Advertisement

Iran ತೀವ್ರಗಾಮಿ ಅಧ್ಯಕ್ಷ ಕಟ್ಟರ್‌ ಸಂಪ್ರದಾಯವಾದಿ ರೈಸಿ ಸಾವಿನ ಸುತ್ತ ನಾನಾ ಕತೆ

01:31 AM May 21, 2024 | Team Udayavani |

“ಟೆಹರಾನ್‌ನ ಕಟುಕ’ ಎಂದೇ ಕುಖ್ಯಾತರಾಗಿದ್ದ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ವಿದೇಶಾಂಗ ಸಚಿವರು ಹೆಲಿಕಾಪ್ಟರ್‌ ಪತನದಲ್ಲಿ ಮೃತಪಟ್ಟಿದ್ದಾರೆ. ಇರಾನ್‌ ಹಾಗೂ ಇಸ್ರೇಲ್‌ ನಡುವೆ ಯುದ್ಧದ ವಾತಾವರಣ ಇರುವ ಸಂದರ್ಭದಲ್ಲೇ ಇರಾನ್‌ ಅಧ್ಯಕ್ಷರ ಸಾವು ಸಂಭವಿಸಿರುವುದು ಮಧ್ಯಪ್ರಾಚ್ಯ ರಾಜಕೀಯಕ್ಕೆ ಹೊಸ ತಿರುವು ನೀಡುವ ಸಾಧ್ಯತೆ ಇದೆ. ಇರಾನ್‌ ರಾಜಕೀಯದಲ್ಲಿ ಬಹಳ ಬೇಗ ಪ್ರವರ್ಧಮಾನಕ್ಕೆ ಬಂದ 63 ವಯಸ್ಸಿನ ರೈಸಿ, ತಮ್ಮನ್ನು ತಾವು “ಭ್ರಷ್ಟಾಚಾರ ವಿರುದ್ಧದ ಹೋರಾಟಗಾರ’ ಎಂದು ಹೇಳಿಕೊಳ್ಳುತ್ತಿದ್ದರು. ಇದೇ ವೇಳೆ ಮಾನವ ಹಕ್ಕುಗಳ ಬಗ್ಗೆ ತಾತ್ಸಾರ ಭಾವನೆ ತಳೆಯುತ್ತಿದ್ದರು ಎಂಬ ಆರೋಪ ಹೊತ್ತಿದ್ದರು.

Advertisement

2021 ರಲ್ಲಿ ಅಧ್ಯಕ್ಷರಾದ ಬಳಿ ರೈಸಿ ಸೇನಾ ಬಲದೊಂದಿಗೆ ಮಧ್ಯಪ್ರಾಚ್ಯ ಪ್ರದೇಶ ದಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿದರು. ಇರಾನ್‌ ಅಣ್ವಸ್ತ್ರ ರಾಷ್ಟ್ರವನ್ನಾಗಿ ಮಾಡುವ ಮತ್ತು ಇಸ್ರೇಲ್‌ ಜತೆಗಿನ ಬಿಕ್ಕಟ್ಟಿನ ಕಾರಣಕ್ಕೆ ರೈಸಿ ಹೆಚ್ಚು ಚರ್ಚಿತ ವ್ಯಕ್ತಿಯಾಗಿದ್ದರು. ದೇಶದೊಳಗೂ ರೈಸಿ ಸಾಕಷ್ಟು ವಿರೋಧ ಹೊಂದಿದ್ದರು. ಮಾನವ ಹಕ್ಕುಗಳ ಉಲ್ಲಂಘನೆ, ಹೋರಾಟಗಾರರನ್ನು ಸದೆ ಬಡೆಯಲು ಅನುಸರಿಸಿದ ಕ್ರಮಗಳು, ಪ್ರತಿಭಟನನಿರತ ಮಹಿಳೆಯ ವಿರುದ್ಧ ಸೇನಾ ಕಾರ್ಯಾಚರಣೆಗಳಿಂದ “ಜನವಿರೋಧಿ’ ಎನಿಸಿಕೊಂಡಿದ್ದರು. ಅಂತಾರಾಷ್ಟ್ರೀಯ ನಿರ್ಬಂಧಗಳು, ಪಶ್ಚಿಮ ರಾಷ್ಟ್ರಗಳ ಒತ್ತಡವನ್ನು ನಿವಾರಿಸಲು ಯಶಸ್ಸು ಕಾಣಲಿಲ್ಲ. ಪರಿಣಾಮ ವಾಗಿ ದೇಶದಲ್ಲಿ ನಿರುದ್ಯೋಗ ಹೆಚ್ಚಾಯಿತು. ಇಷ್ಟಾಗಿಯೂ ಅವರು ಇರಾನ್‌ ಪರಮೋತ್ಛ ನಾಯಕ ಖಮೇನಿ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿದ್ದರು ಎಂಬುದೂ ಸತ್ಯ.

