Advertisement

Paris Olympics; ಇಂದು ಅಧಿಕೃತ ಚಾಲನೆ: ಹಲವು ವಿಶೇಷಗಳ ವಿವರ ಇಲ್ಲಿದೆ

11:47 PM Jul 25, 2024 | Team Udayavani |

ಪ್ಯಾರಿಸ್‌: ಜಗತ್ತಿನ ಅತಿ ದೊಡ್ಡ ಕ್ರೀಡಾಹಬ್ಬವಾದ ಒಲಿಂಪಿಕ್ಸ್‌ಗೆ ಕ್ಷಣಗಣನೆ ಆರಂಭವಾಗಿದೆ. 33ನೇ ಬೇಸಗೆ ಒಲಿಂಪಿಕ್ಸ್‌ಗೆ ಫ್ರಾನ್ಸ್‌ನ ಪ್ಯಾರಿಸ್‌ ಆತಿಥ್ಯ ವಹಿಸಿದ್ದು, ಶುಕ್ರ ವಾರ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಕಳೆದ ಒಲಿಂಪಿಕ್ಸ್‌ ಕೋವಿಡ್‌ ಸಾಂಕ್ರಾಮಿಕದ ಕರಿನೆರಳಿನಲ್ಲಿ ನಡೆದಿತ್ತು. ಆದರೆ ಈ ಬಾರಿ ಯಾವುದೇ ಭಯದ ವಾತಾವರಣವಿಲ್ಲದೇ ಕ್ರೀಡಾ ಜಾತ್ರೆಗೆ ವೇದಿಕೆ ಸಿದ್ಧಗೊಂಡಿದೆ.

Advertisement

3ನೇ ಬಾರಿ ಒಲಿಂಪಿಕ್ಸ್‌ ಕ್ರೀಡಾ ಕೂಟವನ್ನು ಆಯೋಜಿಸುತ್ತಿರುವ ಪ್ಯಾರಿಸ್‌ ಸಂಪೂರ್ಣವಾಗಿ ಅಲಂಕೃತ ಗೊಂಡಿದೆ. 16 ದಿನಗಳ ಕಾಲ ಕ್ರೀಡಾ ಕೂಟವನ್ನು ಆಯೋಜಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಇದೇ ಮೊದಲ ಬಾರಿ ಒಲಿಂಪಿಕ್ಸ್‌ ಇತಿಹಾಸ ದಲ್ಲಿ ಸಮಾನ ಪ್ರಮಾಣದಲ್ಲಿ ಪುರುಷ ಹಾಗೂ ಮಹಿಳಾ ಆ್ಯತ್ಲೀಟ್‌ಗಳು ಭಾಗಿಯಾಗುತ್ತಿದ್ದು, ಒಟ್ಟು 10,500 ಮಂದಿ ಹಾಗೂ ಸಹಾಯಕ ಸಿಬಂದಿಗೆ ವ್ಯವಸ್ಥೆಗಳನ್ನು ಮಾಡಲಾಗಿದೆ.

ಭಾರತದ ಮೇಲೆ ಹೆಚ್ಚಿದ ನಿರೀಕ್ಷೆ
ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತದಿಂದ 117 ಮಂದಿ ಆ್ಯತ್ಲೀಟ್‌ಗಳ ತಂಡ ಭಾಗಿಯಾಗುತ್ತಿದ್ದಾರೆ. ಕಳೆದ ಒಲಿಂಪಿಕ್ಸ್‌ನಲ್ಲಿ 7 ಪದಕ ಗೆದ್ದಿದ್ದ ಭಾರತ ಈ ಬಾರಿ ಇದನ್ನು ಎರಡಂಕಿಗೆ ಏರಿಸಬಹುದು ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ಭಾರಿ ಬಿಗಿಭದ್ರತೆ
ಒಲಿಂಪಿಕ್ಸ್‌ ವೇಳೆಯಲ್ಲಿ ಸಂಭಾವ್ಯ ದಾಳಿಗಳು ನಡೆಯುವ ಸಾಧ್ಯತೆ ಇರುವುದರಿಂದ ಬಿಗಿಭದ್ರತೆ ಒದಗಿಸಲಾಗಿದೆ. ಸೈಬರ್‌ ದಾಳಿಯ ಶಂಕೆಯನ್ನು ವ್ಯಕ್ತಪಡಿಸಲಾಗಿದ್ದು, ಇದನ್ನು ತಡೆಗಟ್ಟಲು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಉದ್ಘಾಟನಾ ಕಾರ್ಯಕ್ರಮವೊಂದಕ್ಕೇ 35000 ಮಂದಿ ಗುಪ್ತಚರರನ್ನು ನೇಮಕ ಮಾಡಲಾಗಿದೆ.

