Advertisement

Bamboo shoot: ಬಿದಿರಿನ ಚಿಗುರಿನ ಆರೋಗ್ಯ ಮಹತ್ವ-ಮಲೆನಾಡಿನ ನೆಚ್ಚಿನ ಖಾದ್ಯ!

06:39 PM Jul 23, 2024 | ಕಾವ್ಯಶ್ರೀ |

ಬಿದಿರು ಕಳಲೆ ಅಥವಾ ಬಿದಿರಿನ ಚಿಗುರನ್ನು ಮಳೆಗಾಲ, ಆಟಿ ಸಮಯದಲ್ಲಿ ಮಾತ್ರ ಸೇವಿಸಲಾಗುತ್ತದೆ. ಇದನ್ನು ಆಹಾರದಲ್ಲಿ ಸೇರಿಸುವುದರಿಂದ ನಾವು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಕರಾವಳಿ ಭಾಗದಲ್ಲಿ ಇದನ್ನು ಕಣಿಲೆ ಎಂದು ಕರೆಯಲಾಗುತ್ತದೆ.

Advertisement

ಎಳೆಯ ಬಿದಿರಿನ ಚಿಗುರಿನಲ್ಲಿ ಪ್ರೋಟೀನ್‌, ಕಾರ್ಬೋಹೈಡ್ರೇಟ್‌, ಫೈಬರ್ ಮತ್ತು ಖನಿಜಗಳು ಹೆಚ್ಚಾಗಿರುತ್ತವೆ. ಹಾಗಾಗಿ ಕಳಲೆ ದೇಹದ ಆರೋಗ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದರಲ್ಲಿರುವ ಔಷಧೀಯ ಗುಣ, ಆರೋಗ್ಯಕರ ಅಂಶ ದೇಹಕ್ಕೆ ಅತ್ಯುತ್ತಮ ಪೋಷಣೆ ನೀಡುತ್ತದೆ. ಕಳಲೆ ಉಪಯೋಗಿಸಿ ವಿವಿಧ ಖಾದ್ಯಗಳನ್ನು ತಯಾರಿಸಿ ಸೇವಿಸಲಾಗುತ್ತದೆ.

ಆಟಿ ತಿಂಗಳಿನಲ್ಲಿ, ಮಳೆಗಾಲದಲ್ಲಿ ಕಳಲೆಯನ್ನು ಒಮ್ಮೆಯಾದರೂ ಸೇವಿಸಬೇಕು ಎಂದು ಹಿರಿಯರು ಹೇಳುವುದನ್ನು ಕೇಳಿರುತ್ತೇವೆ. ಮಳೆಗಾಲದಲ್ಲಿ ಇದನ್ನು ತಿಂದರೆ ಒಳ್ಳೆಯದು. ಇದು ನಮ್ಮ ಹಿರಿಯರಿಂದ ಬಂದ ಆಹಾರ ಪದ್ಧತಿ.

ಕಳಲೆಯಲ್ಲಿರುವ ಫೀನಾಲಿಕ್ ಕಣಗಳು ಕ್ಯಾನ್ಸರ್ ವಿರೋಧಿ ಗುಣ ಹೊಂದಿದೆ. ನಮ್ಮ ದೇಹವನ್ನು ವೈರಸ್‌ಗಳ ವಿರುದ್ಧ ಹೋರಾಡಲು ಕೂಡಾ ಸಹಾಯ ಮಾಡುತ್ತದೆ. ಇತರ ಆರೋಗ್ಯಕರ ಲಾಭಗಳು ಏನೆಂಬುದು ತಿಳಿದುಕೊಳ್ಳೋಣ ..

Advertisement

ಕ್ಯಾನ್ಸರ್ ನಿವಾರಣೆಗೆ:

ಕಳಲೆ ಅಥವಾ ಬಿದಿರಿನ ಚಿಗುರಿನಲ್ಲಿ ಫಿನಾಲಿಕ್ ಎನ್ನುವ ಸಂಯುಕ್ತಗಳಿವೆ. ಇದು ಉತ್ಕರ್ಷಣ ನಿರೋಧಕ ಸ್ವತಂತ್ರ ರಾಡಿಕಲ್ಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಆಂಟಿ ವೈರಲ್ ಗುಣಲಕ್ಷಣಗಳನ್ನು ಒಳಗೊಂಡಿರುವುದರಿಂದ ಕ್ಯಾನ್ಸರ್ ನಂತಹ ಕಣಗಳನ್ನು ನಾಶ ಮಾಡುತ್ತದೆ.

ಕೊಲೆಸ್ಟ್ರಾಲ್ ನಿಯಂತ್ರಣ:

ಕಳಲೆ ಅಥವಾ ಬಿದಿರಿನ ಚಿಗುರು ತಿನ್ನುವುದರಿಂದ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ದೇಹಕ್ಕೆ ಅಗತ್ಯವಿಲ್ಲದ ಕೆಟ್ಟ ಕೊಲೆಸ್ಟ್ರಾಲ್ ಕರಗಿಸಲು ಬಿದಿರಿನ ಚಿಗುರು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯಕ್ಕೆ:

ಕಳಲೆ ಅಥವಾ ಬಿದಿರಿನ ಚಿಗುರು  ಫೈಟೊಸ್ಟೆರಾಲ್‌ಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ ಎಂಬ ಅಂಶಗಳು ಹೆಚ್ಚಾಗಿರುತ್ತದೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಹೃದಯ ಸಮಸ್ಯೆ ಇರುವವರಿಗೆ ಅತ್ಯುತ್ತಮವಾದ ಆಹಾರ. ಕೆಟ್ಟ ಕೊಲೆಸ್ಟ್ರಾಲ್ ವಿರುದ್ಧ ಹೋರಾಡುವುದರ ಜೊತೆಗೆ ರಕ್ತದ ಸ್ಥಿತಿ ಸಮತೋಲನದಲ್ಲಿ ಇರುವಂತೆ ಮಾಡುವುದು. ಹೃದಯಕ್ಕೆ ಸಂಬಂಧಿಸಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸಲು:

ಕಳಲೆ ಅಥವಾ ಕಣಿಲೆಯಲ್ಲಿ ಜೀವಸತ್ವಗಳು ಮತ್ತು ಖನಿಜಗಳ ಅಂಶ ಹೆಚ್ಚಾಗಿರುತ್ತದೆ. ಇದು ರೋಗ‌ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ವೈರಸ್, ಬ್ಯಾಕ್ಟೀರಿಯಾ ಮತ್ತು ಸೋಂಕುಗಳು ನಮ್ಮ ದೇಹಕ್ಕೆ  ತಗುಲದಂತೆ ರಕ್ಷಣೆ ನೀಡುತ್ತದೆ. ಹಾಗಾಗಿ ಮಳೆಗಾಲದಲ್ಲಿ ಇದನ್ನು ತಪ್ಪದೇ ಸೇವಿಸಬೇಕು ಎಂದು ಹಿರಿಯರು ಹೇಳುವುದು ಎಂದು ಹೇಳಲಾಗುತ್ತದೆ.

ಮೂಳೆಗಳ ಆರೋಕ್ಯಕ್ಕೆ:

ಎಳೆ ಬಿದಿರಿನ ಚಿಗುರಿನಲ್ಲಿ ಪೊಟ್ಯಾಶಿಯಂ ಮತ್ತು ರಂಜಕ ಅಂಶ ಹೆಚ್ಚಾಗಿರುತ್ತದೆ. ಇದು ಮೂಳೆಗಳನ್ನು ಮತ್ತು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಪೊಟ್ಯಾಶಿಯಂ ಹೃದಯ ಬಡಿತ ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಎರಡೂ ಘಟಕಗಳು ಒಟ್ಟಾಗಿ ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳಲು ಮತ್ತು ಸ್ನಾಯುವಿಗೆ ಬಲ ತುಂಬಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ:

ಎಳೆ ಬಿದಿರಿನ ಚಿಗುರು ಜೀರ್ಣಕ್ರಿಯೆಗೆ ಒಳ್ಳೆಯದು. ಮಳೆಗಾಲದಲ್ಲಿ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಆದ್ದರಿಂದ ಕಣಿಲೆ ಜೀರ್ಣಕ್ರಿಯೆ ಚೆನ್ನಾಗಿ ನಡೆಯಲು ಸಹಕಾರಿಯಾಗಿದೆ. ಇದನ್ನು ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ತಡೆಗಟ್ಟಬಹುದು.

ಗಮನದಲ್ಲಿರಿಸಬೇಕಾದ ವಿಷಯ: ಕಣಿಲೆ ತಿನ್ನುವಾಗ ಎಚ್ಚರ ವಹಿಸಬೇಕಾಗಿರುವುದು ಅಗತ್ಯ. ಇದು ಒಂದು ಬಗೆಯ ವಿಷದ ರೂಪ. ಇದನ್ನು ಅಡುಗೆಗೆ ಬಳಸುವ ಮುನ್ನ  ಕುದಿಯುವ ನೀರಿನಲ್ಲಿ ಹಲವಾರು ಬಾರಿ ಕುದಿಸಿ, ಸ್ವಚ್ಛ ಮಾಡಬೇಕು. ಹಾಗೆ ಮಾಡಿದರೆ ಮಾತ್ರ ಅದರಲ್ಲಿರುವ ಅಂಶ ಸಂಪೂರ್ಣ ನಾಶವಾಗುತ್ತದೆ. ನಂತರ ಇದನ್ನು ಅಡುಗೆಯಲ್ಲಿ ಬಳಸಬಹುದು.

ಅಥವಾ ಕಣಿಲೆ ತಿನ್ನುವ ಮೊದಲು 3 ದಿನ ಅದನ್ನು ನೀರಿನಲ್ಲಿ ಹಾಕಿ ಹುಳಿ ಬರಿಸಬೇಕು. ಪ್ರತಿದಿನ ಅದರ ನೀರು ಬದಲಾಯಿಸುತ್ತಿರಬೇಕು. 3 ದಿನಗಳ ಬಳಿಕ ಆ ನೀರಿನಿಂದ ಸ್ವಚ್ಛಗೊಳಿಸಿ ಅಡುಗೆಗೆ ಬಳಸಬಹುದು.

ಇಲ್ಲದ್ದಿದ್ದರೆ ವಾಂತಿ-ಬೇಧಿ, ಹೊಟ್ಟೆ ಉಬ್ಬುವಿಕೆಯಂತಹ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ಇದನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿದಿರಬೇಕಾಗಿರುವುದು ಅತೀ ಅಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next