ನ್ಯಾಯಮೂರ್ತಿಯಿಂದ ಇರಾನ್‌ ಅಧ್ಯಕ್ಷ ಪಟ್ಟ ತನಕ
2017ರ ಇರಾನ್‌ ಅಧ್ಯಕ್ಷ ಚುನಾವಣೆಯಲ್ಲಿ ಇಬ್ರಾಹಿಂ ರೈಸಿ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದರು. ಆದರೆ ಪ್ರಗತಿಪರ ನಾಯಕ ಹಸನ್‌ ರೌಹಾನಿ ವಿರುದ್ಧ ಕೇವಲ ಶೇ.38ರಷ್ಟು ಮತ ಪಡೆದು, ಸೋಲು ಅನುಭವಿಸಿದರು. ಆದರೆ ರೈಸಿಗೆ ತೀರಾ ನಿರಾಸೆ ಏನೂ ಆಗಲಿಲ್ಲ. ಚುನಾವಣೆಯ 2 ವರ್ಷದ ಬಳಿಕ ಇರಾನ್‌ನ ಪರಮೋತ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ, ರೈಸಿಯನ್ನು ಇರಾನ್‌ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿದರು. ಬಡತನ ಮತ್ತು ಭ್ರಷ್ಟಾಚಾರ ವಿರುದ್ಧ “ಕ್ರುಸೇಡರ್‌’ ಎಂದು ಘೋಷಿಸಿಕೊಂಡಿದ್ದ ರೈಸಿ, 2021ರಲ್ಲಿ ಮತ್ತೆ ಇರಾನ್‌ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದರು. ಈ ಬಾರಿ ರೈಸಿಯನ್ನು ಇರಾನ್‌ ಅಧ್ಯಕ್ಷರನ್ನಾಗಿ ಮಾಡಲೇಬೇಕು ಎಂದು ನಿರ್ಧರಿಸಿದ್ದ , ಪ್ರಮುಖ ನಿರ್ಧಾರ ಕೈಗೊಳ್ಳುವ ಇರಾನ್‌ನ ಗಾರ್ಡಿಯನ್‌ ಕೌನ್ಸಿಲ್‌, ಹಲವು ಸುಧಾರಣವಾದಿ ಮತ್ತು ಪ್ರಗತಿಪರ ನಾಯಕರು ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಿದರು. ಯಾವುದೇ ಪೈಪೋಟಿ ಇಲ್ಲದೇ ರೈಸಿ ಶೇ.62ರಷ್ಟು ಮತಗಳೊಂದಿಗೆ, ಇರಾನ್‌ನ 13ನೇ ಅಧ್ಯಕ್ಷರಾದರು.

