Advertisement

ಬೆಳ್ತಂಗಡಿಯ ಮೂರೂ ಹೋಬಳಿಗಳಿಗೆ ಕೃಷಿ ಅಧಿಕಾರಿಗಳೇ ಇಲ್ಲ!

01:12 PM Jun 21, 2024 | Team Udayavani |

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ಕೃಷಿ ಇಲಾಖೆಗೆ ಸಿಬಂದಿ ಕೊರತೆ ಎದುರಾಗಿದ್ದು, ಭವಿಷ್ಯದಲ್ಲಿ ಇಲಾಖೆಯನ್ನು ರೈತರೇ ನಡೆಸಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ. ಜಿಲ್ಲೆಯಲ್ಲಿ ಅತೀ ಹೆಚ್ಚು ಕೃಷಿಕರನ್ನು ಹೊಂದಿರುವ ಬೆಳ್ತಂಗಡಿ ತಾಲೂಕಿನಲ್ಲಿ ಅಡಕೆ, ರಬ್ಬರ್‌, ತೆಂಗು ಪ್ರಮುಖ ಬೆಳೆಯಾದರೆ, ಭತ್ತದ ಕೃಷಿಯೂ 1,500 ಎಕ್ರೆ ಪ್ರದೇಶದಲ್ಲಿ ಈಗಲೂ ಇದೆ. ಭತ್ತದ ಬೆಳೆಗೆ ಪ್ರೋತ್ಸಾಹ ನೀಡಲು ಇಲ್ಲಿರುವ ಕೃಷಿ ಇಲಾಖೆಯಲ್ಲಿನ ಸಿಬಂದಿ ಕೊರತೆ ಸಮಸ್ಯೆಯಾಗುತ್ತಿದೆ.

Advertisement

ಏಕ ವ್ಯಕ್ತಿ ನಿರ್ವಹಣೆ
ಜಿಲ್ಲೆಯಲ್ಲಿ ಬೆಳ್ತಂಗಡಿ ಅತೀ ದೊಡ್ಡ ತಾಲೂಕಾಗಿದೆ. ಈ ಹಿಂದೆ ಬೆಳ್ತಂಗಡಿ, ವೇಣೂರು, ಕೊಕ್ಕಡ ಹೋಬಳಿಯನ್ನು ಹುಮೇರಾ
ಜಬೀನ್‌ ಮತ್ತು ಚಿದಾನಂದ ಹೂಗಾರ್‌ ನಿರ್ವಹಿಸುತ್ತಿದ್ದರು. ಹುಮೇರಾ ಅವರು ಬೆಂಗಳೂರಿಗೆ ವರ್ಗಾವಣೆ ಪಡೆದು ಕೊಂಡಿದ್ದು, ಇತ್ತ ಚಿದಾನಂದ ಹೂಗಾರ್‌ ಕಳೆದ ತಿಂಗಳಾಂತ್ಯಕ್ಕೆ ನಿವೃತ್ತಿಯಾಗಿದ್ದಾರೆ. ಪ್ರಸಕ್ತ ಸಹಾಯಕ ಕೃಷಿ ನಿರ್ದೇಶಕರಾದ ರಂಜಿತ್‌ ಅವರೇ ಎಲ್ಲವನ್ನೂ ನಿಭಾಯಿಸಬೇಕಿದೆ.

