Advertisement

576 ವಿದ್ಯಾರ್ಥಿಗಳಿಗೆ ಇಬ್ಬರೇ ಉಪನ್ಯಾಸಕರು

02:03 PM Jun 23, 2022 | Team Udayavani |

ಗುಳೇದಗುಡ್ಡ: ಪಟ್ಟಣದ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿಯು ವಿಭಾಗದಲ್ಲಿ ಸುಮಾರು 600 ವಿದ್ಯಾರ್ಥಿನಿಯರಿಗೆ ಕೇವಲ ಇಬ್ಬರೇ ಉಪನ್ಯಾಸಕರಿದ್ದು, ವಿದ್ಯಾರ್ಥಿಗಳ ಶಿಕ್ಷಣ ಅಯೋಮಯವಾದಂತಾಗಿದೆ.

Advertisement

7 ಕೊಠಡಿಗಳು: ಸದ್ಯ ಪಿಯು ವಿಭಾಗಕ್ಕೆ 7 ಕೊಠಡಿಗಳಷ್ಟೇ ಇದ್ದು, ಇದರಲ್ಲಿ 576 ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡುವಂತಾಗಿದೆ. ಅಲ್ಲದೇ ಪ್ರಯೋಗಾಲಯಕ್ಕೆ ಸಮರ್ಪಕ ಸೌಲಭ್ಯಗಳಿಲ್ಲ.

576 ವಿದ್ಯಾರ್ಥಿಗಳು: ಮಹಾವಿದ್ಯಾಲಯದಲ್ಲಿ ಪಿಯು ಕಲಾ, ವಾಣಿಜ್ಯ, ವಿಜ್ಞಾನ ವಿಭಾಗ ಸೇರಿದಂತೆ ಒಟ್ಟು ಮೂರು ವಿಭಾಗಗಳಿವೆ. ಇದರಲ್ಲಿ ಕಲಾ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸೇರಿ 346 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 119 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 111 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇದರಲ್ಲಿ ಮೂರು ವಿಭಾಗದ ಪ್ರಥಮ ಹಾಗೂ ದ್ವಿತೀಯ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 576 ಇದ್ದು, ಇನ್ನೂ ಪ್ರಥಮ ವರ್ಷಕ್ಕೆ ಪ್ರವೇಶಾತಿ ನಡೆಯುತ್ತಿದ್ದು, ಸಂಖ್ಯೆ ಇನ್ನೂ ಹೆಚ್ಚಾಗಲಿದೆ.

ಗುಳೇದಗುಡ್ಡ ಪಟ್ಟಣ ಸೇರಿದಂತೆ ಹಳದೂರ, ತೋಗುಣಶಿ, ಹಾನಾಪುರ ಕೆಲವಡಿ, ಪಾದನಕಟ್ಟಿ, ಇಂಜಿನವಾರಿ, ಬೂದನಗಡ, ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿನಿಯರಿಗೆ ಪಿಯು ಶಿಕ್ಷಣ ಪಡೆಯಲು ಸಾಕಷ್ಟು ಅನುಕೂಲವಾಗಿದೆ. ಪ್ರತಿವರ್ಷ ನೂರಾರು ವಿದ್ಯಾರ್ಥಿನಿಯರು ಇಲ್ಲಿಂದ ತೇರ್ಗೆಡೆಯಾಗಿ ಹೋಗುತ್ತಾರೆ.

ಇಬ್ಬರೇ ಉಪನ್ಯಾಸಕರು: 576 ವಿದ್ಯಾರ್ಥಿಗಳಿರುವ ಬಾಲಕಿಯರ ಮಹಾವಿದ್ಯಾಲಯದಲ್ಲಿ ಸದ್ಯ ರಸಾಯನ ಶಾಸ್ತ್ರ, ಭೌತಶಾಸ್ತ್ರದ ಇಬ್ಬರೇ ಉಪನ್ಯಾಸಕರಿದ್ದಾರೆ. ಅದರಲ್ಲಿ ಒಬ್ಬರು ಪ್ರಭಾರಿ ಪ್ರಾಚಾರ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ನಿತ್ಯವು ಮಕ್ಕಳಿಗೆ ಪಾಠ ಬೋಧನೆಯಾಗುತ್ತಿಲ್ಲ. ಕನ್ನಡ, ಇಂಗ್ಲಿಷ್‌, ಹಿಂದಿ, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ, ವಾಣೀಜ್ಯ ಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ ಇಷ್ಟು ವಿಷಯಗಳ ಮಹಾವಿದ್ಯಾಲಯಕ್ಕೆ ಒಟ್ಟು 11 ಉಪನ್ಯಾಸಕರ ಕೊರತೆ ಕಾಡುತ್ತಿದೆ. ನಾಲ್ವರು ಉಪನ್ಯಾಸಕರು ನಿಯೋಜನೆ ಮೇಲಿದ್ದಾರೆ.