“ಇರಾನ್‌ನ ಕೊಲೆಗೆಡುಕ’ ಕುಖ್ಯಾತಿಯ ರೈಸಿ!
ಕಟ್ಟಾ ಸಂಪ್ರದಾಯವಾದಿ ನಾಯಕರಾಗಿರುವ ಇಬ್ರಾಹಿಂ ರೈಸಿ “ಟೆಹರಾನ್‌ನ ಕೊಲೆಗಡುಕ’ ಎಂದು ಕುಖ್ಯಾತಿ ಗಳಿಸಿದ್ದಾರೆ. ಸರಕಾರದ ವಿರುದ್ಧ ದನಿ ಎತ್ತಿದ ಸಾವಿರಾರು ಜನರನ್ನು ಜೈಲಿಗೆ ಹಾಕಲಾಗಿತ್ತು. ಇವರ ವಿಚಾರ ಣೆ ಗೋಸ್ಕರವೇ 1988ರಲ್ಲಿ ರಹಸ್ಯವಾಗಿ “ಡೆತ್‌ ಕಮಿಟಿ’ ನ್ಯಾಯ ಮಂಡಳಿ ಯನ್ನು ರಚಿಸಲಾಗಿತ್ತು. ಇದರಲ್ಲಿದ್ದ ನಾಲ್ವರು ಜಡ್ಜ್ಗಳ ಪೈಕಿ ರೈಸಿ ಕೂಡ ಒಬ್ಬರು. ಜೈಲು ಪಾಲಾಗಿದ್ದ ಬಹುತೇಕ ರಾಜಕೀಯ ಕಾರ್ಯಕರ್ತರ ಪೈಕಿ ವಿಪಕ್ಷ ಮಾಜಾಹಿದೀನ್‌-ಇ-ಖಲ್ಕ್ಗೆ ಸೇರಿದವರು. ಡೆತ್‌ ಕಮಿಟಿಯು 5,000 ಜನರಿಗೆ ಗಲ್ಲು ಶಿಕ್ಷೆ ವಿಧಿಸಿತು. ಈ ಕಾರಣಕ್ಕಾಗಿಯೇ ರೈಸಿಯನ್ನು “ಟೆಹರಾನ್‌ನ ಕೊಲೆಗಡುಕ’ ಎಂದು ಕರೆಯಲಾಗುತ್ತದೆ. ಆದರೆ ರೈಸಿ ಆರೋಪವನ್ನು ತಳ್ಳಿ ಹಾಕುತ್ತಲೇ ಬಂದಿದ್ದರು.

ಇಬ್ರಾಹಿಂ ರೈಸ್‌ ಸಾವಿಗೆ ಉತ್ತರಾಧಿಕಾರಿ ರೇಸ್‌ ಕಾರಣ?
ಹೆಲಿಕಾಪ್ಟರ್‌ ಪತನದಲ್ಲಿ ಮೃತಪಟ್ಟಿರುವ ಇಬ್ರಾಹಿಂ ರೈಸಿ, ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿಯ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿದ್ದರು. ಕಟ್ಟರ್‌ ಇಸ್ಲಾಮ್‌ ಸಂಪ್ರದಾಯವಾದಿ ಯಾಗಿದ್ದ ರೈಸಿ, ಇರಾನ್‌ನ ಪರಮೋಚ್ಚ ಸ್ಥಾನದ ಕರ್ತವ್ಯವನ್ನು ನಿರ್ವಹಿಸಲು ಆಸಕ್ತರಾಗಿದ್ದರು. ಈ ಸಂಗತಿಯೇ ಅವರ ಸಾವಿಗೆ ಕಾರಣವಾಯಿತೆ? ಖಮೇನಿ ಪುತ್ರ ಮೋಜಾ¤ಬಾ ಕೂಡ ಉತ್ತರಾಧಿಕಾರಿಯಾಗುವ ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಅವರು ತಮ್ಮ ತಂದೆಯ ಹಲವು ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ. ತಂದೆ ಹುದ್ದೆಯ ಮೇಲೆ ಸಾಕಷ್ಟು ವ್ಯಾಮೋಹಿಯಾಗಿದ್ದಾರೆ. ಹಾಗಾಗಿ ರೈಸಿ ಸಾವಿಗೆ ಇಸ್ರೇಲ್‌ ಕಾರಣ ಎಂಬುದಕ್ಕಿಂತಲೂ ಉತ್ತರಾಧಿಕಾರಿ ಹುದ್ದೆಯೆಡೆಗಿನ ರೇಸ್‌ ಹೆಚ್ಚು ಹತ್ತಿರ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದೆಲ್ಲವೂ ಉಹಾಪೋಹವಷ್ಟೇ.

