Advertisement

ಸರಕಾರಿ ಪಿಯು ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರೇ ಇಲ್ಲ

12:54 AM Dec 15, 2022 | Team Udayavani |

ಕುಂದಾಪುರ: ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್‌ಗೇಮ್ಸ್‌ನಂತಹ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಭಾರತದ ಹೆಚ್ಚೆಚ್ಚು ಕ್ರೀಡಾಳುಗಳು ಭಾಗವಹಿಸಿ, ಪದಕ ವಿಜೇತರಾಗಬೇಕು ಎನ್ನುವ ಅಭಿ ಲಾಷೆಯಿಂದ ಪ್ರಧಾನಿ ಮೋದಿ ಅವರು ಖೇಲೋ ಇಂಡಿಯಾ, ಫಿಟ್‌ ಇಂಡಿಯಾ ದಂತಹ ಕ್ರೀಡಾ ಬೆಳವಣಿಗೆಗೆ ಪೂರಕವಾಗಿ ರುವಂತಹ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಆದರೆ ರಾಜ್ಯದ ಶೇ. 99ರಷ್ಟು ಸರಕಾರಿ ಪ.ಪೂ. ಕಾಲೇಜುಗಳಲ್ಲಿ ಕ್ರೀಡಾ ಪ್ರತಿಭೆಗಳನ್ನು ರೂಪಿಸುವಂತಹ ದೈಹಿಕ ಶಿಕ್ಷಣ ಶಿಕ್ಷಕರೇ ಇಲ್ಲ!

Advertisement

ದಕ್ಷಿಣ ಕನ್ನಡ ಜಿಲ್ಲೆಯ 54 ಹಾಗೂ ಉಡುಪಿ ಜಿಲ್ಲೆಯ 45 ಕಾಲೇಜುಗಳು ಸಹಿತ ರಾಜ್ಯದ 1,200 ಸರಕಾರಿ ಪ.ಪೂ. ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ.

ಕರಾವಳಿಯ ಉಭಯ ಜಿಲ್ಲೆಗಳ ಸರಕಾರಿ ಪಿಯು ಕಾಲೇಜುಗಳ ಪೈಕಿ ಉಡುಪಿ ಜಿಲ್ಲೆಯ ನಾವುಂದ ಸರಕಾರಿ ಪ.ಪೂ. ಕಾಲೇಜಿನಲ್ಲಿ ಮಾತ್ರ ದೈಹಿಕ ಶಿಕ್ಷಣ ಶಿಕ್ಷಕರಿದ್ದಾರೆ.

ಖಾಸಗಿ ಶೇ. 90 ಭರ್ತಿ; ಸರಕಾರಿ ಶೂನ್ಯ
ಉಡುಪಿ ಹಾಗೂ ದ.ಕ. ಜಿಲ್ಲೆಗಳಲ್ಲಿರುವ 205 ಖಾಸಗಿ ಹಾಗೂ ಅನುದಾನಿತ ಪ.ಪೂ. ಕಾಲೇಜುಗಳ ಪೈಕಿ ಶೇ. 90ರಷ್ಟು ಕಡೆ ದೈಹಿಕ ಶಿಕ್ಷಣ ಶಿಕ್ಷಕರಿದ್ದಾರೆ. ಆದರೆ 99 ಸರಕಾರಿ ಪ.ಪೂ. ಕಾಲೇಜುಗಳ ಪೈಕಿ ಒಂದರಲ್ಲಿ ಮಾತ್ರ ದೈಹಿಕ ಶಿಕ್ಷಣ ಶಿಕ್ಷಕರಿದ್ದಾರೆ.

23 ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು
ಉಡುಪಿಯಲ್ಲಿ 45 ಕಾಲೇಜುಗಳಲ್ಲಿ 10,031 ವಿದ್ಯಾರ್ಥಿಗಳು, ದ.ಕ.ದ 54 ಕಾಲೇಜುಗಳಲ್ಲಿ 13,102 ವಿದ್ಯಾರ್ಥಿಗಳು ಸಹಿತ ಒಟ್ಟು 23,132 ಮಂದಿ ಸರಕಾರಿ ಪಿಯು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರೆಲ್ಲ ಬಹುತೇಕ ಎಲ್ಲ ಕ್ರೀಡಾ ಚಟುವಟಿಕೆಗಳಿಂದ ವಂಚಿತರಾಗುತ್ತಿದ್ದಾರೆ.

