುತ್ತಾರೆ.
Related Articles
ಜಾರಿಗೆ ಹಣ್ಣಿನ ಸಿಪ್ಪೆ ತೆಗೆದು, ಹಣ್ಣನ್ನು ತಿನ್ನಲಾಗುತ್ತದೆ. ಸಿಪ್ಪೆಯನ್ನು ಸುಮಾರು 10ರಿಂದ 15 ದಿನಗಳ ಕಾಲ ಒಣಗಿಸಲಾಗುತ್ತದೆ. ಒಣಗಿದ ಜಾರಿಗೆ ಸಿಪ್ಪೆ (ಜಾರಿಗೆವೊಟ್ಟೆ )ಯನ್ನು ಕಬ್ಬಿಣದ ಡಬ್ಬದಲ್ಲಿ ಗಾಳಿ ತಾಗದ ಹಾಗೆ ಭದ್ರವಾಗಿ ಇಟ್ಟರೆ 2 ವರ್ಷತನಕ ಹಾಳಾಗುವುದಿಲ್ಲ.
Advertisement
ಜಾರಿಗೆ ಸಿಪ್ಪೆ ಯಾವುದಕ್ಕೆ ಬಳಕೆ?– ಜಾರಿಗೆ ಸಿಪ್ಪೆ ಹುಳಿ ಅಂಶ ಹೊಂದಿದ್ದು ಮೀನಿನ ಪದಾರ್ಥಕ್ಕೆ ಹೆಚ್ಚು ಹೊಂದಿಕೊಳ್ಳುತ್ತದೆ, ರುಚಿ ಹೆಚ್ಚಿಸುತ್ತದೆ.
– ಬಾಣಂತಿ ಸ್ತ್ರೀಯರಿಗೆ ಮಾಡಿಕೊಡುವ ಪಾಲದೆ ಎಂಬ ಪೌಷ್ಟಿಕ ಕಷಾಯಕ್ಕೆ ಇದನ್ನು ಬಳಸಲಾಗುತ್ತದೆ.
– ಜಾರಿಗೆ ಸಿಪ್ಪೆ ಆರೋಗ್ಯವರ್ಧಕ ಪೌಷ್ಟಿಕ ಆಹಾರವಾಗಿದ್ದು ಸ್ಥಳೀಯವಾಗಿಯೂ ಮನೆಗಳಲ್ಲಿ ಬಳಸುತ್ತಾರೆ.
– ಕುಡುಬಿ ಸಮಾಜದವರು ಹೆಚ್ಚಾಗಿ ಇದನ್ನು ಅಡುಗೆ ಮತ್ತು ಔಷಧಗಳಲ್ಲಿ ಬಳಸುವುದು ಕಂಡುಬಂದಿದೆ. -ಸುಬ್ರಾಯ ನಾಯಕ್ ಎಕ್ಕಾರು