ಜಿಲ್ಲೆಯಲ್ಲಿ 114 ಹುದ್ದೆ ಪೈಕಿ 14 ಭರ್ತಿ
ತಾಂತ್ರಿಕವಾಗಿ ಜಿಲ್ಲೆಯಲ್ಲಿ ಒಟ್ಟು 114 ಮಂಜೂರಾದ ಹುದ್ದೆಗಳು. ಸದ್ಯ ಇಡೀ ಜಿಲ್ಲೆಯಲ್ಲಿ 14 ಮಂದಿ ಅಧಿಕಾರಿಗಳಿದ್ದು, 100 ಹುದ್ದೆ ಖಾಲಿಯಿವೆ. ಅದರಲ್ಲೂ ಬೆಳ್ತಂಗಡಿಯ ಸಹಾಯಕ ಕೃಷಿ ನಿದೇಶಕಿ  ಸ್ವಯಂ ನಿವೃತ್ತಿ ಕೋರಿದ್ದಾರೆ. ಸುಳ್ಯ ಮತ್ತು
ಮಂಗಳೂರಿನಲ್ಲಿ ಕೃಷಿ ಅಧಿಕಾರಿಗಳು ತಾಲೂಕು ಮಟ್ಟದಲ್ಲಾಗಲಿ ಹೋಬಳಿ ಮಟ್ಟದಲ್ಲಾಗಲಿ ಇಲ್ಲ. ಕೇವಲ ಸಹಾಯಕ
ಕೃಷಿ ನಿರ್ದೇಶಕರ ಹುದ್ದೆಯಷ್ಟೇ ಇವೆ.

ಬಂಟ್ವಾಳ ಮತ್ತು ಪುತ್ತೂರು ತಾಲೂಕಿನಲ್ಲಿ ತಲಾ ಇಬ್ಬರಂತೆ ಒಬ್ಬರು ಪದವೀದರ ಕೃಷಿ ಅಧಿಕಾರಿ ಮತ್ತು ಕೃಷಿ ಪದವೀದರರಲ್ಲದ ಕೃಷಿ ಅಧಿಕಾರಿಗಳಿದ್ದಾರೆ. ಈ ಪೈಕಿ ಎರಡೂ ತಾಲೂಕಿನಲ್ಲಿ ಕೃಷಿ ಪದವೀದರರಲ್ಲದ ಕೃಷಿ ಅಧಿಕಾರಿಗಳಲ್ಲಿ ಬಂಟ್ವಾಳದವರು ಈ ವರ್ಷ, ಪುತ್ತೂರು ತಾಲೂಕಿನವರು ಮುಂದಿನ ವರ್ಷ ನಿವೃತ್ತಿ ಹೊಂದಲಿದ್ದಾರೆ. ಹೊಸ ನೇಮಕ ಆಗದಿದ್ದರೆ ಅಲ್ಲಿಗೆ ದ.ಕ.ಜಿಲ್ಲೆಯಲ್ಲಿ ಮುಂದಿನ ವರ್ಷ ಎಪ್ರಿಲ್‌ಗೆ ಮೂವರು ಕೃಷಿ ಅಧಿಕಾರಿಗಳಷ್ಟೇ ಉಳಿಯಲಿದ್ದಾರೆ.

ಬೆಳ್ತಂಗಡಿಯಲ್ಲಿ ಖಾಲಿ ಬಿದ್ದ ಹುದ್ದೆಗಳು
ಬೆಳ್ತಂಗಡಿ ಕೃಷಿ ಇಲಾಖೆಯಲ್ಲಿ ಒಟ್ಟು 27 ಹುದ್ದೆಗಳಿದ್ದು ಕೇವಲ ಎರಡು ಹುದ್ದೆಗಳು ಮಾತ್ರ ಖಾಯಂನಲೆಯಲ್ಲಿ
ಕಾರ್ಯನಿರ್ವಹಿಸುತ್ತಿವೆ. 10 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಒಬ್ಬರೂ ಇಲ್ಲ. ಅಧೀಕ್ಷಕ, ಪ್ರಥಮ ದರ್ಜೆ ಸಹಾಯಕ ತಲಾ
ಒಂದು ಹುದ್ದೆ, ದ್ವಿತೀಯ ದರ್ಜೆ ಸಹಾಯಕ ಎರಡು ಹುದ್ದೆ, ಬೆರಳಚ್ಚುಗಾರ, ವಾಹನ ಚಾಲಕ ಹುದ್ದೆಗಳು ಹಾಗೂ ಮೂರು ಡಿ
ಗ್ರೂಪ್‌ ಹುದ್ದೆಗಳು ಖಾಲಿ ಇವೆ. ಅಗತ್ಯಕ್ಕೆ ಪಕ್ಕದ ಕೃಷಿ ಪ್ರಯೋಗಾಲಯ ಹಾಗೂ ಕೃಷಿ ಕೇಂದ್ರದಿಂದ ಸಿಬಂದಿಯನ್ನು ಕರೆಸಿ ಕಚೇರಿ ಕೆಲಸ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊರಗುತ್ತಿಗೆ ಆಧಾರದಲ್ಲಿ 5 ಜನ ಕಾರ್ಯನಿರ್ವಹಿಸುತ್ತಿದ್ದರು ಅವರಿಗೆ ಯಾವುದೇ ಜವಾಬ್ದಾರಿ ನೀಡಲು ಆಗುವುದಿಲ್ಲ. 27 ಹುದ್ದೆಗಳಿಗೆ ಕೇವಲ 7 ಜನ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