Advertisement

ರೈಸಿ ಸಾವಿನಿಂದ ಇಸ್ರೇಲ್‌ಗೆ ಏನು ಲಾಭ?
ಇರಾನ್‌ ಅಧ್ಯಕ್ಷ ರೈಸಿ ಸಾವಿನಿಂದ ಇಸ್ರೇಲ್‌ಗೆ ಅಂಥ ಲಾಭಗಳೇನೂ ಇಲ್ಲ. ಒಂದೊಮ್ಮೆ ರೈಸಿ ಸಾವಿಗೆ ಸಂಚು ರೂಪಿಸಿದರೆ ಅದು ಇಸ್ರೇಲ್‌ಗೆ ಆರ್ಥಿಕವಾಗಿ ಹೆಚ್ಚು ನಷ್ಟವೇ ಹೊರತು, ಲಾಭ ಶೂನ್ಯ ಎನ್ನುವುದು ತರ್ಕವಾಗಿದೆ. ಹಾಗಿದ್ದೂ ಇರಾನ್‌ನಲ್ಲಿ ಇಸ್ರೇಲ್‌ ಗುಪ್ತಚರ ಸಂಸ್ಥೆ ಪರಿಣಾಮಕಾರಿ ಜಾಲ ಹೊಂದಿರುವುದು ಸತ್ಯ. ಕೆಲವು ವರದಿಗಳ ಪ್ರಕಾರ, ರೈಸಿ ಸಾವಿನಲ್ಲಿ ಇಸ್ರೇಲ್‌ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಆದರೆ ಸ್ವತಃ ಇಸ್ರೇಲ್‌ ಕೈವಾಡದ ಸುದ್ದಿ ತಳ್ಳಿ ಹಾಕಿದೆ. ಇರಾನ್‌ ಕೂಡ ಅಧಿಕೃತವಾಗಿ ಏನೂ ಹೇಳಿಲ್ಲ. ರೈಸಿ ಹಮಾಸ್‌ ಪರವಾಗಿದ್ದರು ಮತ್ತು ಇಸ್ರೇಲ್‌ ಅನ್ನು ನಖಶಿಖಾಂತ ವಿರೋಧಿಸುತ್ತಿದ್ದರು. ಈ ಮಧ್ಯೆ, ಇರಾನ್‌ ಅಣು ವಿಜ್ಞಾನಿ ಮೊಹ್ಸಿನ್‌ ಫ‌ಖೀÅàಜ್‌ದೇಹ್‌ ಸೇರಿದಂತೆ ಹಲವು ಪ್ರಮುಖರ ಹತ್ಯೆಯಲ್ಲಿ ಇಸ್ರೇಲ್‌ನ ಮೊಸಾದ್‌ ಕೈವಾಡವಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಆ ಕಾರಣಕ್ಕಾಗಿಯೇ ಎಲ್ಲರೂ ಇಸ್ರೇಲ್‌ನತ್ತ ಬೆಟ್ಟು ಮಾಡುತ್ತಿದ್ದಾರೆ.