Advertisement

ಅತಿಥಿ ಉಪನ್ಯಾಸಕರು ಇಲ್ಲ: ಮಹಾವಿದ್ಯಾಲಯದಲ್ಲಿ ಉಪನ್ಯಾಸಕರ ಜತೆ ಅತಿಥಿ ಉಪನ್ಯಾಸಕರೂ ಕೂಡಾ ಇಲ್ಲ. ಸರಕಾರ ಅತಿಥಿ ಉಪನ್ಯಾಸಕ ನೇಮಕಕ್ಕೆ ಆದೇಶ ನೀಡಿದರೆ ನೇಮಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಆ ಆದೇಶ ಬರದ ಕಾರಣ ಅದು ಸ್ಥಗಿತಗೊಂಡಿದೆ.

ಆತಂಕದಲ್ಲಿ ವಿದ್ಯಾರ್ಥಿನಿಯರು: ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಿಲ್ಲದ ಕಾರಣ ವಿದ್ಯಾರ್ಥಿನಿಯರಿಗೆ ಆತಂಕ ಹೆಚ್ಚಿದ್ದು, ಪಾಠ ಬೋಧನೆಯಾಗದೇ ಹೇಗೆ ಶಿಕ್ಷಣ ಪಡೆದುಕೊಳ್ಳಬೇಕು. ಪರೀಕ್ಷೆ ಎದುರಿಸುವುದು ಹೇಗೆ ಎಂಬ ಆತಂಕ ವಿದ್ಯಾರ್ಥಿನಿಯರಿಗೆ ಕಾಡುತ್ತಿದೆ.

ಇದೇ 2-3 ವರ್ಷಗಳಲ್ಲಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಎದುರಾಗಿದ್ದು, ಈ ಹಿಂದೆ ಮಹಾವಿದ್ಯಾಲಯದಲ್ಲಿ ಅಗತ್ಯ ಉಪನ್ಯಾಸಕರಿದ್ದರು. ನಿತ್ಯ ಪಾಠ ಬೋಧನೆ ಮಧ್ಯಾಹ್ನ 2ಗಂಟೆವರೆಗೂ ನಡೆಯುತ್ತಿತ್ತು. ಅಲ್ಲದೇ ಮಹಾವಿದ್ಯಾಲಯ ಪ್ರತಿ ವರ್ಷ ಉತ್ತಮ ಫಲಿತಾಂಶ ನೀಡುತ್ತ ಬಂದಿದೆ. ಸರಕಾರ ಈಗಲಾದರೂ ಎಚ್ಚೆತ್ತು ಅಗತ್ಯ ಉಪನ್ಯಾಸಕರನ್ನು ನೇಮಿಸಬೇಕು ಎಂಬುದು ಹಲವು ವಿದ್ಯಾರ್ಥಿನಿಯರ, ಪೋಷಕರ ಆಗ್ರಹವಾಗಿದೆ.

ನಾನು ಇಲ್ಲಿಗೆ ಬಂದು ಕೆಲವೇ ದಿನ ಆಗಿದೆ. ಸಿಇಟಿ ಪರೀಕ್ಷೆಯಲ್ಲಿ ಬ್ಯುಸಿಯಾಗಿದ್ದು, ನನಗೆ ಪೂರ್ಣ ಮಾಹಿತಿ ಇಲ್ಲ. ಕಾಲೇಜಿಗೆ ಭೇಟಿ ನೀಡಿ, ಉಪನ್ಯಾಸಕರ ಕೊರತೆ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮಕೈಗೊಳ್ಳುತ್ತೇನೆ.  –ಡಾ| ಕೃಷ್ಣಪ್ಪ ಪಿ., ಉಪ ನಿರ್ದೇಶಕರು, ಪ.ಪೂ. ಇಲಾಖೆ ಬಾಗಲಕೋಟೆ

ಮಹಾವಿದ್ಯಾಲಯದಲ್ಲಿ 576 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಸದ್ಯ ಇಬ್ಬರೇ ಉಪನ್ಯಾಸಕರಿದ್ದು, ನಮಗೆ ಇನ್ನೂ 11 ಉಪನ್ಯಾಸಕರ ಅವಶ್ಯವಿದ್ದು, ಉಪನ್ಯಾಸಕರನ್ನು ನೀಡಿದರೆ ಅನುಕೂಲವಾಗುತ್ತದೆ. ಮೇಲಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ನೀಡಿದ್ದೇವೆ. –ಮಹೇಶ ಜಕ್ಕಣ್ಣವರ, ಪ್ರಭಾರಿ ಪ್ರಾಚಾರ್ಯರು, ಬಾಲಕಿಯರ ಪ.ಪೂ ಕಾಲೇಜು

ಕೊರತೆ ನೀಗಿದರೆ ಇನ್ನೂ ಉತ್ತಮ ಫಲಿತಾಂಶ

ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರ ಕೊರತೆ, ಲ್ಯಾಬ್‌ನಲ್ಲಿ ಅವಶ್ಯಕಸೌಲಭ್ಯಗಳ ಸಮಸ್ಯೆ ನಡುವೆಯೂ ವಿಜ್ಞಾನ ವಿಭಾಗದಲ್ಲಿ ಶಿಲ್ಪಾ ಪೂಜಾರ 563 ಅಂಕ ಪಡೆದು (ಶೇ.95) ಫಲಿತಾಂಶ ಪಡೆದಿದ್ದಾಳೆ. ಕಾಲೇಜಿಗೆ ಉಪನ್ಯಾಸಕರನ್ನು ಒದಗಿಸಿದರೇ ಇನ್ನೂ ಅನೇಕ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ.

„ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next