Advertisement

ಮಸುಕಾಗುತ್ತಿರುವ ಪ್ರತಿಭೆಗಳು
ಕ್ರೀಡಾ ಪ್ರತಿಭೆಗಳು, ಇನ್ನಷ್ಟು ಉನ್ನತ ಹಂತಕ್ಕೇರಲು ಪಿಯುಸಿ ಪ್ರಮುಖ ಘಟ್ಟವಾಗಿದೆ. ಆದರೆ ಸರಕಾರಿ ಪಿಯು ಕಾಲೇಜುಗಳಲ್ಲಿ ಪ್ರತಿಭೆಗಳಿಗೆ ಸಾಣೆ ಹಿಡಿಯಬೇಕಾದ ದೈಹಿಕ ಶಿಕ್ಷಣ ಶಿಕ್ಷಕರೇ ಇಲ್ಲದಿರುವ ಕಾರಣ ಗ್ರಾಮೀಣ ಭಾಗದ ಎಷ್ಟೋ ಪ್ರತಿಭೆಗಳು ಮಸುಕಾಗುತ್ತಿವೆ.

ಪಿಯು ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಮಂಜೂರಾತಿ ಪ್ರಕ್ರಿಯೆ ರಾಜ್ಯ ವ್ಯಾಪಿ ಸರಕಾರದ ಹಂತದಲ್ಲಿಯೇ ಆಗಬೇಕಿದೆ. ಹೆಚ್ಚು ಮಕ್ಕಳಿರುವ ಕಾಲೇಜುಗಳಲ್ಲಿ ಶಿಕ್ಷಕರ ಅಗತ್ಯದ ಬಗ್ಗೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಮಾರುತಿ, ಸಿ.ಡಿ. ಜಯಣ್ಣ ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಉಡುಪಿ ಮತ್ತು ದ.ಕ. ಜಿಲ್ಲೆ

ಶೀಘ್ರ ನೇಮಕಾತಿ ಆಗಲಿ
ಗ್ರಾಮೀಣ ಪ್ರತಿಭೆಗಳನ್ನು ಹುಡುಕುವ ನಿಟ್ಟಿನಲ್ಲಿ ಸರಕಾರಿ ಪ.ಪೂ. ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಅತೀ ಅಗತ್ಯ. ಆದರೆ ಶೇ. 99ರಷ್ಟು ಕಾಲೇಜುಗಳಲ್ಲಿ ಇಲ್ಲದಿರುವುದು ದುರಂತ. ಈ ಬಗ್ಗೆ ಸರಕಾರ ಆದಷ್ಟು ಬೇಗ ಗಮನಹರಿಸಿ ನೇಮಕಾತಿಗೆ ಮುಂದಾಗಬೇಕು. ಮುಂಬರುವ ಅಧಿವೇಶನದಲ್ಲೂ ಸರಕಾರದ ಗಮನಸೆಳೆಯಲಾಗುವುದು.
– ಎಸ್‌.ಎಸ್‌. ಭೋಜೇಗೌಡ, ನೈಋತ್ಯ ಶಿಕ್ಷಕರ ಕ್ಷೇತ್ರದ ಪರಿಷತ್‌ ಸದಸ್ಯರು

ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಕ್ರೀಡೆಯಲ್ಲಿ ಮಿಂಚಿದ ಅದೇಷ್ಟೋ ಪ್ರತಿಭೆಗಳು ಪಿಯುಸಿಯಲ್ಲಿ ಅದರಿಂದ ವಿಮುಖರಾಗುತ್ತಿರುವುದಕ್ಕೆ ದೈಹಿಕ ಶಿಕ್ಷಣ ಶಿಕ್ಷಕರಿಲ್ಲದಿರುವುದೇ ಕಾರಣ. ಸರಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ. ಆದಷ್ಟು ಬೇಗ ಎಂಪಿಎಡ್‌ ಪೂರೈಸಿರುವವರನ್ನು ನೇಮಕಾತಿ ಮಾಡಿಕೊಳ್ಳಲಿ.
– ರಾಜಾರಾಮ ಶೆಟ್ಟಿ ಕುಂದಾಪುರ,
ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ

-  ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next