ಇರಾನ್‌ ಅಧ್ಯಕ್ಷರ ಸಾವಿನಲ್ಲಿ ನಮ್ಮ ಪಾತ್ರ ಇಲ್ಲ: ಇಸ್ರೇಲ್‌
ಇರಾನ್‌ ಮತ್ತು ಇಸ್ರೇಲ್‌ ನಡುವೆ ಹೇಳಿಕೊಳ್ಳುವಂಥ ಬಾಂಧವ್ಯವೇನೂ ಇಲ್ಲ. ಇತ್ತೀಚೆಗಷ್ಟೇ ಇಸ್ರೇಲ್‌ ವಿರುದ್ಧ ಒಂದೇ ದಿನ ಡ್ರೋನ್‌, ಕ್ಷಿಪಣಿ ದಾಳಿ ಇರಾನ್‌ ನಡೆಸಿತ್ತು. ಅದರ ವಿರುದ್ಧ ಇಸ್ರೇಲ್‌ ಪ್ರತೀಕಾರ ದಾಳಿ ನಡೆಸಬ ಹುದು ಎಂಬ ಶಂಕೆ ಇತ್ತು. ಅದಕ್ಕೆ ಪೂರಕವಾಗಿ ಇರಾನ್‌ ಅಧ್ಯಕ್ಷರು ಅಸು ನೀಗಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ ಕೈವಾಡ ಇದೆಯೇ ಎಂಬ ಶಂಕೆ ವ್ಯಕ್ತವಾಗುತ್ತಿರುವಂತೆಯೇ “ಇರಾನ್‌ ಅಧ್ಯಕ್ಷರ ಸಾವಿನಲ್ಲಿ ನಮ್ಮ ಪಾತ್ರ ಇಲ್ಲ’ ಎಂದು ಅಲ್ಲಿನ ಸರಕಾರ ಹೇಳಿಕೊಂಡಿದೆ. ಇಸ್ರೇಲ್‌ ಗುಪ್ತಚರ ಸಂಸ್ಥೆ ಮೊಸ್ಸಾದ್‌ ಇರಾನ್‌ ವಿರುದ್ಧ ಈ ಹಿಂದೆ ಕಾರ್ಯಾಚರಣೆ ನಡೆಸಿತ್ತು.

ಮಧ್ಯಪ್ರಾಚ್ಯ ಉಗ್ರ ಸಂಘಟನೆಗಳಿಗೆ ಹಿನ್ನಡೆ?
ಇರಾನ್‌ ಅಧ್ಯಕ್ಷರ ಸಾವು ಲೆಬನಾನ್‌, ಸಿರಿಯಾ, ಇರಾಕ್‌, ಯೆಮನ್‌ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಲ್ಲಿ ಕಾರ್ಯಾ ಚರಿಸುತ್ತಿರುವ ಕೆಲವು ಉಗ್ರ ಸಂಘಟನೆಗಳಿಗೆ ಹಿನ್ನಡೆ ಉಂಟಾ ಗಿದೆ. ಹಮಾಸ್‌, ಹೌತಿ, ಹೆಜ್‌ಬುಲ್ಲಾ ಉಗ್ರ ಸಂಘಟನೆಗಳಿಗೆ ದೊಡ್ಡ ಬೆಂಬಲ ಕಳೆದುಕೊಂಡಂತಾಗಿದೆ. ಈ ಉಗ್ರ ಸಂಘಟನೆ ಗಳಿಗೆ ಇರಾನ್‌ ಬೆಂಬಲ ನೀಡುತ್ತಿದೆ ಎಂಬ ಆರೋಪಗಳಿವೆ