Advertisement

3ನೇ ಬಾರಿಗೆ ಪ್ಯಾರಿಸ್‌ಗೆ ಆತಿಥ್ಯ
ಈ ಬಾರಿಯ ಒಲಿಂಪಿಕ್ಸ್‌ ಆವೃತ್ತಿ, ಫ್ರಾನ್ಸ್‌ನ ಪ್ಯಾರಿಸ್‌ ಆತಿಥ್ಯ ವಹಿಸಿಕೊ ಳ್ಳುತ್ತಿರುವ 3ನೇ ಒಲಿಂಪಿಕ್ಸ್‌ ಆಗಿದೆ. ಇದಕ್ಕೂ ಮುನ್ನ 1900 ಮತ್ತು 1924ರ ಒಲಿಂಪಿಕ್ಸ್‌ ಪ್ಯಾರಿಸ್‌ನಲ್ಲೇ ನಡೆದಿತ್ತು.

ಸಿಂಧು, ಶರತ್‌ ಧ್ವಜಧಾರಿಗಳು
ಪ್ಯಾರಿಸ್‌ ಒಲಿಂಪಿಕ್ಸ್‌ ಆರಂಭೋತ್ಸವ ನಡೆಯುವಾಗ ಪಥಸಂಚಲನದ ವೇಳೆ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಮತ್ತು ಟೇಬಲ್‌ ಟೆನಿಸ್‌ ಹಿರಿಯ ಆಟಗಾರ, ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ 7 ಚಿನ್ನದ ಪದಕಗಳನ್ನು ಗೆದ್ದಿರುವ ಶರತ್‌ ಕಮಲ್‌, ಭಾರತದ ಧ್ವಜಧಾರಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.

ನದಿ ಮೇಲೆ ಉದ್ಘಾಟನೆ
ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ ಉದ್ಘಾಟನ ಕಾರ್ಯಕ್ರಮವನ್ನು ನದಿಯ ಮೇಲೆ ಆಯೋಜಿಸಲಾಗಿದೆ. ಕ್ರೀಡಾಂಗಣದಲ್ಲೂ ಕಾರ್ಯಕ್ರಮಗಳಿದ್ದರೂ ಸಹ ಪ್ರಮುಖ ಕಾರ್ಯಕ್ರಮಗಳನ್ನು ನದಿಯ ಮೇಲೆ ಆಯೋಜಿಸಲಾಗಿದೆ.

ಇದರಲ್ಲಿ 1 ಸಾವಿರ ಆ್ಯತ್ಲೀಟ್‌ಗಳು ಭಾಗಿಯಾಗಲಿದ್ದು, ಇದಕ್ಕಾಗಿ 100ಕ್ಕೂ ಹೆಚ್ಚು ದೋಣಿಗಳನ್ನು ನಿಯೋಜನೆ ಮಾಡಲಾಗಿದೆ. ಆ್ಯತ್ಲೀಟ್‌ಗಳ ಪರೇಡ್‌ ದೋಣಿಗಳಲ್ಲೇ ನಡೆಯಲಿದೆ. ಅಸ್ಟರ್‌ಲಿಡ್ಜ್ ಸೇತುವೆಯಿಂದ ಆರಂಭವಾಗುವ ಪರೇಡ್‌ 6 ಕಿ.ಮೀ. ದೂರ ಸಾಗಲಿದ್ದು, ಐಫೆಲ್‌ ಟವರ್‌ ಬಳಿ ಅಂತ್ಯವಾಗಲಿದೆ.

ಗ್ರೀಸ್‌ಗೆ ಮೊದಲ ಆದ್ಯತೆ
ಒಲಿಂಪಿಕ್ಸ್‌ ವೇಳೆ ನಡೆಯುವ ಪರೇಡ್‌ನ‌ಲ್ಲಿ ಗ್ರೀಸ್‌ ದೇಶಕ್ಕೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ಆಧುನಿಕ ಒಲಿಂಪಿಕ್ಸ್‌ ಕ್ರೀಡೆಗಳು ಮೊದಲು ಗ್ರೀಸ್‌ನಲ್ಲಿ ಆರಂಭವಾದ ಕಾರಣ ಗೌರವಾರ್ಥವಾಗಿ ಗ್ರೀಸ್‌ಗೆ ಆದ್ಯತೆ ನೀಡಲಾಗುತ್ತದೆ. ಉಳಿದಂತೆ ಆಯಾ ದೇಶಗಳ ಲಿಪಿಗಳನ್ನು ಆಧರಿಸಿ ವರ್ಣಮಾಲೆಯ ಆಧಾರದಲ್ಲಿ ಇತರ ದೇಶಗಳು ಭಾಗಿಯಾಗಲಿವೆ.

