ಹುಣಸೂರು: ನಗರದ ಕಾಫಿವರ್ಕ್ಸ್ ರಸ್ತೆಯ ಟೌಟ್ ಬಳಕೆದಾರರ ಸಹಕಾರ ಸಂಘದ ನೂತನ ಕಟ್ಟಡವನ್ನು ಶಾಸಕ ಎಚ್.ಪಿ.ಮಂಜುನಾಥ್ ಉದ್ಘಾಟಿಸಿದರು.
ನಂತರ ಸಮಾರಂಭದಲ್ಲಿ ಮಾತನಾಡಿ, ಸಹಕಾರ ಸಂಘಗಳು ಕೇವಲ ಸದಸ್ಯರ ಸರ್ವತೋಮುಖ ಬೆಳವಣಿಗೆ ಮಾತ್ರವಲ್ಲ, ಸಹಕಾರಿಗಳು ಸ್ವಸಾಮರ್ಥ್ಯದಿಂದ ಸಹಕಾರ ಮನೋಭಾವನೆಯೊಂದಿಗೆ ದುಡಿದಲ್ಲಿ ಮಾತ್ರ ಸಹಕಾರ ತತ್ವಗಳು ಸಾರ್ಥಕತೆ ಪಡೆಯಲು ಸಾಧ್ಯ ಎಂದರು.
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸಹಕಾರ ಕ್ಷೇತ್ರದಿಂದ ಆಗದಿರುವ ಸಾಧನೆಗಳಿಲ್ಲ. ಕೃಷಿ, ಕೈಗಾರಿಕೆ, ಶಿಕ್ಷಣ, ಉಳಿತಾಯ, ವಾಣಿಜ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಸಹಕಾರಿಗಳು ಸಾಧನೆಗೆಯಬಹುದಾದ ಅವಕಾಶಗಳು ಹೆಚ್ಚಿವೆ. ಎಲ್ಲದಕ್ಕೂ ಮುಖ್ಯವಾಗಿ ಇನ್ನೊಬ್ಬರ ಕಷ್ಟಕ್ಕೆ ನೆರವಾಗುವ ಮನೋಭಾವವಿದ್ದಲ್ಲಿ ಇವೆಲ್ಲವೂ ಸಾಧ್ಯ.
50 ವರ್ಷಗಳ ಇತಿಹಾಸ ಹೊಂದಿರುವ ತಾಲೂಕಿನಲ್ಲೇ ಅತ್ಯಂತ ಹಳೆಯದಾದ ಈ ಸಂಘವು 10 ಲಕ್ಷ ರೂ. ವೆಚ್ಚದಡಿ ಕಟ್ಟಡ ನಿರ್ಮಿಸಿಕೊಂಡಿದ್ದು, ಮುಂದೆ ಮೇಲಂತಸ್ತು ನಿರ್ಮಿಸಿಕೊಂಡಲ್ಲಿ ಪಡಿತರದೊಂದಿಗೆ ನಿತ್ಯೋಪಯೋಗಿ ವಸ್ತುಗಳ ಮಾರಾಟ ಹಾಗೂ ಇ.ಸ್ಟಾಂಪಿಂಗ್ ಕೇಂದ್ರ ತೆರೆದಲ್ಲಿ ಲಾಭಗಳಿಸ ಬಹುದಾಗಿದ್ದು, ಆಡಳಿತ ಮಂಡಳಿ ಈ ನಿಟ್ಟಿನಲ್ಲಿ ಚಿಂತಿಸಲಿ, ಸಹಕಾರ ತತ್ವದಡಿ ಇನ್ನಷ್ಟು ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಬೇಕಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಎಚ್.ವೆ.ಕೃಷ್ಣ ಮಾತನಾಡಿ, ಶಾಸಕ ಮಂಜುನಾಥ್ ತಮ್ಮ ನಿಧಿ ಹಾಗೂ ಸಹಕಾರ ಇಲಾಖೆಯಿಂದ ಅನುದಾನ ಕೊಡಿಸಿದ್ದರಿಂದಲೇ ಇಂತಹ ಕಟ್ಟಡ ನಿರ್ಮಿಸಲಾಗಿದೆ ಎಂದು ಅವರನ್ನು ಅಭಿನಂದಿಸಿದರು.
ಸಂಘದ ಹಿಂದಿನ ಅಧ್ಯಕ್ಷರುಗಳಿಗೆ ಸನ್ಮಾನಿಸಲಾಯಿತು. ನಗರಸಭೆ ಸದಸ್ಯರಾದ ಎಚ್.ಜೆ ಯೋಗಾನಂದ್, ಶಿವಕುಮಾರ್, ಸಹಕಾರ ಸಂಘಗಳ ಉಪನಿಬಂಧಕ ಡಾ.ಡಿ.ಉಮೇಶ್, ಸಂಘದ ಉಪಾಧ್ಯಕ್ಷ ಕೆ.ಎಸ್.ಶ್ರೀನಿವಾಸ್, ನಿರ್ದೇಶಕರಾದ ಎಸ್.ಸುರೇಶ್, ಎಸ್.ಸಿ ಮೂರ್ತಿ, ಎಂ.ಜಿ.ನಾಗಪ್ರಕಾಶ್, ಬಿ.ಆರ್.ಷಣ್ಮುಖ, ಎ.ಎ.ಜೇಕಬ್, ಧನಲಕ್ಷಿ, ನಾಗರತ್ಮಮ್ಮ, ಪೌರಾಯುಕ್ತ ಶಿವಪ್ಪ ನಾಯಕ ಇತರರು ಭಾಗವಹಿಸಿದ್ದರು.
ಎಚ್ಚೆಸ್ಸೆಂಗೆ ನಮನ: ಮೈಸೂರು ಜಿಲ್ಲೆಯಲ್ಲಿ ಸಹಕಾರ ಸಂಘಗಳ ನೂತನ ಕಟ್ಟಡ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಈ ಹಿಂದಿನ ಸಹಕಾರ ಮಂತ್ರಿ ದಿವಂಗತ ಎಚ್.ಎಸ್.ಮಹದೇವಪ್ರಸಾದ್ 3.50 ಕೋಟಿ ರೂ.ಅನುದಾನ ಒದಗಿಸಿದ್ದು, ಈ ಪೈಕಿ ಹುಣಸೂರು ತಾಲೂಕಿಗೆ ಅತಿ ಹೆಚ್ಚು 66 ಲಕ್ಷ ರೂ.ನೀಡಿದ್ದಾರೆ. ಸಹಕಾರ ಕ್ಷೇತ್ರದ ಬೆಳವಣಿಗೆಗೆ ಎಚ್ಚೆಸ್ಸೆಂ ಕೊಡುಗೆ ನೀಡಿದ್ದಾರೆಂದು ಸ್ಮರಿಸಿ, ಅವರನ್ನು ನೆನೆದು ಭಾವುಕರಾದರು.