ಹಿಜಾಬ್‌ ವಿರುದ್ಧ ಸಿಡಿದೆದ್ದ ಇರಾನ್‌ ಮಹಿಳೆಯರು
ಹಿಜಾಬ್‌ ಧರಿಸದೇ ಇಸ್ಲಾಮಿಕ್‌ ನಿಯಮ ಉಲ್ಲಂ ಸಿದ ಎಂಬ ಕಾರಣಕ್ಕೆ ಬಂಧಿತಳಾಗಿದ್ದ 22 ವರ್ಷದ ಮಹ್ಸಾ ಅಮಿನಿ ಇರಾನ್‌ ಪೊಲೀಸ್‌ ವಶದಲ್ಲಿದ್ದಾಗಲೇ 2022ರ ಸೆ.16ರಂದು ಸಾವಿಗೀಡಾ ಗಿ ದ್ದಳು. ಈ ಘಟನೆ ಇರಾನ್‌ ಮಹಿಳೆಯರ ಆಕ್ರೋಶಕ್ಕೆ ಕಾರಣ ವಾಯಿತು. ಇರಾನ್‌ನಾದ್ಯಂತ ಬೀದಿಗಿಳಿದು ಮಹಿಳೆಯ ಪ್ರತಿ ಭಟಿಸಿ ದರು. ಈ ಪ್ರತಿಭಟನೆಯನ್ನು ರೈಸಿ ಆಡಳಿತವು ನಿರ್ದಯವಾಗಿ ಹತ್ತಿಕ್ಕಿತು. ಹಲವರು ಪ್ರಾಣ ಕಳೆದುಕೊಂಡರು. ಜಾಗತಿಕವಾಗಿಯೂ ರೈಸಿ ವಿರುದ್ಧ ಖಂಡನೆ ವ್ಯಕ್ತವಾಯಿತು.

ಚಿನ್ನದ ಬೆಲೆಯಲ್ಲಿ ಶೇ. 1 ಏರಿಕೆ:ಬೆಳ್ಳಿಯ ಬೆಲೆ 11 ವರ್ಷ ಗರಿಷ್ಠ
ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಇತರರ ಸಾವಿನಿಂದ ಕಚ್ಚಾ ತೈಲ ಮತ್ತು ಚಿನ್ನದ ಬೆಲೆ ಸೋಮವಾರ ಏರಿಕೆಯಾಗಿದೆ. ಒಂದು ಔನ್ಸ್‌ (28 ಗ್ರಾಂ) ಚಿನ್ನಕ್ಕೆ 2,03,118 ರೂ. ಬೆಲೆಯಿತ್ತು. ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವಿನ ಹೋರಾಟ, ಇರಾನ್‌ ಅಧ್ಯಕ್ಷರ ಸಾವಿನ ಘಟನೆ ಬಳಿಕ ಶೇ.1ರಷ್ಟು ಬೆಲೆ ಏರಿಕೆ ಕಂಡ ಚಿನ್ನ, ಈಗ ಪ್ರತೀ ಔನ್ಸ್‌ಗೆ 204072 ರೂ. ಆಗಿದೆ. ಬೆಳ್ಳಿಯ ಬೆಲೆಯಲ್ಲಿಯೂ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದ್ದು. ಶೇ. 13ರಷ್ಟು ಏರಿಕೆಯಾಗಿದೆ. ಇದು 11 ವರ್ಷಗಳ ಗರಿಷ್ಠಕ್ಕೆ ಏರಿಕೆಯಾಗಿದೆ.

ಕೈಸುಡಲಿದೆಯೇ ಕಚ್ಚಾ ತೈಲ ಬೆಲೆ?
ಇರಾನ್‌ನನಲ್ಲಿ ಉಂಟಾಗಿರುವ ಬೆಳವಣಿಗೆ ಯಿಂದ ಕಚ್ಚಾ ತೈಲದ ಬೆಲೆಯಲ್ಲಿಯೂ ಏರಿಕೆಯಾಗಿದೆ. ಬ್ರೆಂಟ್‌ ಕಚ್ಚಾ ತೈಲ ಬೆಲೆಯಲ್ಲಿ ಪ್ರತೀ ಬ್ಯಾರೆಲ್‌ಗೆ ಶೇ.0.5 ಹೆಚ್ಚಾಗಿದೆ. ಅಂದರೆ ಬೆಲೆ ಏರಿಕೆ ಬಳಿಕ ಪ್ರತೀ ಬ್ಯಾರೆಲ್‌ಗೆ 84.39 ಅಮೆರಿಕನ್‌ ಡಾಲರ್‌ಗೆ ತಲುಪಿದೆ. ಮೇ 10ರಂದು ಪ್ರತೀ ಬ್ಯಾರೆಲ್‌ಗೆ 84.39 ಅಮೆರಿಕನ್‌ ಡಾಲರ್‌ಗೆ ಏರಿಕೆಯಾಗಿತ್ತು