ಭಾರತಕ್ಕೆ ಈ ಬಾರಿ 84ನೇ ಸ್ಥಾನ
ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ ತಂಡ 84ನೇ ರಾಷ್ಟ್ರವಾಗಿ ಈ ಬಾರಿ ಕಾಣಿಸಿಕೊಳ್ಳಲಿದೆ. ಆತಿಥೇಯ ಪ್ಯಾರಿಸ್‌ ಕೊನೆಯ ರಾಷ್ಟ್ರ (205)ವಾಗಿರಲಿದ್ದು, ಅಮೆರಿಕದ ಲಾಸ್‌ ಏಂಜಲೀಸ್‌ ಮುಂದಿನ ಒಲಿಂಪಿಕ್ಸ್‌ ಆಯೋಜಿಸುತ್ತಿರುವುದರಿಂದ ಅಮೆರಿಕ 204ನೇ ರಾಷ್ಟ್ರವಾಗಿರಲಿದೆ. 2032ರ ಒಲಿಂಪಿಕ್ಸ್‌ ಆಯೋಜಿಸುತ್ತಿರುವ ಆಸ್ಟ್ರೇಲಿಯಾ 203ನೇ ದೇಶವಾಗಿರಲಿದೆ.

5 ಲಕ್ಷ ಜನ ಭಾಗಿ
ಉದ್ಘಾಟನ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ಸುಮಾರು 5 ಲಕ್ಷ ಮಂದಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ನದಿಯ ಇಕ್ಕೆಲಗಳಲ್ಲಿ, ಅಕ್ಕಪಕ್ಕದ ಅಪಾರ್ಟ್‌ಮೆಂಟ್‌ ಮತ್ತು ಕಟ್ಟಡಗಳ ಬಾಲ್ಕನಿಯಿಂದ ಜನರು ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ.

3,000 ಕಲಾವಿದರು
ನದಿಯ ಮೇಲೆಯೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸುಮಾರು 3,000 ಮಂದಿ ಕಲಾವಿದರು ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಒಟ್ಟು 12 ವಿಭಾಗಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಭಾಗಿಸಲಾಗಿದೆ. ಫ್ರೆಂಚ್‌ ಸಂಗೀತ ಸೇರಿದಂತೆ ಶಾಸ್ತ್ರೀಯ, ರ್ಯಾಪ್‌ ಮತ್ತು ಎಲೆಕ್ಟ್ರಾನಿಕ್‌ ಮ್ಯೂಸಿಕ್‌ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಫ್ರಾನ್ಸ್‌ ಕಾಲಮಾನದಂತೆ ಸಾಯಂಕಾಲ 5.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಸೂರ್ಯಾಸ್ತವನ್ನು ಹಿನ್ನಲೆಯಾಗಿ ಬಳಸಿಕೊಂಡು ಈ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ.

ಜಿಯೋ ಸಿನಿಮಾದಲ್ಲಿ ನೇರಪ್ರಸಾರ
ಪ್ಯಾರಿಸ್‌ ಒಲಿಂಪಿಕ್ಸ್‌ನ ಅಧಿಕೃತ ಪ್ರಸಾರ ಮತ್ತು ಡಿಜಿಟಲ್‌ ಪಾಲುದಾರರಾಗಿರುವ ವಯಾಕಾಮ್ 18 ಜಿಯೋ ಸಿನಿಮಾ ಮೂಲಕ ಒಲಿಂಪಿಕ್ಸ್‌ ಸ್ಪರ್ಧೆಯನ್ನು ನೇರಪ್ರಸಾರ ಮಾಡುತ್ತಿದೆ. ಇದರೊಂದಿಗೆ ಸ್ಪೋಟ್ಸ್‌-18 ಚಾನಲ್‌ನಲ್ಲೂ ಇದು ನೇರಪ್ರಸಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next