ದ.ಕ. ಕೃಷಿ ಇಲಾಖೆ ವಿವರ
*ಎಂಟಿ ಕೃ.ನಿ. ಕಚೇರಿ-1
*ಉಪ .ಕೃ.ನಿ.ಕಚೇರಿ-2
*ತಾಲೂಕು ಮಟ್ಟದ ಸ.ಕೃ.ನಿ. ಕಚೇರಿ-5
*ಪ್ರಯೋಗಾಲಯ-1
*ತರಬೇತಿ ಕೇಂದ್ರ-1
*ಬೀಜೋತ್ಪಾದನೆ ಕೇಂದ್ರ-1
*ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ-16
*ಒಟ್ಟು ಕಚೇರಿ-27
*ಮಂಜೂರಾದ ಒಟ್ಟು ತಾಂತ್ರಿಕ ಅಧಿಕಾರಿ ಹುದ್ದೆಗಳು -114
*ಭರ್ತಿ ಆಗಿರುವ ಒಟ್ಟು ತಾಂತ್ರಿಕ ಅಧಿಕಾರಿಗಳ ಹುದ್ದೆಗಳು- 14
*ಒಟ್ಟು ಮಂಜೂರಾದ ಎಲ್ಲ ಹುದ್ದೆಗಳ ಸಂಖ್ಯೆ: 230
*ಭರ್ತಿ ಆಗಿರುವ ಎಲ್ಲ ಹುದ್ದೆಗಳ ಒಟ್ಟು ಸಂಖ್ಯೆ-31

ನಾನಾ ಜವಾಬ್ದಾರಿ
ತಮ್ಮ ಕಚೇರಿ ಕೆಲಸದ ಜತೆ ಗ್ರಾಮ ಸಭೆ, ಜನ ಸಂಪರ್ಕ ಸಭೆ, ತರಬೇತಿ, ಅಧಿಕಾರಿ, ಜನಪ್ರತಿನಿಧಿಗಳ ಸಭೆ ಪ್ರಾತ್ಯಕ್ಷಿಕೆ, ಫೀಲ್ಡ್‌ವರ್ಕ್‌ನಲ್ಲಿ ಭಾಗವಹಿಸಿ ವರದಿ ಸಿದ್ದಪಡಿಸಬೇಕಾಗಿದೆ. ಇದರಿಂದ ಅಗತ್ಯ ಕೆಲಸದ ಮೇಲೆ ಕಚೇರಿಗೆ ಬರುವ ರೈತರು ಅಧಿಕಾರಿಗಳು ಸಿಗದೆ ಪದೇಪದೆ ಅಲೆಯುವ ಸ್ಥಿತಿ ಉಂಟಾಗುತ್ತಿದೆ.

ಕೃಷಿ ಇಲಾಖೆಯಲ್ಲಿರುವ ಸಿಬಂದಿ ಕೊರತೆ ಬಗ್ಗೆ ವರದಿ ಸಲ್ಲಿಸಲಾಗಿದೆ. ಮುಂದಿನ ಹಂತದಲ್ಲಿ ಖಾಲಿ ಹುದ್ದೆಗಳು ಭರ್ತಿಯಾಗುವ ನಿರೀಕ್ಷೆ ಇದೆ.
-ಶಿವಶಂಕರ ದಾನೆಗೊಂಡರ್‌,
ಉಪನಿರ್ದೇಶಕರು,ಕೃಷಿ ಇಲಾಖೆ ಪುತ್ತೂರು

*ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next