ರೈಸಿ ಆಡಳಿತದಲ್ಲಿ ಇರಾನ್‌, ಭಾರತ ಸಂಬಂಧ ವೃದ್ಧಿ!
ಇರಾನ್‌ ಅಧ್ಯಕ್ಷರ ಸಾವು ಭಾರತಕ್ಕೆ ಹಲವು ರೀತಿ ಪರಿಣಾಮ ಬೀರಲಿದೆ ಎಂಬ ಚರ್ಚೆ ನಡೆಯುತ್ತಿದೆ. ಇತ್ತೀ ಚಿನ ವರ್ಷಗಳಲ್ಲಿ ರೈಸಿ ಅಧ್ಯಕ್ಷತೆಯಲ್ಲಿ ಭಾರತವು ಇರಾನ್‌ ನೊಂದಿಗೆ ಉತ್ತಮ ವ್ಯಾಪಾರ- ವ್ಯವಹಾರ ಸಂಬಂಧ ಹೊಂದಿತ್ತು. ಚಾಬಹಾರ್‌ ಬಂದರು ಒಪ್ಪಂದ, ನಿರ್ಬಂಧದ ಹೊರತಾಗಿಯೂ ತೈಲ ಮಾರಾಟ ಸೇರಿದಂತೆ ಅನೇಕ ವಿಷಯಗಳಲ್ಲಿ ಇರಾನ್‌ ಮತ್ತು ಭಾರತದ ನಡುವೆ ಸಹಕಾರ ಏರ್ಪಟ್ಟಿತ್ತು. ರೈಸಿ ಸಾವಿನಿಂದ ಭಾರತ-ಇರಾನ್‌ ಸಂಬಂಧ ನಡುವೆ ಅಂಥ ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲ.

ಚಾಬಹಾರ್‌ ಒಪ್ಪಂದ ಏರ್ಪಟ್ಟಿದೆ. ವ್ಯಾಪಾರ ವಹಿವಾಟು ದೃಷ್ಟಿಯಿಂದ ಇದು ಭಾರತಕ್ಕೆ ಹೆಚ್ಚು ಅನುಕೂಲ ಕಲ್ಪಿಸಲಿದೆ.

ಇರಾನ್‌ 2022-23ರಲ್ಲಿ ದ್ವಿಪಕ್ಷಿಯ ವ್ಯವಹಾರದಲ್ಲಿ ಸುಮಾರು 1.94 ಲಕ್ಷ ಕೋಟಿ ರೂಪಾಯಿಗಳಷ್ಟು ವ್ಯಾಪಾರ ಮಾಡಿದೆ.

ಇಂಟರ್‌ನ್ಯಾಶನಲ್‌ ನಾರ್ಥ್-ಸೌಥ್‌ ಟ್ರಾನ್ಸ್‌ ಪೋರ್ಟ್‌ ಕಾರಿಡಾರ್‌ನ ಮೂಲಕ ಆರ್ಥಿಕ ಸಂಬಂಧಗಳ ವೃದ್ಧಿಗಾಗಿ ಇರಾನ್‌, ಭಾರತ ಹಾಗೂ ರಷ್ಯಾ ಒಪ್ಪಂದ ಮಾಡಿಕೊಂಡಿವೆ.
ಭಾರತಕ್ಕೆ ಇರಾನ್‌ ಒಂದು ಪ್ರಮುಖ ಕಚ್ಚಾ ತೈಲ ರಫ್ತುದಾರನಾಗಿದೆ.

ಪಾಕಿಸ್ಥಾನ ಮತ್ತು ಭಾರತದ ಸಂಬಂಧಗಳ ಬಗ್ಗೆ ಇರಾನ್‌ ಇಂದಿಗೂ ತಟಸ್ಥ ನೀತಿ ಅನುಸರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next